ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ್ ಸುಬ್ಬಾರೆಡ್ಡಿ ಆಯ್ಕೆ
ಬೆಂಗಳೂರು, ಡಿಸೆಂಬರ್ 20: ಭಾರಿ ಕುತೂಹಲ ಕೆರಳಿಸಿದ್ದ ಬೆಂಗಳೂರು ವಕೀಲರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಹಿರಿಯ ವಕೀಲ ವಿವೇಕ್ ರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅತ್ಯಂತ ಹಳೆಯ ಹಾಗೂ ಅತಿದೊಡ್ಡ ಸಂಘಗಳಲ್ಲಿ ಬೆಂಗಳೂರು ವಕೀಲರ ಸಂಘವು ಒಂದೆನಿಸಿದೆ.
ವಿವೇಕ್ ಅವರು 4,804 ಮತಗಳನ್ನು ಪಡೆದಿದ್ದರೆ ಸಮೀಪದ ಪ್ರತಿಸ್ಪರ್ಧಿ, ಎಎಬಿಯ ಹಾಲಿ ಅಧ್ಯಕ್ಷ ಎ ಪಿ ರಂಗನಾಥ ಅವರು 2,894 ಮತಗಳನ್ನು ಗಳಿಸಿದರು.
ಅಧ್ಯಕ್ಷ ಸ್ಥಾನದ ಉಳಿದ ಆಕಾಂಕ್ಷಿಗಳಾಗಿದ್ದ ಆರ್ ರಾಜಣ್ಣ ಅವರು 2545 ಮತಗಳನ್ನು ಹಾಗೂ ಮಾಜಿ ಅಧ್ಯಕ್ಷ ಎಚ್ ಸಿ ಶಿವರಾಮು ಅವರು 870 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಒಟ್ಟು 16,568 ಮತಗಳಲ್ಲಿ 11,131 ಮತಗಳು ಚಲಾವಣೆಯಾಗಿದ್ದವು. ಸಿಟಿ ಸಿವಿಲ್ ಕೋರ್ಟ್‌ನಿಂದ 6,151, ಹೈಕೋರ್ಟ್‌ನಿಂದ 2,046, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ 2,089, ಮೇಯೋ ಹಾಲ್ ಕೋರ್ಟ್‌ನಿಂದ 8,44 ಮತಗಳು ಚಲಾವಣೆಯಾಗಿದ್ದವು. ಭಾನುವಾರ ಸಂಜೆ ಐದು ಗಂಟೆಗೆ ಮತದಾನದ ಪ್ರಕ್ರಿಯೆ ಪೂರ್ಣಗೊಂಡು ರಾತ್ರಿ ಫಲಿತಾಂಶ ಪ್ರಕಟವಾಯಿತು.

ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಟಿ ಜಿ ರವಿ ಗೆಲುವು ಸಾಧಿಸಿದ್ದಾರೆ. ಹಾಲಿ ಪ್ರಧಾನ ಕಾರ್ಯದರ್ಶಿ ಎ ಎನ್ ಗಂಗಾಧರಯ್ಯ, ಹಾಲಿ ಖಜಾಂಚಿ ಶಿವಮೂರ್ತಿ, ದುರ್ಗಾ ಪ್ರಸಾದ್ ಎಚ್ ಆರ್, ಪ್ರವೀಣ್ ಗೌಡ ಎಚ್ ವಿ, ರಾಮಲಿಂಗ ಪಿ, ಶ್ರೀನಿವಾಸ ಮೂರ್ತಿ ಡಿ ಹಾಗೂ ವಿಶ್ವನಾಥ್ ಕೆ ಪಿ ಸೇರಿದಂತೆ 8 ಮಂದಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪೈಪೋಟಿ ನಡೆಸಿದ್ದರು. ಖಜಾಂಚಿ ಸ್ಥಾನಕ್ಕೆ ಒಟ್ಟು 10 ಮಂದಿ ಸ್ಪರ್ಧಿಸಿದ್ದು ಹರೀಶ ಎಂ ಟಿ ವಿಜಯಿಯಾಗಿದ್ದಾರೆ.
ಚುನಾವಣೆ ಪ್ರಕ್ರಿಯೆ ವಿವರ:
ಬೆಂಗಳೂರು ವಕೀಲರ ಸಂಘದ ಚುನಾವಣೆಗಾಗಿ ನಗರದ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಇಂದು ಬೆಳಿಗ್ಗೆ 10ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಸಂಜೆ 5ರವರೆಗೆ ಮತದಾನ ನಡೆಸಲಾಯಿತು.
