Breaking: 'ಮಹಾ' ಸಚಿವರು ಬೆಳಗಾವಿ ಬರದಂತೆ ಒತ್ತಾಯಿಸಿ ಸೋಮವಾರ ವಾಟಾಳ್ ನಾಗರಾಜ್ ಪ್ರತಿಭಟನೆ
ಬೆಂಗಳೂರು, ಡಿಸೆಂಬರ್ 04: ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರಬಾರದು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಲಿದೆ.
ವಾಟಾಳ್ ಪಕ್ಷವು ಭಾನುವಾರ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ ಮಧ್ಯಾಹ್ನ 12ಗಂಟೆಗೆ ಭಾರಿ ಪ್ರತಿಭಟನೆ ನಡೆಸಲಾಗುವುದು. ಮಹಾರಾಷ್ಟ್ರದ ಮಂತ್ರಿಗಳು ಬೆಳಗಾವಿಗೆ ಬರಬಾರದು. ಕರ್ನಾಟಕ ಸರ್ಕಾರ ಮರಾಠಿಗರಿಗೆ ಬಗ್ಗಬಾರದು. ಒಂದು ವೇಳೆ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದಿದ್ದೇ ಆದಲ್ಲಿ ಅವರನ್ನು ಗಡಿಪ್ರದೇಶದಲ್ಲಿರುವಾಗಲೇ ಬಂಧಿಸಬೇಕು. ರಾಜ್ಯದಲ್ಲಿ ಕನ್ನಡ ದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯನ್ನು ನಿಷೇಧಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ-ಕರ್ನಾಟಕ ವಿವಾದ: ಬೆಳಗಾವಿ ಬಡಿದಾಟದ ಸುತ್ತ-ಮುತ್ತ ಏನು, ಎತ್ತ, ಯಾಕೆ?
ಡಿಸೆಂಬರ್ 6ರಂದು ಕರ್ನಾಟಕದ ಗಡಿ ಜಿಲ್ಲೆಯಾದ ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರಲಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಅಂತಿಮ ಹಂತದಲ್ಲಿರುವಾಗ ಆ ರಾಜ್ಯದ ಸಚಿವರು ಬೆಳಗಾವಿಗೆ ಬರಬಾರದು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ ಮಧ್ಯಾಹ್ನ ಬೃಹತ್ ಪ್ರತಿಭಟನೆ ನಡೆಯಲಿದೆ. ವಿವಿಧ ಕನ್ನಡ ಪರ ಸಂಘಟನೆಗಳು, ನಾಯಕರು, ಕನ್ನಡಿಗರು ಬೆಂಬಲಿಸಿ ಬೀದಿಗಿಳಿಯಲಿದ್ದಾರೆ. ಮಹಾರಾಷ್ಟ್ರವು ಕರ್ನಾಟಕದ ವಿರುದ್ಧ ಏನೆ ಪ್ರಯತ್ನ ಮಾಡಿದರೂ ನಮ್ಮ ಸರ್ಕಾರ ಬಗ್ಗಬಾರದು, ಅವರಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ಒತ್ತಾಯಿಸಲಿದ್ದಾರೆ.
ಮಹಾ ಸಚಿವರ ಭೇಟಿ ತಡೆಗೆ ಸಿಎಂ ಕ್ರಮ
ಕರ್ನಾಟಕದ ಗಡಿಯಲ್ಲಿ ಪದೇ ಪದೆ ಖ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರದ ಸಚಿವರು ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳೆಗಾವಿ ಭೇಟಿ ನೀಡುವುದಾಗಿ ಹೇಳಿದ್ದಾರೆ. ಇದು ಕನ್ನಡಿಗರ ಆಕ್ರೋಶ ಕಾರಣವಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಳಗಾವಿಗೆ ನಿಮ್ಮ ಸಚಿವರು ಬರುವುದು ಬೇಡ ಎಂದು ತಿಳಿಸಿದ್ದಾರೆ. ಈ ಹಿಂದೆ ಇದೇ ರೀತಿ ಆದಾಗ ಕರ್ನಾಟಕ ಸೂಕ್ತ ಕ್ರಮ ಕೈಗೊಂಡಿತ್ತು. ಈ ಬಾರಿಯು ಸಚಿವರು ಬರದಂತೆ ಹಿಂದಿನ ಕ್ರಮ ಕೈಗೊಳ್ಳುವುದಾಗಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ.