Uber Bus Service: ಬೆಂಗಳೂರು ಐಟಿ ಕಾರಿಡಾರ್‌ಗಳಿಗೆ 'ಉಬರ್ ಬಸ್' ಸೇವೆ: ಪ್ರಯಾಣ ದರ
ಬೆಂಗಳೂರು, ಅಕ್ಟೋಬರ್ 25: ದೇಶದ ವಿವಿಧ ಮಹಾನಗರಗಳಲ್ಲಿ 'ಉಬರ್ ಬಸ್ ಸೇವೆ' ನೀಡುತ್ತಿರುವ 'ಉಬರ್ ಇಂಡಿಯಾ ಮತ್ತು ದಕ್ಷಿಣ ಏಷಿಯಾ' ಕಂಪನಿ ಇದೀಗ ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ನಗರದ ವಿವಿಧೆಡೆಯಿಂದ ಐಟಿ ಕಾರಿಡಾರ್‌ಗಳಿಗೆ ಇನ್ನುಮುಂದೆ ಉಬರ್ ಟ್ಯಾಕ್ಸಿ, ಕ್ಯಾಬ್ ಬಿಟ್ಟು ನೀವು ಬಸ್‌ನಲ್ಲಿ ಓಡಾಡುವಂತೆ ಮಾಡಲು ಕಂಪನಿಯು ಶೀಘ್ರವೇ 'ಉಬರ್ ಬಸ್ ಸೇವೆ' ಆರಂಭಿಸುವುದಾಗಿ ತಿಳಿಸಿದೆ.
ಈಗಾಗಲೇ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳು ಸೇರಿದಂತೆ, ಸಾರ್ವಜನಿಕರು ಉಬರ್ ಆಪ್ ಮೂಲಕ ಕ್ಯಾಬ್ ಸೇವೆ ಪಡೆಯುತ್ತಿದ್ದರೆ. ಇದರ ಮುಂದುವರಿದ ಭಾಗವಾಗಿ ಕಂಪನಿಯು ಐಟಿ ಕಾರಿಡಾರ್‌ಗಳಿಗೆ ಸಿಮೀತ ಕಿಲೋ ಮೀಟರ್‌ಗಳ ವರೆಗೆ ಷಟಲ್ ಉಬರ್ ಬಸ್ ಸೇವೆ ಪರಿಚಯಿಸಲು ಮುಂದಾಗಿದೆ.

'ಉಬರ್ ಇಂಡಿಯಾ ಮತ್ತು ದಕ್ಷಿಣ ಏಷಿಯಾ' ಕಂಪನಿ ಮುಖ್ಯಸ್ಥ ಪ್ರಭಜೀತ್ ಸಿಂಗ್ ಅವರೇ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ. ಈಗಾಗಲೇ ನಾವು ಹೈದರಾಬಾದ್, ಮುಂಬೈ, ದೆಹಲಿ, ಕೊಲ್ಕತ್ತಾ ನಗರಗಳಲ್ಲಿ ಈ ಉಬರ್ ಬಸ್ ಸೇವೆ ಆರಂಭಿಸಿದ್ದು, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಪಡೆದುಕೊಂಡಿದ್ದೇವೆ. ಬೇಡಿಕೆಯು ಹೆಚ್ಚಾಗುತ್ತಿದೆ.
ಟ್ರಾಫಿಕ್ ಮಧ್ಯ ಬಸ್‌ನಲ್ಲಿ ಸಂಚರಿಸಬಹುದು
ಇದೀಗ ಬೆಂಗಳೂರಿನಲ್ಲಿ ಅತೀ ಹೆಚ್ಚು ಟ್ರಾಫಿಕ್ ಇರುವ ಸಿಲ್ಕ್ ಬೋರ್ಡ್, ಕೆ.ಆರ್.ಪುರಂ ಪ್ರದೇಶಗಳಿಂದ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಐಟಿ ಕಾರಿಡಾರ್‌ಗಳಿಗೆ ಉದ್ಯೋಗಿಗಳನ್ನು ಕರೆದೊಯ್ಯಲು ಉಬರ್ ಬಸ್ ಸೇವೆ ಆರಂಭಿಸಲು ಪ್ಲಾನ್ ಮಾಡಿದ್ದೇವೆ. ಕಡಿಮೆ ಬೆಲೆಗೆ ಬಸ್ ಸೇವೆ ಒದಗಿಸಲಿದ್ದೇವೆ. ಇದರಿಂದ ನಗರ ಟ್ರಾಫಿಕ್ ಸಮಸ್ಯೆ ಸಹ ನೀಗಲಿದೆ. ಭಾರೀ ಟ್ರಾಫಿಕ್ ಮಧ್ಯ ಬಸ್‌ನಲ್ಲಿ ಸಂಚರಿಸಬಹುದು ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಕಂಪನಿಯು ಮಧ್ಯಸ್ಥಗಾರರ ಜೊತೆಗೆ ಮಾತುಕತೆ ನಡೆಸುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನ ವಿವಿಧ ಬಡಾವಣೆಗಳಿಂದ ಸುಮಾರು 200 ಬಸ್‌ಗಳು ಐಟಿ ಉದ್ಯೋಗಿಗಳನ್ನು ಕರೆ ತರಲಿವೆ.

