ಮನೆ ಮಾಲೀಕನ ಕೈಕಾಲು ಕಟ್ಟಿ ದರೋಡೆ ಮಾಡಿದ್ದ ಸಹೋದರರ ಸೆರೆ
ಬೆಂಗಳೂರು, ಜು. 01: ಅವರಿಬ್ಬರೂ ಅಣ್ಣ ತಮ್ಮಂದಿರು. ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಕೊರೊನಾ ಬಂದಿದ್ದರಿಂದ ಬ್ಯುಜಿನೆಸ್‌ನಲ್ಲಿ ತುಂಬಾ ನಷ್ಟ ಅನಭವಿಸಿದ್ದರು. ಸಾಲಗಾರರ ಕಾಟ ತಾಳಲಾರದೇ ಮನೆ ಮಾಲೀಕರ ಕೈಕಾಲು ಕಟ್ಟ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದ ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಅರವಿಂದ್ ಹಾಗೂ ಅವಿನಾಶ್ ಬಂಧಿತ ಆರೋಪಿಗಳು. ಬಟ್ಟೆ ಬ್ಯುಜಿನೆಸ್ ಮಾಡುತ್ತಿದ್ದ ಅರವಿಂದ್ ಮತ್ತು ಅವಿನಾಶ್ ನಷ್ಟ ಅನುಭವಿಸಿದ್ದರು. ದಿನ ನಿತ್ಯ ಸಾಲಗಾರರ ಕಾಟ ಶುರುವಾಗಿತ್ತು. ಇದಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ದರೋಡೆ. ವಿದ್ಯಾರಣ್ಯಪುರದಲ್ಲಿ ನೆಲೆಸಿದ್ದ ಬಾಡಿಗೆ ಮನೆಯ ಮಾಲೀಕನ ಹಿನ್ನೆಲೆ ಸಂಗ್ರಹಿಸಿದ್ದರು. ಮನೆ ಮಾಲೀಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪತ್ನಿ ಮನೆ ಕೆಲಸ ಮಾಡಿಕೊಂಡಿದ್ದರು. ಒಮ್ಮೊಮ್ಮೆ ಮನೆ ಮಾಲೀಕರೊಬ್ಬರೇ ಮನೆಯಲ್ಲಿರುತ್ತಿದ್ದರು.

ಸಾಲ ತೀರಿಸಲು ಮನೆ ಮಾಲೀಕನ ಮನೆ ದೋಚಲು ಪ್ಲ್ಯಾನ್ ರೂಪಿಸಿದ್ದರು. ಅದರಂತೆ ಒಂಟಿಯಾಗಿದ್ದ ಮನೆ ಮಾಲೀಕನ ಕೈಕಾಲು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಕೆಲ ದಿನಗಳ ಹಿಂದೆ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಮನೆಯಲ್ಲಿ ಕದ್ದಿದ್ದ 123 ಗ್ರಾಂ ಚಿನ್ನ, ಎರಡು ಕೆ.ಜಿ. ಬೆಳ್ಳಿ, ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.

Recommended Video
ಈ ಕುರಿತು ಮನೆ ಮಾಲೀಕ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದರು. ಖಚಿತ ಮಾಹಿತಿ ಆಧರಿಸಿ ಅರವಿಂದ್ ಹಾಗೂ ಅವಿನಾಶ್ ಇಬ್ಬರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಬಟ್ಟೆ ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಸಾಲಗಾರರ ಸಾಲ ತೀರಿಸಲು ಈ ಕೃತ್ಯ ಎಸಗಿರುವ ತಪ್ಪೊಪ್ಪಿಕೊಂಡಿದ್ದಾರೆ.












Click it and Unblock the Notifications