ವಂದೇ ಭಾರತ್ ಮಿಷನ್; ದೇಶಕ್ಕೆ ವಾಪಸ್ ಆದ ಕನ್ನಡಿಗರ ಲೆಕ್ಕ
ಬೆಂಗಳೂರು, ಸೆಪ್ಟೆಂಬರ್ 27: ವಂದೇ ಭಾರತ್ ಮಿಷನ್ ಅಡಿಯಲ್ಲಿ 61,000ಕ್ಕೂ ಅಧಿಕ ಕನ್ನಡಿಗರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಮಿಷನ್ ಆರಂಭಿಸಿತ್ತು.
ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಮೇ ತಿಂಗಳಿನಲ್ಲಿ ವಂದೇ ಭಾರತ್ ಮಿಷನ್ ಆರಂಭಿಸಿದ ಬಳಿಕ ಕರ್ನಾಟಕ ರಾಜ್ಯವೊಂದಕ್ಕೆ 61,000ಕ್ಕೂ ಅಧಿಕ ಜನರು ಆಗಮಿಸಿದ್ದಾರೆ" ಎಂದು ಹೇಳಿದ್ದಾರೆ.
ವಂದೇ ಭಾರತ್ ಮಿಷನ್ ಅಡಿಯಲ್ಲಿ ಕರ್ನಾಟಕದ ಎರಡು ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ವಿಮಾನಗಳು ಆಗಮಿಸಿವೆ.
ಸೆಪ್ಟೆಂಬರ್ 25ರಂದು ಅಂತಿಮಗೊಳಿಸಿ ವೇಳಾಪಟ್ಟಿ ಅನ್ವಯ ಕರ್ನಾಟಕಕ್ಕೆ ವಿವಿಧ ದೇಶಗಳಿಂದ 179 ವಿಮಾನಗಳು ಆಗಮಿಸಬೇಕು. ಬೆಂಗಳೂರು ವಿಮಾನ ನಿಲ್ದಾಣ ವಿವಿಧ ನಗರಗಳನ್ನು ಏರ್ ಬಬ್ಬಲ್ ಯೋಜನೆ ಮೂಲಕ ಸಹ ಸಂಪರ್ಕಿಸಿದೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ.

ವಂದೇ ಭಾರತ್ ಮಿಷನ್ 1ನೇ ಹಂತ
ಲಾಕ್ ಡೌನ್ ಸಂದರ್ಭದಲ್ಲಿ ವಂದೇ ಭಾರತ್ ಮಿಷನ್ 1ನೇ ಹಂತದಲ್ಲಿ ಕರ್ನಾಟಕಕ್ಕೆ ಬಂದ ವಿಮಾನಗಳು ಕೇವಲ 6. 2ನೇ ಹಂತದ ಮಿಷನ್‌ನಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಗೊಂಡ ವಿಮಾನಗಳು ಸೇರಿ ಒಟ್ಟು 36 ವಿಮಾನಗಳು ಬೆಂಗಳೂರು, ಮಂಗಳೂರು ನಿಲ್ದಾಣಕ್ಕೆ ಬಂದವು.

ಒಟ್ಟು 179 ವಿಮಾನಗಳು
ವಂದೇ ಭಾರತ್ ಮಿಷನ್ 3ನೇ ಹಂತದಲ್ಲಿ 38, 4ನೇ ಹಂತದಲ್ಲಿ 79, 5ನೇ ಹಂತದಲ್ಲಿ 83 ವಿಮಾನಗಳು ಕರ್ನಾಟಕಕ್ಕೆ ಆಗಮಿಸಿದವು. ಸೆಪ್ಟೆಂಬರ್ 25ರಂದು ವೇಳಾಪಟ್ಟಿ ನಿಗದಿ ಮಾಡಿದಂತೆ 179 ವಿಮಾನಗಳು ರಾಜ್ಯಕ್ಕೆ ಆಗಮಿಸಬೇಕಿದೆ.

ಎಲ್ಲಿಂದ ವಿಮಾನಗಳ ಸಂಚಾರ
ವಂದೇ ಭಾರತ್ ಮಿಷನ್ ಅಡಿ ಏರ್ ಇಂಡಿಯಾ ವಿಮಾನಗಳು ಸಂಚಾರ ನಡೆಸಿವೆ. ಮಾಸ್ಕೋ, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್, ಜಕಾರ್ತಾ, ಮೆಲ್ಬೋರ್ನ್, ಡುಬ್ಲಿನ್ ಸೇರಿದಂತೆ ವಿವಿಧ ನಗರಗಳಿಂದ ವಿಮಾನಗಳು ಆಗಮಿಸಿವೆ.

ವಿವಿಧ ನಗರಗಳಿಗೆ ಹಾರಾಟ
ಬೆಂಗಳೂರು ವಿಮಾನ ನಿಲ್ದಾಣದಿಂದ ಏರ್ ಬಬ್ಬಲ್ ಅಡಿ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಅಬುದಾಬಿ, ದುಬೈ, ದೋಹಾ, ಕುವೈತ್, ಲಂಡನ್, ಮಸ್ಕತ್, ಪ್ಯಾರೀಸ್, ರಿಯಾದ್, ಸಿಂಗಾಪುರಕ್ಕೆ ಬೆಂಗಳೂರು ಸಂಪರ್ಕ ಕಲ್ಪಿಸಿದೆ.












Click it and Unblock the Notifications