ಉಬರ್ ಕ್ಯಾಬ್ ದರದಲ್ಲಿ ಏರಿಳಿತ ಸಾಮಾನ್ಯ
ಈಗಾಗಲೇ ಉಬರ್ ಕ್ಯಾಬ್ ಬಳಸುವ ಗ್ರಾಹಕರು, ಡ್ರೈವರ್ ಅಧಿಕ ಬೆಲೆ, ಕಮಿಷನ್ ಶುಲ್ಕ ವಿಧಿಸುತ್ತಾರೆ ಎಂಬ ಆರೋಪಗಳು ಇವೆ. ಪೀಕ್ ಹವರ್‌ಗಳಲ್ಲಿ ಕ್ಯಾಬ್ ಲಭ್ಯತೆ ಕಡಿಮೆ ಇದ್ದಾಗ ಹೀಗೆ ಅಧಿಕ ಹಣ, ಇಲ್ಲವೇ ಪ್ರಯಾಣ ದರದಲ್ಲಿ ಏರಿಳಿತವಾಗುತ್ತದೆ ಎಂದು ಉಬರ್ ಮುಖ್ಯಸ್ಥರು ಹೇಳಿದ್ದಾರೆ.
EV ಉಬರ್ ಬಸ್: ವೆಚ್ಚ ಕಡಿಮೆಯ ಭರವಸೆ
ಹೀಗಾಗಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದೇವೆ. ಪ್ರಯಾಣಿಕರಿಗೆ ಶುಲ್ಕ ಕಡಿಮೆ ಮಾಡಿ, ರಚನಾತ್ಮಕ ಸೇವೆ ಒದಗಿಸುವ ಉದ್ದೇಶ ಕಂಪನಿ ಹೊಂದಿದೆ. ಎಲೆಕ್ಟ್ರಿಕ್ ಬಸ್ ಇವಾಗಿರುವುದರಿಂದ ವೆಚ್ಚವು ಕಡಿಮೆ ಆಗುತ್ತದೆ ಎಂದು ಅವರು ಅಭಿಪ್ರಾಯ ಹೊರ ಹಾಕಿದ್ದಾರೆ.
ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ಸೂಕ್ತ ಬೆಲೆಯ ಜೊತೆಗೆ ಸೂಕ್ತ ಸೇವೆ ನೀಡಲಾಗುವುದು. ನಗರದಲ್ಲಿ ಬೆಳಗ್ಗೆ ಅಥವಾ ಸಂಜೆ, ಇಲ್ಲವೇ ಮಳೆ ಸಮಯದಲ್ಲಿ ಇನ್ನಿತರ ಪೀಕ್ ಅವರ್‌ಗಳಲ್ಲಿ ₹800 ಬದಲಿಗೆ ₹950 ನೀಡಿ ಸೇವೆ ಪಡೆಯಲು ಇಚ್ಛಿಸಿದರೆ ಅವರಿಗೆ ಕಾರುಗಳ ಲಭ್ಯ ಇರಲಿವೆ.
ಪ್ರಯಾಣದ ದರ ₹1,400 ಮಿತಿ ದಾಟಬಾರದು
ಈ ಬೆಲೆಯು ಗರಿಷ್ಠ ₹1,400 ಮಿತಿ ದಾಟಬಾರದು ಎಂದು ಕಂಪನಿ ಹೇಳುತ್ತದೆ. ಅಧಿಕ ವಾಹನಗಳು, ಸೇವೆ ಲಭ್ಯತೆ ವೇಳೆ ಬೆಲೆಯು ಕಡಿಮೆ ಇರಬೇಕು. ಬೇಡಿಕೆಗೆ ತಕ್ಕಂತೆ, ಅಗತ್ಯ ಸೇವೆ, ಲಭ್ಯತೆ ಮೇಲೆ ಬೆಲೆ ಹೊಂದಾಣಿಕೆ ಮಾಡಲಾಗುತ್ತದೆ.
ನಗರದಲ್ಲಿ ಅಗ್ರಿಗೇಟರ್ ಅಪ್ಲಿಕೇಶನ್, ಅಗ್ರಿಗೇಟರ್ ನಿಯಮಗಳು, ಪ್ರಯಾಣ ಶುಲ್ಕ, ಕಾರ್ಯವಿಧಾನ ಕುರಿತಂತೆ ಕಾನೂನು ಹೋರಾಟಗಳು ಎದುರಾಗಿವೆ. ಪ್ರಯಾಣಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಸೇವೆ ನೀಡಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕದ ಸಾರಿಗೆ ಇಲಾಖೆಗೆ ಉಬರ್ ಮುಖ್ಯಸ್ಥರು ಮನವಿ ಮಾಡಿದ್ದಾರೆ.












Click it and Unblock the Notifications