ರಜಾ ದಿನವು ಬಿಬಿಎಂಪಿ ಅಧಿಕಾರಿಗಳಿಗೆ ರಸ್ತೆಗುಂಡಿ ಮುಚ್ಚಲು ಸೂಚನೆ: ಎಲ್ಲೆಲ್ಲಿ ರಸ್ತೆಗುಂಡಿ ಮುಚ್ಚಲಾಗುತ್ತಿದೆ!
ಬೆಂಗಳೂರು, ಸೆಪ್ಟಂಬರ್ 15: ಐಟಿ ಕೇಂದ್ರ, ಉದ್ಯಾನಗರಿ ಎಂದೆಲ್ಲ ಕರೆಸಿಕೊಳ್ಳುವ ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಗೇನು ಕಡಿಮೆ ಇಲ್ಲ. ಕೋಟ್ಯಂತರ ರೂಪಾಯಿ ವ್ಯಯಿಸಿದರೂ ಸಹಿತ ರಸ್ತೆಗಳು ಹಾಳಾಗುತ್ತಿರುವುದು ತಪ್ಪಿಲ್ಲ. ಈ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಬಿಬಿಎಂಪಿ ಅಧಿಕಾರಿಗಳು ರಜಾದಿನಗಳಂದು ಸಹ ರಸ್ತೆಗುಂಡಿ ಮುಚ್ಚುವಲ್ಲಿ ನಿರತರಾಗಿದ್ದಾರೆ.
ಹೌದು, ನಗರದ ರಸ್ತೆ ಗುಂಡಿಗಳನ್ನು ನಿರಂತರವಾಗಿ ಮುಚ್ಚಲಾಗುತ್ತಿದೆ. ಸರ್ಕಾರಿ ರಜಾ ದಿನಗಳಲ್ಲೂ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ರವರು ನಿರ್ದೇಶಿಸಿದ್ದಾರೆ.

ಸದ್ಯ ಯಲಹಂಕ ಮತ್ತು ದಾಸರಹಳ್ಳಿ ವಲಯದ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿನ ರಸ್ತೆಗುಂಡಿ ಗುರುತಿಸಿ ಮುಚ್ಚುವ ಕೆಲಸ ನಡೆದಿದೆ. ಇವನ್ನು ಪರಿಶೀಲಿಸಿ ಮಾತನಾಡಿದ ತುಷಾರ್ ಗಿರಿನಾಥ್ ಅವರು, ನಗರದಲ್ಲಿ ನಿರಂತರವಾಗಿ ರಸ್ತೆ ಗುಂಡಿಗಳನ್ನು ದುರಸ್ತಿ ಮಾಡಲಾಗುತ್ತಿದೆ. ಇಂದಿನಿಂದ 3 ದಿನಗಳ ಕಾಲ ಸರ್ಕಾರಿ ರಜೆ ಇದೆ. ಈ ರಜಾ ದಿನಗಳಲ್ಲೂ ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಇಂಜಿನಿಯರ್ ಗಳು ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಬೇಕು ಎಂದು ತಿಳಿಸಿದರು.
ಸದ್ಯಕ್ಕೆ ಮಳೆ ಇಲ್ಲ: ಹಗಲು ರಾತ್ರಿ ದುರಸ್ತಿ ಕಾರ್ಯ
ಸದ್ಯ ರಾಜಧಾನಿಗೆ ಅಷ್ಟಾಗಿ ಮಳೆ ಬಂದಿಲ್ಲ. ನಗರದಲ್ಲಿ ಮಳೆ ಬರುವುದು ನಿಂತಿದ್ದು, ಗುತ್ತಿಗೆದಾರರಿಂದ ಹೆಚ್ಚು ಹಾಟ್ ಮಿಕ್ಸ್ ಪಡೆದು ಹಗಲು-ರಾತ್ರಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕಿದೆ. ಬಾಕಿ ಇರುವ ರಸ್ತೆಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚಿ ಸುಗಮ ಸಂಚಾರಕ್ಕೆ ಅನುಕು ಮಾಡಿಕೊಡಬೇಕು ಎಂದರು.

