Bengaluru: ಗುಂಡಿ ರಸ್ತೆ, ತೆರೆದ ಚರಂಡಿ; ಆದ್ರೂ ಕೋರಮಂಗಲದಲ್ಲಿ 70K ಬಾಡಿಗೆ: ಮಹಿಳೆಯ ಆಕ್ರೋಶದ ಪೋಸ್ಟ್ ಈಗ Viral
ಸಿಲಿಕಾನ್ ಸಿಟಿ, ಐಟಿ ಹಬ್ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಮನೆ ಬಾಡಿಗೆ ಗಗನಕ್ಕೇರುತ್ತಿದೆ. ಒಂದು ಕಡೆ ಆಕಾಶದೆತ್ತರದ ವಸತಿ ಸಮುಚ್ಚಯಗಳು ತಲೆ ಎತ್ತುತ್ತಿದ್ದರೆ, ಮತ್ತೊಂದೆಡೆ ರಸ್ತೆ ಗುಂಡಿ, ಟ್ರಾಫಿಕ್, ತೆರೆದ ಒಳಚರಂಡಿಗಳಂತಹ ಮೂಲಸೌಕರ್ಯಗಳ ಕೊರತೆ ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಇಂಥ ಕಳಪೆ ಮೂಲಸೌಕರ್ಯಗಳಿರುವ ಪ್ರದೇಶಗಳಲ್ಲಿ ಮನೆಗಳಿಗೆ ಲಕ್ಷ ಲಕ್ಷ ಬಾಡಿಗೆ ಹೇಗೆ ಮತ್ತು ಏಕೆ ನೀಡಬೇಕು ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದಕ್ಕೆ ತಾಜಾ ಉದಾಹರಣೆ ಎಂದರೆ ಲುಬ್ನಾ ಮಲ್ಹೋತ್ರಾ ಎಂಬುವವರು 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯಲ್ಲಿ ಮಾಡಿರುವ ಪೋಸ್ಟ್. ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಕೋರಮಂಗಲದಲ್ಲಿ 2BHK ಫ್ಲಾಟ್‌ಗೆ ಬರೋಬ್ಬರಿ 70,000 ರೂ. ಬಾಡಿಗೆ ನಿಗದಿ ಮಾಡಿರುವುದರ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕೋರಮಂಗಲದಲ್ಲಿ 2 ಬಿಎಚ್‌ಕೆ ಮನೆಗೆ 70 ಸಾವಿರ ರೂಪಾಯಿ? ಇಷ್ಟೊಂದು ಬಾಡಿಗೆ ಕೇಳಲು ಮನೆ ಮಾಲೀಕರಿಗೆ ನಾಚಿಕೆ ಆಗಬೇಕು. ಇಲ್ಲಿನ ರಸ್ತೆಗಳುದ್ದಕ್ಕೂ ಗುಂಡಿಗಳಿವೆ, ಎಲ್ಲೆಂದರಲ್ಲಿ ತೆರೆದ ಒಳಚರಂಡಿಗಳಿವೆ, ಜೊತೆಗೆ ಟ್ರಾಫಿಕ್ ಕಿರಿಕಿರಿ. ಇಂಥ ಕೆಟ್ಟ ನಿರ್ವಹಣೆಯಿದ್ದರೂ, ನಾವು ಇಷ್ಟು ದೊಡ್ಡ ಮೊತ್ತದ ಹಣವನ್ನು ಯಾವ ಕಾರಣಕ್ಕಾಗಿ ಪಾವತಿಸುತ್ತಿದ್ದೇವೆ?" ಎಂದು ಮಲ್ಹೋತ್ರಾ ಅವರು ವ್ಯವಸ್ಥೆಯನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ಕೋರಮಂಗಲವು ಬೆಂಗಳೂರಿನ ಅತ್ಯಂತ ಪ್ರಸಿದ್ಧ ಹಾಗೂ ದುಬಾರಿ ಪ್ರದೇಶಗಳಲ್ಲಿ ಒಂದು. ಇಲ್ಲಿ ಪ್ರತಿಷ್ಠಿತ ಕೆಫೆಗಳು, ಪಬ್‌ಗಳು, ಸ್ಟಾರ್ಟ್-ಅಪ್ ಕಂಪನಿಗಳು ಹಾಗೂ ದೊಡ್ಡ ಶಾಪಿಂಗ್ ಮಾಲ್‌ಗಳಿವೆ. ಅಲ್ಲದೆ, ಇದು ಎಚ್‌ಎಸ್‌ಆರ್ ಲೇಔಟ್ (HSR Layout) ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ಐಟಿ ಕಾರಿಡಾರ್‌ಗಳಿಗೆ ಬಹಳ ಹತ್ತಿರದಲ್ಲಿದೆ.
