ಸರ್ಕಾರದ ಪ್ರತಿ ಇಲಾಖೆಗಳಲ್ಲಿ ಜಾಗೃತ ಅಧಿಕಾರಿಗಳು ನೇಮಕವಾಗಬೇಕು: ಒತ್ತಾಯ
ಬೆಂಗಳೂರು, ಜುಲೈ 03: ಇತ್ತೀಚೆಗಷ್ಟೇ ಕರ್ನಾಟಕ ಲೋಕಾಯುಕ್ತ ದಾಳಿಯ ಸಂದರ್ಭದಲ್ಲಿ ಒಬ್ಬ ಸಾಮಾನ್ಯ ತಹಸೀಲ್ದಾರನೊಬ್ಬ 1500 ಕೋಟಿಗೂ ಅಧಿಕ ಭ್ರಷ್ಟಾಚಾರ ಎಸಗಿದ್ದಾನೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಇದರಿಂದ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಸರ್ಕಾರದ ಪ್ರತಿ ಇಲಾಖೆಗಳಲ್ಲಿ ಜಾಗೃತ ಅಧಿಕಾರಿಗಳು ನೇಮಕ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆಗ್ರಹಿಸಿದೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಸಂವಹನ ವಿಭಾಗದ ಅಧ್ಯಕ್ಷ ಬ್ರಿಜೇಶ್ ಕಾಳಪ್ಪ ಅವರು, ಸಾಮಾನ್ಯ ತಹಶೀಲ್ದಾರ ಅಧಿಕಾರಿಯೊಬ್ಬರು 1500 ಕೋಟಿ ಆಸಕ್ತಿ ಗಳಿಕೆ ಮಾಡಿರುವುದು ಲೋಕಾಯುತ್ತಕ ದಾಳಿ ವೇಳೆ ಬೆಳಕಿಗೆ ಬಂದಿದೆ. ಅಂದರೆ ರಾಜ್ಯ ಸರ್ಕಾರಗಳು ಇಷ್ಟು ವರ್ಷಗಳ ಕಾಲ ಕಣ್ಮುಚ್ಚಿ ಕುಳಿತಿದ್ದವಾ? ಎಂದು ರಾಜ್ಯದ ಜನತೆ ಪ್ರಶ್ನೆಸುತ್ತಿದ್ದಾರೆ.

ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರತಿಯೊಂದು ಇಲಾಖೆಗಳಲ್ಲಿ ಜಾಗೃತ ಅಧಿಕಾರಿಗಳನ್ನು ನೇಮಿಸಬೇಕೆಂದು ಆದೇಶವನ್ನು ಮಾಡಿದ್ದರು. ಅಂದಿನ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರನಾಗಿ ಕಾರ್ಯ ನಿರ್ವಹಿಸಿದ್ದೆ ಎಂದು ತಿಳಿಸಿದರು.
ಜಾಗೃತಿ ಅಧಿಕಾರಿಗಳನ್ನು ನೇಮಿಸಿಲ್ಲ ಏಕೆ?
ಪ್ರಸ್ತುದಲ್ಲಿ ಪುನಃ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರಕ್ಕೆ ಬಂದು ಎರಡು ತಿಂಗಳಾದರೂ ಸಹ ಇನ್ನೂ ಏಕೆ ಜಾಗೃತ ಅಧಿಕಾರಿಗಳನ್ನು ಪ್ರತಿಯೊಂದು ಇಲಾಖೆಗಳಲ್ಲಿಯೂ ನೇಮಿಸಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.
ಸರ್ಕಾರ ವ್ಯಾಪ್ತಿಯ ಕಂದಾಯ ಇಲಾಖೆ, ನೀರಾವರಿ, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಇನ್ನಿತರ ಪ್ರಮುಖ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರವಿರುವ ಅಂಶ ತಮಗೆ ಗೊತ್ತಿದ್ದರೂ ಸಹ ಸುಮ್ಮನಿದ್ದೀರಿ. ಇದನ್ನು ನೋಡಿದರೆ ತಾವು ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಪರ ಎಂಬ ಭಾವನೆ ರಾಜ್ಯದ ಜನತೆಯಲ್ಲಿ ಮೂಡುವುದರಲ್ಲಿ ಸಂಶಯವೇ ಇಲ್ಲ ಎಂದು ಬ್ರಿಜೇಶ್ ಕಾಳಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಲೋಕಾಯುಕ್ತದಲ್ಲಿ ಈಗಾಗಲೇ ಕೇಸುಗಳ ಭಾರ ಅತೀಯಾಗಿದೆ. ಈ ಕೂಡಲೇ ನೀವು ಸರ್ಕಾರದ ಪ್ರತಿಯೊಂದು ಇಲಾಖೆಗಳಲ್ಲಿಯೂ ಹಾಗೂ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಜಾಗೃತಕೋಶ ಆರಂಭಿಸಬೇಕು. ಅದಕ್ಕೆ ಜಾಗೃತಿ ಅಧಿಕಾರಿಗಳನ್ನು ನೇಮಕ ಮಾಡಬೇಕಿದೆ.
ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವಲ್ಲಿ ವೀಫಲ?
ಸ್ವತಖ ನಿಮ್ಮ ಮುಖ್ಯಮಂತ್ರಿ ಕಚೇರಿಯಲ್ಲಿ ಮುಖ್ಯ ಜಾಗೃತ ಅಧಿಕಾರಿಗಳನ್ನು ನೇಮಿಸಿಕೊಳ್ಳಬೇಕು. ಮುಖ್ಯವಾಗಿ ಕಳಂಕವಿಲ್ಲದ ಪ್ರಾಮಾಣಿಕ ಅಧಿಕಾರಿಗಳನ್ನು ಈ ಹುದ್ದೆಗೆ ನೇಮಿಸಿಕೊಳ್ಳಬೇಕು. ರಾಜ್ಯದಿಂದ ಭ್ರಷ್ಟಾಚಾರವನ್ನು ತೆಗೆದು ಹಾಕದಿದ್ದಲ್ಲಿ ನಿಮ್ಮ ಯಾವ ಗ್ಯಾರೆಂಟಿಗಳನ್ನು ಸಹ ಜನತೆಗೆ ತಲುಪಿಸಲು ವಿಫಲರಾಗುತ್ತೀರಿ.
ನಮ್ಮ ಸಲಹೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸದಿದ್ದಲ್ಲಿ ಆಮ್ ಆದ್ಮಿ ಪಕ್ಷವು ಪ್ರತಿಭಟನೆಯ ಮಾರ್ಗವನ್ನು ಹಿಡಿಯಬೇಕಾಗುತ್ತದೆ. ಆದಷ್ಟು ಶೀಘ್ರವೇ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ವಕ್ತಾರೆ ಉಷಾ ಮೋಹನ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications