ಚಾಲನೆ ವೇಳೆ ಬ್ಲೂಟೂತ್ ಬಳಿಸಿದ್ರೂ ಬೀಳುತ್ತೆ ದಂಡ!
ಬೆಂಗಳೂರು, ಅ. 01: ರಾಜಧಾನಿ ಬೆಂಗಳೂರಿನಲ್ಲಿ ಇನ್ಮುಂದೆ ಇಯರ್ ಪೋನ್ ಅಥವಾ ಬ್ಲೂಟೂತ್ ಬಳಿಸಿ ವಾಹನ ಚಾಲನೆ ಮಾಡಿದರೂ ದಂಡ ಬೀಳಲಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಾಹನ ಚಾಲನೆ ವೇಳೆ ಬ್ಲೂಟೂತ್ ಅಥವಾ ಇಯರ್ ಪೋನ್ ಬಳಸಿದರೂ ಅದಕ್ಕೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲು ಸಂಚಾರ ಪೊಲೀಸರು ತೀರ್ಮಾನಿಸಿದ್ದಾರೆ.
Recommended Video
ಮೊಬೈಲ್ ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಅಪಘಾತ ಪ್ರಕರಣಗಳು ಜಾಸ್ತಿಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ. ಆರ್. ರವಿಕಾಂತೇಗೌಡ ಮೋಟಾರು ವಾಹನ ಕಾಯ್ದೆ ಸೆಕ್ಷನ್ 194 ಅಡಿ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಶುಕ್ರವಾರದಿಂದಲೇ ಇಯರ್ ಪೋನ್ ಅಥವಾ ಬ್ಲೂಟೂತ್ ಬಳಸಿ ಮೊಬೈಲ್ ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡುವರ ಮೇಲೆ ನಿಗಾ ಇಡಲು ಆರಂಭಿಸಿದ್ದಾರೆ. ಪೊಲೀಸರು ಈಗಾಗಲೇ ಹಲವರ ವಿರುದ್ಧ ಕೇಸು ದಾಖಲಿಸಿದ್ದಾರೆ.
ವಾಹನ ಚಾಲನೆ ಮತ್ತು ಸಿಗ್ನಲ್ ನಲ್ಲಿ ಮೊಬೈಲ್ ಬಳಸಿ ಮಾತನಾಡುವಂತಿಲ್ಲ. ಆದರೆ, ಸಿಗ್ನಲ್ ನಲ್ಲಿ ಮ್ಯೂಸಿಕ್ ಅಥವಾ ಗೂಗಲ್ ಮ್ಯಾಪ್ ಬಳಕೆ ಮಾಡಬೇಕಿದ್ದರೂ ಮೊಬೈಲ್ ಸ್ಟಾಂಡ್ ಕಡ್ಡಾಯವಾಗಿ ಬಳಸಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸರಣಿ ಅಪಘಾತಗಳ ಹೊಡೆತ: ಇತ್ತೀಚೆಗೆ ಕೋರಮಂಗಲದ ಬಳಿ ಆಡಿ ಕಾರು ಅಪಘಾತಕ್ಕೀಡಾಗಿ ಏಳು ಮಂದಿ ಯುವಕರು ಸಾವಿಗೀಡಾಗಿದ್ದರು. ತಮಿಳುನಾಡಿನ ಹೊಸೂರು ಶಾಸಕ ಪ್ರಕಾಶ್ ಅವರ ಪುತ್ರ ಸೇರಿದಂತೆ ಏಳು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣವಾಗಿತ್ತು. ಇದಾದ ಎರಡನೇ ದಿನಕ್ಕೆ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಬಳಿ ಕಾರು ಡಿಕ್ಕಿ ಹೊಡೆದು ಇಬ್ಬರು ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಘೋರವಾಗಿ ಸಾವನ್ನಪ್ಪಿದ್ದರು. ಈ ಎರಡೂ ಅಪಘಾತ ಪ್ರಕರಣಗಳು ರಾಷ್ಟ್ರದ ಗಮನ ಸೆಳೆದಿದ್ದವು. ಇದೇ ರೀತಿ ಹಲವು ಅಪಘಾತ ಪ್ರಕರಣ ಸಂಭವಿಸುತ್ತಿದ್ದು, ವಾಹನ ಚಾಲನೆ ಮಾಡುವರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂಬುದು ಅನೇಕ ಪ್ರಕರಣದಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಮತ್ತಷ್ಟು ಬಿಗಿ ಗೊಳಿಸಲು ಸೂಚಿಸಲಾಗಿದೆ.
ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ: ಕೊರೊನಾ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ತಪಾಸಣೆಯನ್ನು ತಾತ್ಕಾಲಿಕವಾಗಿ ರದ್ದು ಗೊಳಿಸಲಾಗಿತ್ತು. ಕಳೆದ ವಾರದ ಹಿಂದಷ್ಟೇ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲು ನಗರದ 40 ಸಂಚಾರ ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್ ಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಕಳೆದ ಒಂದು ವಾರದಿಂದ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧವೂ ಕಾರ್ಯಾಚರಣೆ ಆರಂಭಿಸಲಾಗಿದೆ. ಇದರ ಜತೆಗೆ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದವರನ್ನು ಬಂಧಿಸಲಾಗಿತ್ತು.

ಅಪರಾಧ ಕೃತ್ಯ ನಿಯಂತ್ರಣ: ಪೊಲೀಸ್ ಆಯುಕ್ತರ ಸಭೆ : ರಾಜಧಾನಿಯಲ್ಲಿ ರೌಡಿ ಪೋಷಿತ ಲ್ಯಾಂಡ್ ಮಾಫಿಯಾ, ಗ್ಯಾಂಬ್ಲಿಂಗ್ , ವಿದೇಶಿ ಡ್ರಗ್ ಮಾಫಿಯಾ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಸೂಚಿಸಿದ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಗೃಹ ಸಚಿವರ ಸೂಚನೆ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಪೊಲೀಸ್ ಆಯುಕ್ತರು, ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ವಿಭಾಗದ ಡಿಸಿಪಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ರೌಡಿ ಚಟುವಟಿಕೆ ನಿಗ್ರಹ, ಗ್ಯಾಂಬ್ಲಿಂಗ್, ಡ್ರಗ್ ದಂಧೆ ಸೇರಿದಂತೆ ಸಂಘಟಿತ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications