ಬೆಂಗಳೂರು : ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ತಿರುವು
ಬೆಂಗಳೂರು, ಮೇ 19 : ಕೋರಮಂಗಲದಲ್ಲಿ ಇಬ್ಬರು ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.
ಮೇ 12ರ ಭಾನುವಾರ ಕೋರಮಂಗಲದ ಪಿಜಿಯಲ್ಲಿ ಕನ್ನಡ ಕಿರುತೆರೆ ನಟ ಮತ್ತು ಆತನ ಸ್ನೇಹಿತರು ಮಣಿಪುರ ಮೂಲದ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಆದರೆ, ಅವರು ತೃತೀಯ ಲಿಂಗಿಗಳು ಎಂಬುದು ಈಗ ಬಹಿರಂಗವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಲ ನಿವಾಸಿಗಳಾದ ರಾಕೇಶ್ (24), ಕ್ಯಾಬ್ ಚಾಲಕ ಮಣಿಕಾಂತ್ (25), ಪಾನಿಯೂರಿ ಮಾರುವ ಸೂರ್ಯ (23) ಎಂಬುವವರನ್ನು ಬಂಧಿಸಲಾಗಿದ್ದು, ಎಲ್ಲರೂ ಪೊಲೀಸರ ವಶದಲ್ಲಿದ್ದಾರೆ.

ಮೇ 12ರಂದು ಆನ್‌ಲೈನ್‌ನಲ್ಲಿ ಊಟ ಬುಕ್ ಮಾಡಿದ್ದ ಇಬ್ಬರು ತೃತೀಯ ಲಿಂಗಿಗಳು ಅದಕ್ಕಾಗಿ ಕಾಯುತ್ತಿದ್ದರು. ರಾತ್ರಿ 8.30ರ ಸುಮಾರಿಗೆ ಮನೆಯ ಕಾಲಿಂಗ್ ಬೆಲ್ ಸದ್ದು ಕೇಳಿ, ಊಟ ಬಂದಿರಬಹುದು ಎಂದು ಬಾಗಿಲು ತೆರೆದಿದ್ದರು.
ಚಾಕು ಹಿಡಿದು ಮನೆಗೆ ನುಗ್ಗಿದ ರಾಕೇಶ್ ಮತ್ತು ಆತನ ಇಬ್ಬರು ಸ್ನೇಹಿತರು ತೃತೀಯ ಲಿಂಗಿಗಳನ್ನು ಬೆದರಿಸಿದ್ದರು. ಬಟ್ಟೆ ಬಿಚ್ಚುವಂತೆ ಹೇಳಿ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಅವರ ಫೋನ್ ನಂಬರ್ ಪಡೆದ ಆರೋಪಿಗಳು, ಪೊಲೀಸರಿಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದರು.
ಮೇ 17ರ ಶುಕ್ರವಾರ ತೃತೀಯ ಲಿಂಗಿಗಳು ಸ್ನೇಹಿತರ ಸಹಾಯದಿಂದ ದೂರು ನೀಡಿದ್ದರು. ಮೇ 18ರಂದು ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಪೊಲೀಸರ ವಶದಲ್ಲಿದ್ದು ಪ್ರಕರಣದ ತನಿಖೆ ಮುಂದುವರೆದಿದೆ.












Click it and Unblock the Notifications