ಹಿರಿಯ ಕವಿ ಪ್ರೊ. ಜಿ ಎಸ್ ಸಿದ್ದಲಿಂಗಯ್ಯ ನಿಧನ: ಗಣ್ಯರ ಸಂತಾಪ
ಬೆಂಗಳೂರು, ಮೇ 07: ಕನ್ನಡದ ಖ್ಯಾತ ಹಿರಿಯ ಕವಿ, ಶಿಕ್ಷಣ ತಜ್ಞ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ಪ್ರೊ. ಜಿ ಎಸ್ ಸಿದ್ದಲಿಂಗಯ್ಯ ಅವರು ನಿಧನರಾಗಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಈ ಮಹನೀಯರ ನಿಧನವು ಅತೀವ ದುಃಖ ತರಿಸಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಕವಿ ಜಿ ಎಸ್ ಸಿದ್ದಲಿಂಗಯ್ಯ ಅವರ ಕೊಡುಗೆ ಗಮನಾರ್ಹವಾದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ 17ನೇ ಅಧ್ಯಕ್ಷರಾಗಿ ಅವರು ಕೈಗೊಂಡ ಕೆಲಸಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢವಾಗಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಸಾಹಿತ್ಯ ಪರಿಷತ್ತಿಗೆ ಒಂದು ನಿರ್ದಿಷ್ಟ ಧ್ವಜವನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದು.
ಆಡಳಿತಾತ್ಮಕವಾಗಿ, ಆರ್ಥಿಕವಾಗಿ ಪರಿಷತ್ತನ್ನು ಕಟ್ಟುವಲ್ಲಿ ಶ್ರಮಿಸಿದವರು ಜಿ ಎಸ್ ಸಿದ್ದಲಿಂಗಯ್ಯ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಿಗೆ ವಿಶೇಷ ಗಮನ ಕೊಟ್ಟರು.

ಜಿ ಎಸ್ ಸಿದ್ದಲಿಂಗಯ್ಯ ಕವಿಯಾಗಿ ,ವಿಮರ್ಶಕ ರಾಗಿ, ಅನುವಾದಕರಾಗಿ ಕನ್ನಡ ಪುಸ್ತಕ ಲೋಕಕ್ಕೆ ಅನನ್ಯ ಕೊಡುಗೆ ಕೊಟ್ಟಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯು ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಕವಿ ಜಿ ಎಸ್ ಸಿದ್ದಲಿಂಗಯ್ಯ ಅವರ ನಿಧನದಿಂದ ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಸಂತಾಪ
ಸಾಹಿತಿ, ಕವಿ ಹಾಗೂ ವಿಮರ್ಶಕರಾಗಿದ್ದ ಜಿ.ಎಸ್. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಿದ್ದಲಿಂಗಯ್ಯ ಅವರು ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ವಿವಿಧ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಿದ್ದಲಿಂಗಯ್ಯರವರು ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ, ಬಂಧುಮಿತ್ರರು ಮತ್ತು ಅಭಿಮಾನಿಗಳಿಗೆ ಅಗಲುವಿಕೆಯ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.












Click it and Unblock the Notifications