ಪಾರಿವಾಳ ಹಿಡಿಯಲು ಹೋದ ಬಾಲಕರಿಗೆ ತಗುಲಿದ ವಿದ್ಯುತ್ ತಂತಿ: ಸ್ಥಿತಿ ಗಂಭೀರ
ಬೆಂಗಳೂರು, ಡಿಸೆಂಬರ್ 2: ಪಾರಿವಾಳ ಮೇಲಿನ ಪ್ರೀತಿಗೆ ಅವುಗಳನ್ನು ಹಿಡಿಯಲು ಹೋಗಿ ಬಾಲಕರು ಪ್ರಾಣಕ್ಕೆ ಸಂಕಷ್ಟ ತಂದುಕೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಮಕ್ಕಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಪಾರಿವಾಳ ಹಿಡಿಯಲು ಹೋದ ಮಕ್ಕಳಿಗೆ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಇಬ್ಬರು ಬಾಲಕರು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ನಗರದ, ನಂದಿನಿ ಲೇಔಟ್‌ನ ವಿಜಯಾನಂದ ನಗರದಲ್ಲಿ ನಡೆದಿದೆ. ಗಾಯಾಳು ಬಾಲಕರು ವಿಜಯಾನಂದ ನಗರದ ನಿವಾಸಿಗಳಾದ ಸುಪ್ರೀತ್ (12) ಮತ್ತು ಚಂದ್ರು (10) ಎಂದು ಗುರುತಿಸಲಾಗಿದೆ.
ಬೆಂಗಳೂರು ಬಳಿ ಚಿರತೆ ಪ್ರತ್ಯಕ್ಷ, ಜನರ ಆತಂಕ
ಸುಪ್ರೀತ್ ಮತ್ತು ಚಂದ್ರುಗೆ ಪಕ್ಷಿಗಳ ಮೇಲೆ ಅಪಾರ ಪ್ರೀತಿ ಇತ್ತು. ಇಬ್ಬರೂ ಪಾರಿವಾಳಗಳನ್ನು ಹಿಡಿಯುವ ಹವ್ಯಾಸ ಹೊಂದಿದ್ದರು. ಗುರುವಾರ ಸಂಜೆ 6:30ರ ಸುಮಾರಿಗೆ ಇಬ್ಬರು ಬಾಲಕರು, ಮನೆಯ ಮೇಲಿನ ಹೈಟೆನ್ಶನ್ ವಿದ್ಯುತ್ ತಂತಿ ಬಳಿ ಪಾರಿವಾಳ ಹಿಡಿಯಲು ಮುಂದಾಗಿದ್ದಾರೆ. ಪಾರಿವಾಳಗಳನ್ನು ಹಿಡಿಯಲು ಕಬ್ಬಿಣದ ಕಂಬಿ ಉಪಯೋಗಿಸಿದ್ದಾರೆ.
ಈ ವೇಳೆ ಕಬ್ಬಿಣದ ಕಂಬಿ ಹೈಟೆನ್ಶನ್ ವಿದ್ಯುತ್ ತಂತಿಗೆ ತಗುಲಿದ್ದು, ಮನೆಯ ಮೇಲಿದ್ದ ಇಬ್ಬರು ಬಾಲಕರಿಗೆ ಶಾಕ್ ಹೊಡೆದಿದೆ. ಈ ವೇಳೆ ಸಂಭವಿಸಿದ ಶಾಕ್ ಸರ್ಕ್ಯೂಟ್‌ನಿಂದ ಘಟನಾ ಸ್ಥಳದಲ್ಲಿದ್ದ ಮನೆಯೊಂದರ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಸುಟ್ಟುಹೋಗಿದೆ. ಇನ್ನು ಘಟನೆಯಲ್ಲಿ ಗಂಭೀರ ಗಾಯಗೊಂಡು ಬಿದ್ದಿದ್ದ ಬಾಲಕರನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಲ್ಲಿ ಸುಪ್ರೀತ್ ಮತ್ತು ಚಂದ್ರು ಗಂಭೀರ ಗಾಯಗೊಂಡಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಸುಪ್ರೀತ್ ದೇಹ ಶೇಕಡಾ.80ರಷ್ಟು ಸುಟ್ಟು ಹೋಗಿದೆ ಎನ್ನಲಾಗಿದೆ. ಸದ್ಯ ಬಾಲಕರಿಗೆ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮತ್ತೋರ್ವ ಬಾಲಕ ಚಂದ್ರುಗೆ ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯ ಸ್ಥಿತಿ ಕಂಡು ಪೋಷಕರು ಆತಂಕಕ್ಕೊಳಗಾಗಿದ್ದಾರೆ.