ಬೆಂಗಳೂರು: 2023ರ ಆರಂಭಕ್ಕೆ ತುಮಕೂರು ರಸ್ತೆ ಪೀಣ್ಯ ಮೇಲ್ಸೇತುವೆ ಭಾರಿ ವಾಹನಗಳಿಗೆ ಮುಕ್ತ
ಬೆಂಗಳೂರು, ಸೆಪ್ಟಂಬರ್ 29: ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿರುವ ತುಮಕೂರು ರಸ್ತೆ (ಪೀಣ್ಯ) ಮೇಲ್ಸೇತುವೆಯಲ್ಲಿ ಭಾರಿ ವಾಹನಗಳಿಗೆ ಅವಕಾಶ ನೀಡಲು ತಜ್ಞರು ನಿರ್ಧರಿಸಿದ್ದಾರೆ. ಬಾಕಿ ದುರಸ್ತಿ, ಪರಿಶೀಲನೆ ನಂತರ ಡಿಸೆಂಬರ್ ಅಂತ್ಯಕ್ಕೆ ಇಲ್ಲವೇ 2023ರ ಹೊಸ ವರ್ಷದ ಜನವರಿ ತಿಂಗಳಲ್ಲಿ ಎಲ್ಲ ವಿಧದ ವಾಹನಗಳಿಗೆ ಮೇಲ್ಸೇತುವೆ ಮುಕ್ತವಾಗುವ ಸಾಧ್ಯತೆ ಇದೆ.
ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಇದು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಕಡೆ ಹೋಗುವ ಹತ್ತಾರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದನ್ನು ತುಮಕೂರು ರಸ್ತೆ ಮೇಲ್ಸೇತುವೆ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಉಂಟಾದ ಸಮಸ್ಯೆ ಹಾಗೂ ಪರಿಹಾರ ಕುರಿತು ಇತ್ತೀಚೆಗೆ ಮುಂಗಾರು ವಿಧಾನ ಮಂಡಲ ಅಧಿವೇಶನದಲ್ಲೂ ಚರ್ಚೆಯಾಗಿತ್ತು.
2021 ಡಿಸೆಂಬರ್‌ನಲ್ಲಿ ಇದೇ ಮೇಲ್ಸೇತುವೆ ಪಿಲ್ಲರ್ ಸಂಖ್ಯೆ 102-103ರ ನಡುವಿನ ಪ್ರೆಸ್‌ಟ್ರೆಸ್ ಕೇಬಲ್‌ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅಂದಿನಿಂದ ಎಲ್ಲ ವಿಧಧ ವಾಹನಗಳ ಸಂಚಾರವನ್ನು ನಿಷೇಧಿಸಿತ್ತು. ಇತ್ತೀಚೆಗಷ್ಟೇ ಲಘುವಾಹನಗಳಿಗೆ ಅವಕಾಶ ನೀಡಲಾಗಿತ್ತು.

ಫ್ಲೈಓವರ್‌ನ ಕೇಬಲ್‌ಗಳಿಗೆ ಹಾನಿ: ದುರಸ್ತಿ
ಮೇಲ್ಸೇತುವೆಯಲ್ಲಿ ಸಮಸ್ಯೆ ಕಂಡು ಬಂದ ನಂತರ ಮುಂಬಯಿಯ ತಜ್ಞರು ತಂಡ ಮೇಲ್ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿತ್ತು. ಪೀಣ್ಯ ಎಂಟನೇ ಮೈಲಿ ಸಮೀಪ ಫ್ಲೈಓವರ್‌ನ ಕೇಬಲ್‌ಗಳು ಹಾನಿಗೊಳಗಾಗಿದ್ದು ಬೆಳಕಿಗೆ ಬಂದಿತ್ತು. ತಿಂಗಳುಗಟ್ಟಲೇ ಅಧಿಕಾರಿಗಳ ಶ್ರಮದಿಂದ ದುರಸ್ತಿ ಕಾರ್ಯ ನಡೆದಿದೆ. ಭಾರತೀಯ ವಿಜ್ಞಾನ ಸಂಸ್ಥೆಗಳ ವಿಜ್ಞಾನಿಗಳು ಹಲವು ಪರೀಕ್ಷೆ ನಡೆಸಿದ್ದರು. 30 ಟನ್ ಭಾರದ ಒಟ್ಟು ಆರು ಟಿಪ್ಪರ್ ಲಾರಿಗಳನ್ನು ಮೇಲ್ಸೇತುವೆ ಮೇಲೆ ಓಡಿಸಿ ಸಾಮರ್ಥ್ಯ ಪ್ರಮಾಣ ಅಳೆಯಲಾಗಿತ್ತು. ಯಾವುದೇ ಸಮಸ್ಯೆ ಇಲ್ಲ ಎಂದ ಮೇಲೆ ಕಳೆದ ಫೆಬ್ರವರಿಯಲ್ಲಿ ಲಘು ವಾಹನಗಳಿಗೆ ಅವಕಾಶ ನೀಡಿದ್ದರು.