ಒಟ್ಟು 16,568 ವಕೀಲ ಮತದಾರರಿಗೆ ಮತ ಚಲಾಯಿಸುವ ಹಕ್ಕು ಇದೆ. ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಭಾನುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12ರವರೆಗೆ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ಬಿಇಎಲ್ ಕಂಪೆನಿ ಪೂರೈಸುತ್ತಿದ್ದ ಮತಯಂತ್ರಗಳ ಬದಲು ಈ ಬಾರಿ ರಾಜ್ಯ ಚುನಾವಣಾ ಆಯೋಗದ ಇವಿಎಂಗಳನ್ನು ಮತದಾನ ಪ್ರಕ್ರಿಯೆಗೆ ಬಳಸಿಕೊಳ್ಳಲಾಗಿದೆ. ಕೋವಿಡ್ ಶಿಷ್ಟಾಚಾರಗಳ ಪ್ರಕಾರ ಮತದಾನ ನಡೆಯುತ್ತಿದೆ. ಜೊತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಆರು ರಿಟರ್ನಿಂಗ್ ಅಧಿಕಾರಿಗಳನ್ನು ಹೊಂದಿದ ಚುನಾವಣಾ ಸಮಿತಿ ಮತದಾನ ಪ್ರಕ್ರಿಯೆ ನೋಡಿಕೊಂಡಿದೆ. ಮುಖ್ಯ ಚುನಾವಣಾಧಿಕಾರಿಯಾಗಿ ಹಿರಿಯ ವಕೀಲ ಕೆ ಎನ್ ಫಣೀಂದ್ರ ಕರ್ತವ್ಯ ನಿರ್ವಹಿಸಿದರು.
ಹಾಲಿ ಅಧ್ಯಕ್ಷ ಎ.ಪಿ. ರಂಗನಾಥ್, ಮಾಜಿ ಅಧ್ಯಕ್ಷ ಎಚ್ ಸಿ ಶಿವರಾಮು, ವಿವೇಕ್ ಸುಬ್ಬಾರೆಡ್ಡಿ ಹಾಗೂ ರಾಜ್ಯ ವಕೀಲರ ಪರಿಷತ್ ಸದಸ್ಯ ಆರ್ ರಾಜಣ್ಣ ಅವರು ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಹಾಲಿ ಪ್ರಧಾನ ಕಾರ್ಯದರ್ಶಿ ಎ ಎನ್ ಗಂಗಾಧರಯ್ಯ, ಹಾಲಿ ಖಜಾಂಚಿ ಶಿವಮೂರ್ತಿ, ದುರ್ಗಾ ಪ್ರಸಾದ್ ಎಚ್ ಆರ್, ಪ್ರವೀಣ್ ಗೌಡ ಎಚ್ ವಿ, ರಾಮಲಿಂಗ ಪಿ, ರವಿ ಟಿ ಜಿ, ಶ್ರೀನಿವಾಸ ಮೂರ್ತಿ ಡಿ ಹಾಗೂ ವಿಶ್ವನಾಥ್ ಕೆ ಪಿ ಸೇರಿದಂತೆ 8 ಮಂದಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪೈಪೋಟಿ ನಡೆಸಿದ್ದರು.
Recommended Video
ಖಜಾಂಚಿ ಹುದ್ದೆಗೆ ಭದ್ರಾವತಿ ಸತೀಶ, ಚಂದ್ರಶೇಖರ್ ಎಂ ಎಚ್, ಗಿರೀಶ್ ಕುಮಾರ್ ಸಿ ಎಸ್, ಹರೀಶ ಎಂ ಟಿ, ಕುಮಾರ್ ಗೌಡ ಎಚ್ ಎನ್ ಸಿ, ಮಂಜುನಾಥ್ ಬಿ ಗೌಡ, ರಾಜಶೇಖರ್, ರಮೇಶ್ ಆರ್, ಸಂತೋಷ್ ಟಿ ಸಿ ಹಾಗೂ ವೇದಮೂರ್ತಿ ಎ ಸೇರಿದಂತೆ 10 ಮಂದಿ ಸ್ಪರ್ಧಿಸಿದ್ದರು.
ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಮೆಯೊ ಹಾಲ್ ಕೋರ್ಟ್ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಈ ನಾಲ್ಕು ಘಟಕಗಳಲ್ಲಿ ಸದಸ್ಯತ್ವ ಪಡೆದಿರುವ ವಕೀಲರು ನಿರ್ದಿಷ್ಟ ಘಟಕದ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನದ ಆಕಾಂಕ್ಷಿಗಳಿಗೆ ಎಲ್ಲಾ ಘಟಕದ ಸದಸ್ಯರು ಮತದಾನ ಮಾಡಿದರು. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)












Click it and Unblock the Notifications