ವಲಯ ಆಯುಕ್ತರಾದ ಕರೀಗೌಡ ಅವರು ಮಾತನಾಡಿ, ಯಲಹಂಕ ವಲಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆ ಹಾಗೂ ವಾರ್ಡ್ ರಸ್ತೆಗಳಲ್ಲಿ ಗುಂಡಿಗಳನ್ನು ಗುರುತಿಸಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಈ ವರ್ಷದಲ್ಲಿ 1567 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬಾಕಿ ಇರುವ ರಸ್ತೆಗುಂಡಿಗಳು ಶೀಘ್ರವೇ ಮುಕ್ತಿಕಾಣಲಿವೆ ಎಂದು ವಿವರಿಸಿದರು.
ಯಲಹಂಕದಲ್ಲಿ 865 ಕಿಮೀ ರಸ್ತೆಗೆ ಡಾಂಬರು
ಬಿಬಿಎಂಪಿಯು ಎಂಟು ವಲಯಗಳ ಪೈಕಿ ಯಲಹಂಕ ವಲಯದಲ್ಲಿ ಬರೋಬ್ಬರಿ 865 ಕಿ.ಮೀ ಉದ್ದದ 5433 ರಸ್ತೆಗಳನ್ನು ಡಾಂಬರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ಶೀಘ್ರವೇ ಕೆಲಸ ಆರಂಭವಾಗಲಿದೆ. ಇನ್ನೂ 110 ಹಳ್ಳಿಗಳ ಪೈಕಿ ಯಲಹಂಕ ವಲಯದಲ್ಲಿ 14 ಹಳ್ಳಿಗಳು ಬರುತ್ತವೆ. ಇಲ್ಲಿ 89 ಕಿ.ಮೀ ಉದ್ದದ 499 ರಸ್ತೆಗಳು ಅಭಿವೃದ್ಧಿಗೊಳ್ಳಲಿವೆ.
ಯಲಹಂಕ ವಲಯ ಕಾರ್ಯ ಪ್ರಗತಿ
* ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 02
* ವಾರ್ಡ್ ಗಳ ಸಂಖ್ಯೆ: 14
* ವಾರ್ಡ್ ರಸ್ತೆಗಳ ಸಂಖ್ಯೆ: 9055
* ವಾರ್ಡ್ ರಸ್ತೆಗಳ ಉದ್ದ: 1348.59 ಕಿ.ಮೀ
* ಪ್ರಮುಖ ರಸ್ತೆಗಳ ಸಂಖ್ಯೆ: 24
* ಪ್ರಮುಖ ರಸ್ತೆಗಳ ಉದ್ದ: 97.14 ಕಿ.ಮೀ
* ಯಲಹಂಕ ವಲಯ ವ್ಯಾಪ್ತಿಯ ರಸ್ತೆಗಳ ಒಟ್ಟು ಉದ್ದ: 1444.74 ಕಿ.ಮೀ
ಅದೇ ರೀತಿ ದಾಸರಹಳ್ಳಿ ವಲಯದಲ್ಲಿ ರಸ್ತೆ ಗುಂಡಿ ಮುಚ್ಚಲಾಗುತ್ತಿದೆ. ಈ ಸಂಬಂಧ ಉಪ ಮುಖ್ಯಮಂತ್ರಿಗಳ ಆದೇಶಿಸಿದ್ದಾರೆ.
ದಾಸರಹಳ್ಳಿ ವಲಯದಲ್ಲಿ ಒಂದು ವಿಧಾನಸಭಾ ಕ್ಷೇತ್ರ ಮಾತ್ರ ಬರಲಿದೆ. ಇದು ಎಂಟು ವಲಯಗಳ ಪೈಕಿ ಅತೀ ಚಿಕ್ಕ ವಲಯವಾಗಿದೆ.
ಈ ವಲಯದಲ್ಲಿ ಕೇವಲ 27.82 ಚ.ಕಿ.ಮೀ ವ್ಯಾಪ್ತಿಯಲ್ಲಿದ್ದು, ಇಲ್ಲಿ ಬಿದ್ದಿದ್ದ ರಸ್ತೆಗುಂಡಿಗಳ ಪತ್ತೆ ಕಾರ್ಯ ಮುಗಿದು, ಇದೀಗ ತ್ವರಿತಗತಿಯಲ್ಲಿ ರಸ್ತೆಗುಂಡಿ ಮುಚ್ಚಲಾಗುತ್ತಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ವಲಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸುಮಾರು 20 ಲೋಡ್ ಡಾಂಬರಿನ ಅವಶ್ಯಕತೆಯಿದೆ. ರಸ್ತೆ ಗುಂಡಿ ಗಮನ ತಂತ್ರಾಂಶದಲ್ಲಿ ಬರುವ ದೂರುಗಳು ಹಾಗೂ ಇಂಜಿನಿಯರ್ ಗಳು ಗುರುತಿಸುವ ರಸ್ತೆ ಗುಂಡಿಗಳನ್ನು ಶೀಘ್ರ ಮುಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ಸೇರಿ ಒಟ್ಟು 46.62 ಕಿ.ಮೀ ಪ್ರಮುಖ ರಸ್ತೆಗಳಿದ್ದು, ಬಹುತೇಖ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ವಿವಿಧ ಇಲಾಖೆಗಳಿಂದ ರಸ್ತೆ ಕತ್ತರಿಸುವ ಭಾಗವನ್ನು ಸದರಿ ಇಲಾಖೆಗಳಿಂದ ಮುಚ್ಚಿಸಿ ದುರಸ್ತಿ ಪಡಿಸಲಾಗುತ್ತಿದೆ ಎಂದರು.
ದಾಸರಹಳ್ಳಿ ವಲಯದಲ್ಲಿ ರಸ್ತೆ ದುರಸ್ತಿ ಕಾರ್ಯ
* ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 01
* ವಾರ್ಡ್ ಗಳ ಸಂಖ್ಯೆ: 11
* ವಾರ್ಡ್ ರಸ್ತೆಗಳ ಸಂಖ್ಯೆ: 4432
* ವಾರ್ಡ್ ರಸ್ತೆಗಳ ಉದ್ದ: 607.53 ಕಿ.ಮೀ
* ಪ್ರಮುಖ ರಸ್ತೆಗಳ ಸಂಖ್ಯೆ: 19
* ಪ್ರಮುಖ ರಸ್ತೆಗಳ ಉದ್ದ: 46.62 ಕಿ.ಮೀ
* ದಾಸರಹಳ್ಳಿ ವಲಯ ವ್ಯಾಪ್ತಿಯ ರಸ್ತೆಗಳ ಒಟ್ಟು ಉದ್ದ: 654.87 ಕಿ.ಮೀ.












Click it and Unblock the Notifications