ದೇಶದೆಲ್ಲೆಡೆ ಕಳೆ ಕಟ್ಟಿದ ವರಮಹಾಲಕ್ಷ್ಮಿ ಹಬ್ಬ: ದೇಗುಲದಲ್ಲಿ ಮಹಿಳಾ ಭಕ್ತರಿಗೆ ವಿಶೇಷ ಉಡುಗೊರೆ
ಭಾಗ್ಯದ ಲಕ್ಷ್ಮಿ ಬಾರಮ್ಮ... ಭಾಗ್ಯದ ಲಕ್ಷ್ಮಿ ಬಾರಮ್ಮ.... ಎನ್ನುತ್ತಾ ಇಂದು ಮಹಿಳೆಯರು ವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಸಂಪತ್ತಿನ ಅಧಿದೇವತೆ, ಮಹಾ ವಿಷ್ಣುವಿನ ಪತ್ನಿ ಲಕ್ಷ್ಮಿದೇವಿಯನ್ನು ಸಂಪನ್ನಳನ್ನಾಗಿ ಮಾಡಲು ಭಕ್ತಿಯಿಂದ ಭಕ್ತರು ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ.
ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಹೀಗಾಗಿ ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಸುದಿನ ದೇಗುಲದಲ್ಲಿ ಮಹಿಳಾ ಭಕ್ತರಿಗೆ ವಿಶೇಷ ಉಡುಗೊರೆ ನೀಡಲಾಗುತ್ತಿದೆ.

ಹೌದು... ಈ ದಿನ ದೇವಸ್ಥಾನಕ್ಕೆ ಹೋಗುವ ಮಹಿಳೆಯರಿಗೆ ವಿಶೇಷ ಉಡುಗೊರೆ ನೀಡಲು ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಇಂದು ರಾಜ್ಯದ ಎಲ್ಲಾ ಮುಜರಾಯಿ ದೇಗುಲದಲ್ಲಿಯೂ ಮಹಿಳಾ ಭಕ್ತರಿಗಾಗಿ ಅರಿಶಿನ, ಕುಂಕುಮ, ಬಳೆ, ಕಣವನ್ನು ಕೊಡಲಾಗುತ್ತದೆ. ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಇಂದು ಲಕ್ಷ್ಮಿ ದೇವಿಯನ್ನು ಆರಾಧಿಸುವ ಮುತ್ತೈದೆಯರೇ ಆಚರಿಸುವ ವಿಶೇಷವಾದ ವೃತ ವರಮಹಾಲಕ್ಷ್ಮಿ ಹಬ್ಬದ ಸಡಗರ.
ಬೆಂಗಳೂರಿನ ಬನಶಂಕರಿ ದೇವಾಲದಲ್ಲಿ ಮಹಿಳಾ ಭಕ್ತರಿಗೆ ಅರಿಶಿನ, ಕುಂಕುಮ, ಬಳೆ, ಕಣವನ್ನು ನೀಡಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಲಕ್ಷ್ಮೀ ದೇವಿಯನ್ನು ಮುಖ್ಯವಾಗಿ ಐಶ್ವರ್ಯ, ಸಂಪತ್ತಿನ ಅಧಿ ದೇವತೆಯಾಗಿ ಪೂಜಿಸುತ್ತಾರೆ. ಲಕ್ಷ್ಮಿಯು ಮಹಾ ವಿಷ್ಣುವಿನ ಹೆಂಡತಿ ಮಾತ್ರವಲ್ಲ ಶಕ್ತಿಯ ಪ್ರತೀಕ ಕೂಡ ಹೌದು. ಹುಬ್ಬಳ್ಳಿ-ಧಾರವಾಡದಲ್ಲೂ ದೇವಿಯ ದೇವಸ್ಥಾನದಲ್ಲಿ ಬಾಗಿನ ವಿತರಣೆ ಮಾಡಲಾಗುತ್ತಿದೆ.
ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಈ ದಿನ ಪೂಜಿಸಿದರೆ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ವರಮಹಾಲಕ್ಷ್ಮೀ ಹಬ್ಬವನ್ನು ಇಂದು (ಶುಕ್ರವಾರ) ಎಲ್ಲೆಡೆ ಆಚರಿಸಲಾಗುತ್ತಿದೆ.
ಲಕ್ಷ್ಮೀದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮೀಯ ಲಕ್ಷಣಗಳೆಂದು ಹೇಳಲಾಗಿದ್ದು ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.
ಆಚರಣೆ ಹೇಗೆ?
ವೀಳ್ಯದೆಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಈ ಕಲಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲಿಡಬೇಕು. ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡುತ್ತಾರೆ. ದೇವಿಗೆ ಪೊಂಗಲ್ ನೈವೇದ್ಯ ಮಾಡಿ ಅರ್ಪಿಸುತ್ತಾರೆ. ಮುತ್ತೈದೆಯರನ್ನು ಪೂಜೆಗೆ ಆಮಂತ್ರಿಸಿ, ಪೂಜೆಯ ನಂತರ ಅವರಿಗೆ ತಾಂಬೂಲ ನೀಡುವ ಪದ್ಧತಿ ಇದೆ. ವ್ರತ ಮಾಡುವವರು ಪೂಜೆ ಮುಗಿದ ನಂತರ ಆಹಾರ ಸೇವಿಸುತ್ತಾರೆ.
'ನಿಜವಾದ ಲಕ್ಷ್ಮಿಯರು ಪೌರಕಾರ್ಮಿಕರು' ಟಿಎ ಶರವಣ
ಜೆಡಿಎಸ್ ಮುಖಂಡ ಟಿಎ ಶರವಣ ಅವರ ಮನೆಯಲ್ಲೂ ಇಂದು ವರಮಹಾಲಕ್ಷ್ಮಿ ಪೂಜೆ ಮಾಡಲಾಯಿತು. ಈ ವೇಳೆ ಮಾತನಾಡಿದ ಅವರು, 'ನಿಜವಾದ ಲಕ್ಷ್ಮಿಯರು ಪೌರಕಾರ್ಮಿಕರು. ಹೀಗಾಗಿ ಅವರನ್ನು ಮನೆಗೆ ಬರಮಾಡಿಕೊಂಡು ವರಮಹಾಲಕ್ಷ್ಮಿಯ ಪೂಜೆ ಮಾಡುತ್ತಿದ್ದೇವೆ' ಎಂದು ಹೇಳಿದರು.












Click it and Unblock the Notifications