ಮೇಲ್ಸೇತುವೆ ಪೂರ್ಣವಾಗಿ ಸದೃಢವಾಗಬೇಕಿದೆ
ಮೇಲ್ಸೇತುವೆಯಲ್ಲಿ ಸದ್ಯಕ್ಕೆ ಭಾರಿ ವಾಹನಗಳು ಸಂಚಾರ ಮಾಡುವಷ್ಟು ಮೇಲ್ಸೇತುವೆ ಸದೃಢವಾಗಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಕೇಬಲ್‌ಗಳಲ್ಲಿ ದೋಷ ಸರಿಪಡಿಸುವ ಕೆಲಸ ಮುಂದುವರಿದಿದೆ. ಈ ದುರಸ್ತಿ ಕೆಲಸ ಮುಗಿಯಲು ಸುಮಾರು ಒಂದೂವರೆ ತಿಂಗಳು ಹಿಡಿಯಬಹುದು. ನಂತರ ಮೇಲ್ಸೇತುವೆಯನ್ನು ಪುನಃ ಪರಿಶೀಲನೆ, ಹಲವು ತಪಾಸಣೆಗಳಿಗೆ ಒಳಪಡಿಸಲಾಗುತ್ತದೆ. ಬಳಿಕ ಭಾರಿ ವಾಹನಗಳಿಗೆ ಅವಕಾಶ ನೀಡುವ ಕುರಿತು ತಜ್ಞರ ಜತೆ ಹೆದ್ದಾರಿ ಪ್ರಾಧಿಕಾರವು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ಇದೆಲ್ಲವೂ ಪೂರ್ಣಗೊಳ್ಳಲು ಡಿಸೆಂಬರ್‌ವರೆಗೆ ಕಾಯಬೇಕಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಅಧಿವೇಶನದಲ್ಲಿ ಪೀಣ್ಯ ಮೇಲ್ಸೇತುವೆ ಬಗ್ಗೆ ಪ್ರಸ್ತಾಪ
ಇತ್ತೀಚೆಗೆ ನಡೆದ ಮುಂಗಾರು ವಿಧಾನಮಂಡಲ ಅಧಿವೇಶನದಲ್ಲಿ ಸಹ ಪೀಣ್ಯ ಮೇಲ್ಸೇತುವೆ ದುರಸ್ತಿಯಿಂದ ಆ ಭಾಗದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ಕುರಿತು ಪ್ರಸ್ತಾಪಿಸಲಾಗಿತ್ತು. ಪ್ರತಿಪಕ್ಷದ ಶಾಸಕರು ಮಾತನಾಡಿ, ಕೇವಲ ಲಘುವಾಹನಗಳಿಗೆ ಅವಕಾಶ ನೀಡಿದ್ದು, ಭಾರಿ ವಾಹನಗಳಿಗೆ ಆದಷ್ಟು ಶೀಘ್ರವೇ ಸಂಚಾರಕ್ಕೆ ಅನುಕೂಲ ಮಾಡಲು ಸರ್ಕಾರ ಕ್ರಮ ವಹಿಸಬೇಕು. ಅಲ್ಲದೇ ಆ ಭಾಗದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಐಕಿಯಾ ಗೃಹ ಉಪಯೋಗಿ ಮಾರಾಟ ಮಳಿಗೆಯಲ್ಲಿ ಪಾರ್ಕಿಂಗ್ ಇಲ್ಲದ್ದರಿಂದ ಮಳಿಗೆಗೆ ಬರುವ ಗ್ರಾಹಕರು ರಸ್ತೆಯಲ್ಲಿ ವಾಹನ ನಿಲ್ಲಿಸುತ್ತಾರೆ. ಇದು ಸಹ ಸಂಚಾರ ದಟ್ಟಣೆಗೆ ಕಾರಣ ಎಂದು ತಿಳಿಸಿದ್ದರು.

ಕೇಂದ್ರ ಸಚಿವರ ಜತೆ ಮೇಲ್ಸೇತುವೆ ಬಗ್ಗೆ ಚರ್ಚೆ
ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಕೇಂದ್ರ ರಸ್ತೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೂ ಈ ಬಗ್ಗೆ ಚರ್ಚಿಸಿದ್ದೇನೆ. ಅಗತ್ಯ ದಾಖಲೆ ವರದಿ ಕಳುಹಿಸಿದರೆ ಅವರು ಮೇಲ್ಸೇತುವೆ ಶೀಘ್ರವೇ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ದುರಸ್ತಿ ಕಾರ್ಯ ನಡೆದಿದ್ದು, ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಿದ್ದರೂ ಸಂಚಾರ ದಟ್ಟಣೆ ಹೆಚ್ಚುತ್ತಿದ್ದರೆ ಅದರ ಪರಿಹಾರಕ್ಕೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದರು.












Click it and Unblock the Notifications