2 ತಿಂಗಳೊಳಗೆ ಬೆಳ್ಳಂದೂರು ಕೆರೆ ಕಳೆ ತೆಗೆಯಿರಿ: ಜಾರ್ಜ್
ಬೆಂಗಳೂರು, ಮಾರ್ಚ್ 2: ಮುಂದಿನ ಎರಡು ತಿಂಗಳೊಳಗಾಗಿ ಬೆಳ್ಳಂದೂರು ಕೆರೆಯಲ್ಲಿರುವ ಕಳೆ ತೆಗೆಯಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಚಿವ ಕೆ.ಜೆ. ಜಾರ್ಜ್ ಸೂಚಿಸಿದ್ದಾರೆ.
ಬೆಳ್ಳಂದೂರು ಕೆರೆ ಪ್ರದೇಶವನ್ನು ಗುರುವಾರ ಪರಿಶೀಲನೆ ನಡೆಸಿದ ಅವರು, ಕೆರೆಯಲ್ಲಿರುವ ಹುಲ್ಲಿನಂತಹ ಪದಾರ್ಥವನ್ನು ಸಂಪೂರ್ಣ ತೆರವುಗೊಳಿಸಬೇಕು. ಮುಂದಿನ ಎರಡು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಈಗಾಗಲೇ ಶೇ.40ರಷ್ಟು ಕಳೆ ಕೀಳಲಾಗಿದೆ. ಉಳಿದ ಶೇ.60ರಷ್ಟು ಪ್ರಮಾಣವನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಈ ಹಿಂದೆ ಕೆರೆ ಅಧ್ಯಯನ ನಡೆಸಿದ್ದ ತಜ್ಞರ ಸಮಿತಿಯ ಕೆರೆಯಲ್ಲಿ ಹುಲ್ಲನ್ನು ಸ್ವಲ್ಪ ಪ್ರಮಾಣದಲ್ಲಿ ಉಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತ್ತು. ಆದರೆ, ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ತೆರವುಗೊಳಿಸಲು ತಿಳಿಸಲಾಗಿದೆ ಎಂದರು.

ಕೆರೆಯ ಬದಿಯಲ್ಲಿ ಕೇಂದ್ರ: ಕೆರೆ ಪ್ರದೇಶದಲ್ಲಿ ಘನತ್ಯಾಜ್ಯ ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಕೆರೆ ಸುತ್ತಮುತ್ತ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕಳೆ ತೆಗೆಯುವ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಸಿಸಿ ಕ್ಯಾಮರಾ ನಿರ್ವಹಣೆ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಕೆರೆ ಶುದ್ಧೀಕರಣಕ್ಕೆ ಕೇಂದ್ರ ಸರ್ಕಾರದ ಸಹಕಾರ ಇಲ್ಲ: ಬೆಳ್ಳಂದೂರು ಹಾಗೂ ವರ್ತೂರು ಕೆರೆ ಶುದ್ಧೀಕರಣಕ್ಕೆ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದು ಜಾರ್ಜ್ ಅಸಮಾಧಾನ ವ್ಯಕ್ತಪಡಿಸಿದರು. ಕೆರೆ ಅಭಿವೃದ್ಧಿಗಾಗಿ 800 ಕೋಟಿ ರೂ ನೀಡುವುದಾಗಿ ಕೇಂದ್ರದ ಅಂದಿನ ಪರಿಸರ ಸಚಿವ ಪ್ರಕಾಶ ಜಾವ್ಡೇಕರ್ ಹೇಳಿಕೆ ನೀಡಿದ್ದರು ಎಂದರು.












Click it and Unblock the Notifications