ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರಾದಿ ಮಠದಿಂದ ಏಕಕಾಲಕ್ಕೆ ಲಕ್ಷ ಭಕ್ತರಿಗೆ ಸುಗ್ರಾಸ ಭೋಜನ

By Prasad
|
Google Oneindia Kannada News

ಬೆಂಗಳೂರು, ಮೇ 27 : ಉತ್ತರಾದಿ ಮಠದ ಶ್ರೀಗಳಾದ ಸತ್ಯಾತ್ಮ ತೀರ್ಥರ ವಿಶಿಷ್ಟ ಸಂಕಲ್ಪದಿಂದಾಗಿ, ಇಡೀ ಭಾರತದಾದ್ಯಂತ ಏಕಕಾಲಕ್ಕೆ ಲಕ್ಷಕ್ಕೂ ಹೆಚ್ಚಿನ ಭಕ್ತರಿಗೆ ಅನ್ನಸಂತರ್ಪಣೆ ಮಾಡಿದ ಅಭೂತಪೂರ್ವ ವಿದ್ಯಮಾನ ಭಾನುವಾರ ಜರುಗಿತು.

ಉತ್ತರಾದಿ ಮಠದ ಹಿಂದಿನ ಶ್ರೀಗಳಾದ ಸತ್ಯಪ್ರಮೋದ ತೀರ್ಥರ ಜನ್ಮಶತಮಾನೋತ್ಸವ ಆಚರಣೆಯ ಅಂಗವಾಗಿ ಜರುಗಿದ ಈ ಅನ್ನ ಸಂತರ್ಪಣೆಯ ವೈಶಿಷ್ಟ್ಯವೆಂದರೆ, ಉತ್ತರಾದಿ ಮಠದ ಮೂಲ ಸಂಸ್ಥಾನವಿರುವ ಬೆಂಗಳೂರಿನಲ್ಲಿ ಮಾತ್ರವಲ್ಲ, ಕರ್ನಾಟಕದ ಹಲವು ನಗರಗಳು, ಮುಂಬೈ, ಹೈದರಾಬಾದ್, ಉತ್ತರ ಭಾರತದಲ್ಲಿರುವ ಗಯಾ, ಬದರಿನಾಥ, ಹರಿದ್ವಾರ ಮುಂತಾದ 68 ನಗರಗಳಲ್ಲಿ ಏಕಕಾಲಕ್ಕೆ 'ಶ್ರೀಕೃಷ್ಣಾರ್ಪಣ ಮಸ್ತು' ಎಂದು ಹೇಳಿ ಪ್ರಸಾದವನ್ನು ಭಕ್ತಾದಿಗಳು ಸ್ವೀಕರಿಸಿದರು.

ಎಲ್ಲ 68 ನಗರಗಳಲ್ಲಿ ಅನ್ನಸಂತರ್ಪಣೆಯ ವೈಭೋಗವನ್ನು ಲೈವ್ ಪ್ರಸಾರ ಮಾಡಲಾಯಿತು. ರಾಮದೇವರ ಪೂಜೆಯ ನಂತರ, ಹಲವಾರು ಭಾಷೆಯ ಭಕ್ತರು ಇದ್ದಾರೆನ್ನುವ ಕಾರಣಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ, ತಂಜಾವೂರು ಮರಾಠಿ ಭಾಷೆಗಳಲ್ಲಿ ಶ್ರೀಗಳ ಆಶೀರ್ವಚನದ ಸಂದೇಶ ರವಾನೆಯಾಗುತ್ತಿದ್ದಂತೆ ಪ್ರಸಾದವನ್ನು ಭಕ್ತರು ಸ್ವೀಕರಿಸಿದರು.

Uttaradi Mutt witnesses unique incident in India

ಮತ್ತೊಂದು ವಿಶಿಷ್ಟ ಸಂಗತಿಯೆಂದರೆ, ಏಕಕಾಲಕ್ಕೆ ಲಕ್ಷ ಭಕ್ತರಿಗೆ ಅನ್ನಸಂತರ್ಪಣೆಯಾಗಬೇಕೆಂಬ ಸಂಕಲ್ಪ ಪೂರೈಸಿದ್ದಕ್ಕೆ ಶ್ರೀ ಸತ್ಯಾತ್ಮ ತೀರ್ಥರು, ಆಶೀರ್ವಚನ ನೀಡುವಾಗ ಇದ್ದಕ್ಕಿದ್ದಂತೆ ಭಾವುಕರಾದರು. ಅವರ ಕಣ್ಣಲ್ಲಿ ಅನನ್ಯ ಸಾರ್ಥಕತೆಯ ಭಾವ ತುಳುಕಾಡುತ್ತಿತ್ತು. ಇದಕ್ಕೆ ಸಾಕ್ಷಿಯಾದ ಭಕ್ತಾದಿಗಳ ಕಣ್ಣಾಲಿಗಳು ಕೂಡ ಒದ್ದೆಯಾದವು.

