ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆಗೆ ಬನ್ನಿ: ಒಕ್ಕಲಿಗ ಸಂಘ ಮನವಿ
ಬೆಂಗಳೂರು, ಅಕ್ಟೋಬರ್ 21: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 11ರಂದು ಜರುಗಲಿರುವ ಬೃಹತ್ ಸಮಾರಂಭಕ್ಕೆ ಒಕ್ಕಲಿಗ ಸಮುದಾಯದ ಮುಖಂಡರು, ವಿವಿಧ ಸಂಘಟನೆಗಳು ಸೇರಿದಂತೆ ಸಮಾಜ ಎಲ್ಲರೂ, ನಾಡಿನ ಸಮಸ್ತರು ಆಗಮಿಸುವಂತೆ ರಾಜ್ಯ ಒಕ್ಕಲಿಗರ ಸಂಘ ಮನವಿ ಮಾಡಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣಗೊಂಡ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರ ಬೃಹತ್ ಕಂಚಿನ ಪ್ರತಿಮೆ ನಿರ್ಮಿಸಲಾಗಿದೆ. ವಿಶಾಲವಾದ ಥೀಮ್ ಪಾರ್ಕ್ ಜೊತೆಗೆ ವಿಮಾನ ನಿಲ್ದಾಣದ ಟರ್ಮಿನಲ್ 2 ಸಹ ಉದ್ಘಾಟನೆಗೆ ಸಜ್ಜಾಗಿದೆ. ಈ ಮೂರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ 11ರಂದು ಉದ್ಘಾಟಿಸಲಿದ್ದಾರೆ.
ಹೀಗಾಗಿ ವಿಮಾನ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಬೃಹತ್ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಒಕ್ಕಲಿಗ ಸಮುದಾಯದ ಮುಖಂಡರು, ವಿವಿಧ ಸಂಘಟನೆಗಳು ಸೇರಿದಂತೆ ಸಮಾಜ ಎಲ್ಲರೂ ನಾಡಿನ ಸಮಸ್ತರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ರಾಜ್ಯ ಒಕ್ಕಲಿಗರ ಸಂಘ ತಿಳಿಸಿದೆ.
ಈ ಕುರಿತು ಸಂಘವು ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ ಸಂಘದ ಅಧ್ಯಕ್ಷ ಮತ್ತು ಶಾಸಕ ಸಿ.ಎನ್. ಬಾಲಕೃಷ್ಣ ಅವರು, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವುದು ಎಲ್ಲರೂ ಹೆಮ್ಮೆ ಪಡುವ ಸಂಗತಿ. ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಗೌರವ ಸಲ್ಲಿಸುವ ಸದಾವಕಾಶ ದೊರೆತಿದೆ ಎಂದು ಅವರು ತಿಳಿಸಿದರು.

ಬೆಂಗಳೂರು-ಕೆಂಪೇಗೌಡ ಕೀರ್ತಿಗೆ ಇನ್ನಷ್ಟು ಮೆರಗು
ಅಂದು ಪ್ರಧಾನಮಂತ್ರಿಗಳು ನರೇಂದ್ರ ಮೋದಿಯರು ಕೆಂಪೇಗೌಡರ ಭವ್ಯ ಪ್ರತಿಮೆಯನ್ನು ಲೋಕಾರ್ಪಣೆ ಮಾಡುತ್ತಿರುವುದು ಸಮುದಾಯ ಸೇರಿದಂತೆ ಎಲ್ಲರಲ್ಲಿ ಸಂತಸ ಮೂಡಿಸಿದೆ. ಈ ಮೂಲಕ ವಿಶ್ವ ಮನ್ನಣೆಗೆ ಪಾತ್ರವಾಗಿರುವ ಬೆಂಗಳೂರು ಮತ್ತು ಕೆಂಪೇಗೌಡರ ಕೀರ್ತಿಗೆ ಮೆರುಗು ನೀಡಲಾಗುತ್ತಿದೆ. ಆದ್ದರಿಂದ ಇಂತಹ ಮಹತ್ತರ ಸಮಾರಂಭಕ್ಕೆ ನಾಡಿನ ಎಲ್ಲೆಡೆಯಿಂದ ಆಗಮಿಸಿ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣ ಸಮುಚ್ಚಯ ಹಾಗೂ ಇಲ್ಲಿನ ಬೃಹತ್ ಕೆಂಪೇಗೌಡರ ಕಂಚಿನ ಪ್ರತಿಮೆ ಇನ್ನು ಮುಂದೆ ಪ್ರಮುಖ ಆಕರ್ಷಣೆಯ ಕೇಂದ್ರವಾಗಲಿದೆ. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅವರಿಗಿದ್ದ ದೂರದೃಷ್ಟಿಯನ್ನು ಗೌರವಿಸಿ ನಿರ್ಮಿಸಲಾದ 108 ಅಡಿ ಎತ್ತರದ ಪ್ರತಿಮೆಗೆ 'ಪ್ರಗತಿ ಪ್ರತಿಮೆ' ಎಂದು ನಾಮಕರಣ ಮಾಡಲಾಗಿದೆ.
ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆ, ಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ಪುಣ್ಯಪುರುಷರ ಸಮಾಧಿ ಸ್ಥಳಗಳಿಂದ ಪವಿತ್ರವಾದ ಮಣ್ಣನ್ನು ಸಂಗ್ರಹಿಸಿ ವಿಮಾನ ನಿಲ್ದಾಣ ಆವರಣದಲ್ಲಿ ಅಭಿವೃದ್ಧಿಪಡಿಸುತ್ತಿರುವ 23 ಎಕರೆ ವಿಶಾಲವಾದ ಕೆಂಪೇಗೌಡ ಥೀಮ್ ಪಾರ್ಕ್‌ನಲ್ಲಿ ಬಳಸಿಕೊಳ್ಳುವುದು ಒಳ್ಳೆಯ ಕಾರ್ಯ ಎಂದು ಅವರು ಶ್ಲಾಘಿಸಿದ್ದಾರೆ.












Click it and Unblock the Notifications