1990ರ ದಶಕದ ಉತ್ತರಾರ್ಧದಲ್ಲಿ ಬೆಂಗಳೂರಿನಲ್ಲಿ ಐಟಿ ವಲಯ ಬೆಳೆದಾಗ, ದೇಶಾದ್ಯಂತದ ಉದ್ಯೋಗಿಗಳು ಇಲ್ಲಿಗೆ ಆಕರ್ಷಿತರಾದರು. ಈ ಕಾರಣದಿಂದಾಗಿ ಇಲ್ಲಿ ವಸತಿಗೆ ಭಾರಿ ಬೇಡಿಕೆ ಸೃಷ್ಟಿಯಾಯಿತು. ಬೇಡಿಕೆ ಹೆಚ್ಚಾದಂತೆಲ್ಲಾ ಮನೆ ಮಾಲೀಕರು ಬಾಡಿಗೆಯನ್ನು ಮನಬಂದಂತೆ ಏರಿಸುತ್ತಲೇ ಹೋದರು. ಆದರೆ, ಬಾಡಿಗೆ ಏರಿಕೆಯಾದ ಪ್ರಮಾಣದಲ್ಲಿ ಅಲ್ಲಿನ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರು ಮುಂತಾದ ನಾಗರಿಕ ಸೌಲಭ್ಯಗಳು ಮಾತ್ರ ಅಭಿವೃದ್ಧಿಯಾಗಲೇ ಇಲ್ಲ ಎಂಬುದು ವಾಸ್ತವ.
https://x.com/lubnamalhotra/status/2021260827752382714?s=20ಲುಬ್ನಾ ಮಲ್ಹೋತ್ರಾ ಅವರ ಈ ಪೋಸ್ಟ್ ಇದೀಗ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಲವು ನೆಟ್ಟಿಗರು ಲುಬ್ನಾ ಅವರ ಮಾತಿಗೆ ದನಿಗೂಡಿಸಿದ್ದು, "ಇದೊಂದು ಹಗಲು ದರೋಡೆ. ಐಟಿ ಉದ್ಯೋಗಿಗಳಿಂದ ಅತಿಯಾದ ಬಾಡಿಗೆ ವಸೂಲಿ ಮಾಡಿ ಶೋಷಣೆ ಮಾಡಲಾಗುತ್ತಿದೆ. ಭಾರತದಲ್ಲಿ ಈ ದುಬಾರಿ ಬೆಲೆಗೆ ಯಾವುದೇ ಸಮರ್ಥನೆ ಇಲ್ಲ. ಸರ್ಕಾರ ಕೂಡಲೇ ಮನೆ ಬಾಡಿಗೆಗೆ ಒಂದು ಮಿತಿ (Rent Cap) ಹೇರಬೇಕು, ಇಲ್ಲದಿದ್ದರೆ ಈ ಸುಲಿಗೆ ಹೀಗೆಯೇ ಮುಂದುವರಿಯುತ್ತದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಮತ್ತೊಂದೆಡೆ, ಕೆಲವು ಸ್ಥಳೀಯರು ಬೇರೆಯದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. "ಬೆಂಗಳೂರಿನಲ್ಲಿ ಹೊರ ರಾಜ್ಯದ ವಲಸಿಗರ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿರುವುದೇ ಈ ಬಾಡಿಗೆ ಏರಿಕೆಗೆ ಪ್ರಮುಖ ಕಾರಣ" ಎಂದು ದೂರಿದ್ದಾರೆ. "ಉತ್ತರ ಭಾರತದಿಂದ ಬರುವ ಜನರಿಗೆ ಬೆಂಗಳೂರು ಎಂದರೆ ಕೇವಲ ಇಂದಿರಾನಗರ ಮತ್ತು ಕೋರಮಂಗಲ ಮಾತ್ರವೇ? ಬೇರೆ ಪ್ರದೇಶಗಳಲ್ಲಿ ಕಡಿಮೆ ಬಾಡಿಗೆಗೆ ಉತ್ತಮ ಮನೆಗಳು ಸಿಗುತ್ತವೆ, ಅಲ್ಲಿ ಮನೆಗಳನ್ನು ಹುಡುಕಿ" ಎಂದು ತಿರುಗೇಟು ನೀಡಿದ್ದಾರೆ. ಇನ್ನು ಕೆಲವರು, "ಐಟಿ ಹಬ್ ವೈಟ್‌ಫೀಲ್ಡ್ ಪ್ರದೇಶದಲ್ಲಿ 2 BHK ಫ್ಲಾಟ್‌ಗೆ 75,000 ರೂ. ಬಾಡಿಗೆ ಇದೆ. ಅದಕ್ಕೆ ಹೋಲಿಸಿದರೆ ಕೋರಮಂಗಲದ ಬಾಡಿಗೆ ಉತ್ತಮವಾಗಿದೆ" ಎಂದು ಕಾಲೆಳೆದಿದ್ದಾರೆ.












Click it and Unblock the Notifications