ವಿಬ್ ಗಯಾರ್ ಪ್ರಕರಣ : ಆರೋಪಿ ಮುಸ್ತಫಾ ಬಂಧನ
ಬೆಂಗಳೂರು, ಜು. 21 : ಬೆಂಗಳೂರಿನ ಹೊರವಲಯದ ಮಾರತ್ ಹಳ್ಳಿಯ ವಿಬ್ ಗಯಾರ್ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಸ್ಕೇಟಿಂಗ್ ಸಹಾಯಕ ತರಬೇತುದಾರ ಮುಸ್ತಫಾನನ್ನು ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮುಸ್ತಫಾ (30) ಬಿಹಾರದ ದರ್ಭಾಂಗ್ ಜಿಲ್ಲೆಯವನಾಗಿದ್ದು, ವಿಕೃತ ವ್ಯಕ್ತಿತ್ವದ ಆತ ಈ ಹಿಂದೆ ವೈಟ್ಫೀಲ್ಡ್ ಸಮೀಪದ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆ ಶಾಲೆಯ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿ ಸಿಕ್ಕಿಬಿದ್ದಿದ್ದ. ಆದ್ದರಿಂದ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಿಷನರ್ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ.

ಬಂಧಿತ ಆರೋಪಿಯಿಂದ ಮೊಬೈಲ್ ಮತ್ತು ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸರ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಾಗುತ್ತದೆ ಎಂದು ಔರಾದ್ಕರ್ ಹೇಳಿದರು. [ಪೋಷಕರ ಕೂಗಿಗೆ, ಹಾರ್ಲೆ ಗುಡುಗಿಗೆ ಏಳುವುದೇ ಸರ್ಕಾರ?]
ಯಾರು ಮುಸ್ತಫಾ : ಪೋಷಕರೊಂದಿಗೆ ಸುಮಾರು 20 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಮುಸ್ತಫಾ ಆಗಮಿಸಿದ್ದ. ರಾಯಚೂರಿನ ಕಾಲೇಜು ಒಂದರಲ್ಲಿ ಬಿಪಿಇಡಿ ಓದಿದ್ದ. ವಿವಾಹಿತನಾದ ಆತ ಪತ್ನಿ ಮತ್ತು ಮೂರು ವರ್ಷದ ಮಗಳ ಜತೆ ವರ್ತೂರಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. [ವಿಬ್ ಗಯಾರ್ ಮುಂದೆ ಪೋಷಕರ ಪ್ರತಿಭಟನೆ ಚಿತ್ರಗಳು]
2011ರಲ್ಲಿ ವಿಬ್ ಗಯಾರ್ ಶಾಲೆಯಲ್ಲಿ ಕೆಲಸಕ್ಕೆ ಸೇರಿದ್ದ ಆತನಿಗೆ 18 ಸಾವಿರ ಸಂಬಳ ಬರುತ್ತಿತ್ತು. ದುಬಾರಿ ಮೊತ್ತದ ಮೊಬೈಲ್ ಖರೀದಿಸಿದ್ದ ಆತ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಶ್ಲೀಲ ವಿಡಿಯೋ ಪತ್ತೆ : ಆರೋಪಿ ಮುಸ್ತಫಾ ಲ್ಯಾಪ್ ಟಾಪ್ ನಲ್ಲಿ ಅಶ್ಲೀಲ ಛಾಯಾಚಿತ್ರ ಮತ್ತು ವಿಡಿಯೋ ಲಭ್ಯವಾಗಿವೆ. ಇಂಟರ್ ನೆಟ್ ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದ ಈತ, ಶಾಲಾ ಸಮವಸ್ತ್ರದಲ್ಲಿರುವ ವಿದ್ಯಾರ್ಥಿನಿಯರ ಛಾಯಾಚಿತ್ರಗಳನ್ನು ತೆಗೆದು ಲ್ಯಾಪ್ ಟಾಪ್ ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮುಸ್ತಫಾ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಮೊದಲ ಆರೋಪಿಯಾಗಿದ್ದಾನೆ. ಬಾಲಕಿ ಮುಸ್ತಫಾ ಸೇರಿದಂತೆ ಶಾಲೆಯ 7 ಸಿಬ್ಬಂದಿಯ ಗುರುತು ಹಿಡಿದಿದ್ದಳು. ಅವರೆಲ್ಲರನ್ನೂ ನಾಲ್ಕೈದು ದಿನಗಳಿಂದ ತೀವ್ರ ವಿಚಾರಣೆ ನಡೆಸಲಾಯಿತು. ಅಂತಿಮವಾಗಿ ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಬಾಲಕಿ ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.
ವಿಬ್ ಗಯಾರ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಜುಲೈ 2ರಂದು ಶಾಲೆಯಲ್ಲಿ ಅತ್ಯಾಚಾರ ನಡೆದಿತ್ತು. ಆದರೆ, ಶಾಲಾ ಆಡಳಿತ ಮಂಡಳಿ ಸದಸ್ಯರು ಈ ಸಂಗತಿಯನ್ನು ಮುಚ್ಚಿಟ್ಟಿದ್ದರು. ಘಟನೆ ನಡೆದು 12 ದಿನಗಳ ಬಳಿಕ ಬಾಲಕಿಯ ಪೋಷಕರಿಗೆ ಅತ್ಯಾಚಾರದ ಸಂಗತಿ ತಿಳಿದಿದ್ದು, ವರ್ತೂರು ಪೊಲೀಸ್ ಠಾಣೆಯಲ್ಲಿ ಜುಲೈ 14ರಂದು ದೂರು ದಾಖಲಿಸಿದ್ದರು.












Click it and Unblock the Notifications