VTU: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ : ಫೇಕ್ ಇಂಟರ್ನ್‌ಶಿಪ್ ಸರ್ಟಿಫಿಕೇಟ್‌ಗಳಿಗೆ ಬಿತ್ತು ಬ್ರೇಕ್
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿರುವ ಇಂಟರ್ನ್‌ಶಿಪ್ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆಗಳನ್ನು ಮತ್ತು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.ಈಗಾಗಲೇ 7ನೇ ಸೆಮಿಸ್ಟರ್‌ನ ಸುಮಾರು 81,000 ನೋಂದಾಯಿತ ವಿದ್ಯಾರ್ಥಿಗಳ ಪೈಕಿ, ಕೇವಲ 600 ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಇಂಟರ್ನ್‌ಶಿಪ್ ಖಚಿತವಾಗಿದೆ ಎಂದು ವಿವಿ ತಿಳಿಸಿದೆ.
ಹಿಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ನಕಲಿ ಇಂಟರ್ನ್‌ಶಿಪ್ ಪ್ರಮಾಣಪತ್ರಗಳನ್ನು ಸಲ್ಲಿಸುತ್ತಿದ್ದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿಟಿಯು, ಈ ಬಾರಿ ಪೋರ್ಟಲ್ ಮೂಲಕವೇ ಪ್ರಕ್ರಿಯೆ ನಡೆಸಿರುವುದು ವಿಶೇಷ.

ಈಗಾಗಲೇ ವಿಟಿಯು ಪೋರ್ಟಲ್ ಮೂಲಕ ಸುಮಾರು 42,000 ವಿದ್ಯಾರ್ಥಿಗಳು ಉಚಿತ ಇಂಟರ್ನ್‌ಶಿಪ್ ಪಡೆದಿದ್ದಾರೆ. ಸುಮಾರು 8,000 ವಿದ್ಯಾರ್ಥಿಗಳು ತಾವೇ ಸ್ವತಃ ಕಂಪನಿಗಳನ್ನು ಹುಡುಕಿ ಇಂಟರ್ನ್‌ಶಿಪ್ ಪಡೆದಿದ್ದು, ಅದಕ್ಕೆ ವಿವಿ ಅನುಮೋದನೆ ನೀಡಿದೆ.
ಕಠಿಣ ನಿಯಮಗಳು ಮತ್ತು ನಿಗಾ
ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಹೆಸರಿನಲ್ಲಿ ಕಾಲಹರಣ ಮಾಡುವುದನ್ನು ಅಥವಾ ಕೇವಲ ಆನ್‌ಲೈನ್ ಮೂಲಕ ಮುಗಿಸಲು ಪ್ರಯತ್ನಿಸುವುದನ್ನು ತಡೆಯಲು ವಿವಿ ಉಪಕುಲಪತಿ ವಿದ್ಯ್ಯಾಶಂಕರ್ ಎಸ್. ಅವರು ಕಠಿಣ ಕ್ರಮಗಳನ್ನು ಪ್ರಕಟಿಸಿದ್ದಾರೆ:
1. ದೈನಂದಿನ ಡೈರಿ (Daily Diary): ವಿದ್ಯಾರ್ಥಿಗಳು ಪ್ರತಿದಿನ ತಾವು ಏನು ಕಲಿತೆವು ಎಂಬುದನ್ನು ಡೈರಿಯಲ್ಲಿ ಬರೆಯುವುದು ಕಡ್ಡಾಯ. ಎಐ ಬಳಸಿ ವರದಿ ಬರೆಯುವುದನ್ನು ತಡೆಯಲು ಮತ್ತು ವಿದ್ಯಾರ್ಥಿಗಳ ಗಂಭೀರತೆಯನ್ನು ಪರೀಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ.
2. ಸ್ಕ್ವಾಡ್‌ಗಳ ನೇಮಕ: ಕಾಲೇಜುಗಳು ಲೆಕ್ಚರರ್‌ಗಳು ಅಥವಾ ತಪಾಸಣಾ ತಂಡಗಳನ್ನು ನೇಮಿಸಬೇಕು. ಇವರು ಕಂಪನಿಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯ ಮತ್ತು ವಿದ್ಯಾರ್ಥಿಗಳ ಹಾಜರಾತಿಯನ್ನು ಪರಿಶೀಲಿಸುತ್ತಾರೆ.
3. ಶಿಸ್ತು ಕ್ರಮ: ಉಚಿತ ಇಂಟರ್ನ್‌ಶಿಪ್ ಎಂದು ಹೇಳಿ ನಂತರ ವಿದ್ಯಾರ್ಥಿಗಳಿಂದ ಹಣ ಕೇಳುವ ಕಂಪನಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ವಿವಿ ಎಚ್ಚರಿಸಿದೆ.
ಪೋರ್ಟಲ್‌ನಲ್ಲಿ ಕೆಲವು ಕಂಪನಿಗಳು ಹಣ ಕೇಳುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಲಿಂಕ್ಡ್‌ಇನ್ ಮೂಲಕ ತಾವೇ ಇಂಟರ್ನ್‌ಶಿಪ್ ಹುಡುಕಿಕೊಂಡ ಕೆಲ ವಿದ್ಯಾರ್ಥಿಗಳು, ಇನ್ನೂ ಅನುಮೋದನೆ ಸಿಗದೆ ಆತಂಕದಲ್ಲಿದ್ದಾರೆ. ಒಟ್ಟಿನಲ್ಲಿ, ಈ ಬಾರಿ ವಿಟಿಯು ಇಂಟರ್ನ್‌ಶಿಪ್ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ಕಟ್ಟುನಿಟ್ಟುಗೊಳಿಸಲು ಎಲ್ಲ ಹಂತಗಳಲ್ಲೂ ಹದ್ದಿನ ಕಣ್ಣಿಟ್ಟಿದೆ.












Click it and Unblock the Notifications