ಗುರುಗಳ ಆದೇಶ, ಪ್ರೇರಣೆ, ಅನುಗ್ರಹದಿಂದ ಲಕ್ಷ ಭಕ್ತರ ಭೋಜನದ ಸಂಕಲ್ಪ ಮಾಡುವುದು ದೊಡ್ಡದಲ್ಲ, ಆದರೆ, ಶ್ರೀವಾಯುದೇವರು, ಶ್ರೀರಾಮದೇವರ ಅನುಗ್ರಹದಿಂದ, ಅವರಲ್ಲಿನ ಭಕ್ತಿಯಿಂದ ಕನ್ಯಾಕುಮಾರಿಯಿಂದ ಹಿಮಾಚಲ ಪ್ರದೇಶದವರೆಗೆ ಇಡೀ ಭಾರತದಾದ್ಯಂತ ಲಕ್ಷಾಂತರ ಭಕ್ತರು ಒಟ್ಟಿಗೆ ಸೇರಿದ್ದಾರಲ್ಲ ಅದಕ್ಕಿಂತ ದೊಡ್ಡ ವಿಷಯ ಮತ್ತೊಂದಿಲ್ಲ. ಇದು ನನ್ನ ಪುಣ್ಯ. ಗುರುಗಳ ಕಾರುಣ್ಯ, ಶಕ್ತಿಯಿಲ್ಲದೆ ನನ್ನದೇನೂ ಇಲ್ಲ ಎಂದು ಶ್ರೀಗಳು ಭಾವುಕರಾದರು.

ಭಕ್ತರಲ್ಲಿ ಭಗವಂತ ಅಂತರ್ಯಾಮಿಯಾಗಿ ಅನಂತ ರೂಪದಲ್ಲಿದ್ದಾನೆ. ಬೃಹತಿ ಸಹಸ್ರ ಪ್ರತಿಪಾದ್ಯನಾಗಿ 36 ಸಾವಿರ ಪುರುಷರು ಮತ್ತು 36 ಸಾವಿರ ಸ್ತ್ರೀಯರ ರೂಪಗಳಿಂದ ಭಗವಂತ ಇದ್ದಾನೆ. ಭಗವಂತ ತನ್ನದೇ ನೈವೇದ್ಯವನ್ನ ಅಂತರ್ಯಾಮಿಯಾಗಿ ತಾನೇ ಸ್ವೀಕರಿಸಿ ಎಲ್ಲ ಭಕ್ತರಿಗೆ ಉಣಬಡಿಸಿ ಸಂತೈಸುತ್ತಾನೆ, ಅನುಗ್ರಹ ಮಾಡುತ್ತಾನೆ. ಎಲ್ಲರೂ ಅನುಸಂಧಾನ ಮಾಡಿ, ಕೇವಲ ಮಾನವರು ಊಟ ಮಾಡುತ್ತಿದ್ದಾನೆ ಎಂದು ಭಾವಿಸಬೇಡಿ, ತಿರುಪತಿ ತಿಮ್ಮಪ್ಪನ ಮದುವೆಯ ಸಂದರ್ಭದಲ್ಲಿ ಹೇಗೆ ಋಷಿಗಳು, ದೇವತೆಗಳು ಬಂದು ಪ್ರಸಾದ ಸ್ವೀಕಾರ ಮಾಡಿದರೋ ಅದೇ ರೀತಿ ಸುಗ್ರಾಸ ಭೋಜನ ಮಾಡಿ ಎಂದು ಶ್ರೀಗಳು ಆಶೀರ್ವಚನ ನೀಡಿದರು.

ಒಂದೇ ಒಂದು ಪೈಸೆಯ ನಿರೀಕ್ಷೆಯಿಲ್ಲದೆ ಇಷ್ಟೆಲ್ಲ ಭಕ್ತರಿಗೆ ಅನ್ನಸಂತರ್ಪಣೆಯಾಗಿದೆ. ಇದಕ್ಕಾಗಿ ಅಹರ್ನಿಶಿ ದುಡಿದ ದುಡಿದ ಸ್ವಯಂಸೇವಕರಿಗೆ, ಸಂಘಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಲು ಶ್ರೀಗಳು ಮರೆಯಲಿಲ್ಲ. ಬೆಂಗಳೂರಿನಲ್ಲಿ 25 ಮನೆಗಳಲ್ಲಿ ನೂರಕ್ಕೂ ಹೆಚ್ಚು ಬ್ರಾಹ್ಮಣರಿಗೆ ಸ್ವಯಂಪ್ರೇರಣೆಯಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಗಳೇ ಎಲ್ಲ ಭಕ್ತರಿಗೆ ದಕ್ಷಿಣೆಯನ್ನು ನೀಡಿದ್ದಲ್ಲದೆ ತಾವೇ ಸ್ವತಃ ಬಂದು, ದಿಗ್ವಿಜಯ ಶ್ರೀರಾಮ ಸ್ವೀಕರಿಸಿದ ನೈವೇದ್ಯ ಸ್ವೀಕರಿಸಬೇಕೆಂದು ಹೇಳಿದರು.

English summary
Uttaradi Mutt witnessed unique incident in India. More than lakh devotees were served with Ramadevara prasada at a time in 68 cities all over India, under the guidance of Sri Satyatma Teertha Swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X