ವೈಟ್‌ಫೀಲ್ಡ್‌ನಿಂದ ಟ್ರಾಫಿಕ್ ಜಂಜಾಟವಿಲ್ಲದೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅತೀ ಕಡಿಮೆ ಸಮಯದಲ್ಲಿ ಪ್ರಯಾಣ
ಬೆಂಗಳೂರು, ನವೆಂಬರ್, 30: ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪೂರ್ವ ಸಂಪರ್ಕ ಸುರಂಗವನ್ನು ನಿರ್ಮಿಸಲು ಯೋಜಿಲಾಗುತ್ತಿದೆ. ಇದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ 16,500 ಕೋಟಿ ರೂಪಾಯಿ ಯೋಜನೆಯ ಭಾಗವಾಗಿದೆ. ಹಾಗಾದರೆ ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ ಹಾಗೂ ಯಾವಾಗ ಆರಂಭವಾಗಿ ಯಾವಾಗ ಮುಕ್ತಾಯವಾಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಸುರಂಗ ಮಾರ್ಗವು ವೈಟ್‌ಫೀಲ್ಡ್, ಮಹದೇವಪುರ ಮತ್ತು ಸರ್ಜಾಪುರ ಸೇರಿದಂತೆ ಪೂರ್ವ ಭಾಗದಲ್ಲಿರುವ ಇತರ ಪ್ರದೇಶಗಳು ಹಾಗೂ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪರ್ಯಾಯ ಮಾರ್ಗವನ್ನು ಒದಗಿಸುವ ಮೂಲಕ ಪೂರ್ವ ರಾಜ್ಯ ಹೆದ್ದಾರಿಯಿಂದ ಹೆಬ್ಬಾಳ ಮೇಲ್ಸೇತುವೆಯಲ್ಲಿ ಆಗತ್ತಿದ್ದ ಭಾರೀ ದಟ್ಟಣೆ ನಿಯಂತ್ರಿಸಲು ಸುರಂಗವನ್ನು ವಿನ್ಯಾಸಗೊಳಿಸಲಾಗಿದೆ.

ನಗರದ ಪೂರ್ವ ಭಾಗದ ಪ್ರದೇಶಗಳಿಗೆ ಈ ಸುರಂಗ ಮಾರ್ಗ ಸಂಪರ್ಕ ಕಲ್ಪಿಸಲಿದ್ದು, ಇದರಿಂದ ಈ ಭಾಗದ ತ್ವರಿತ ಬೆಳವಣಿಗೆಯನ್ನು ಕಾಣಬಹುದಾಗಿದೆ. ಪ್ರಸ್ತುತ, ವಿಮಾನ ನಿಲ್ದಾಣಕ್ಕೆ ಹೆಬ್ಬಾಳದ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಎಂಟ್ರಿ ಕೊಟ್ಟು ಪಶ್ಚಿಮಕ್ಕೆ ತಿರುವು ಪಡೆದು ಪ್ರವೇಶಿಸಬಹುದಾಗಿದೆ.
ಇದೀಗ ನಿರ್ಮಾಣ ಆಗುತ್ತಿರುವ ಸುರಂಗ ಮಾರ್ಗವು ಪೂರ್ವ ರಾಜ್ಯ ಹೆದ್ದಾರಿಯಿಂದ ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಭವಿಸುತ್ತಿದ್ದ ಭಾರೀ ದಟ್ಟಣೆಯನ್ನು ನಿಯಂತ್ರಿಸಲು ಪ್ರಮುಖ ಪಾತ್ರವಹಿಸಲಿದೆ. ವಿಮಾನ ನಿಲ್ದಾಣ ರಸ್ತೆ ಮಾರ್ಗದಲ್ಲಿ ಶೇಕಡಾ 30ರಷ್ಟು ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಅಲ್ಲದೆ, ನಗರಾದಾದ್ಯಂತ ಸಂಚಾರ ದಟ್ಟಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಿದ್ದಾರೆ ಅಧಿಕಾರಿಗಳು.
ವಿಮಾನ ನಿಲ್ದಾಣದ ಅಧಿಕಾರಿಗಳ ಹೇಳುವ ಪ್ರಕಾರ, ಈಗಾಗಲೇ ರಾಜ್ಯ ಸರ್ಕಾರಕ್ಕೆ 4 ಲೇನ್‌ಗಳನ್ನು ಒಳಗೊಂಡಿರುವ 2.5 ಕಿಲೋ ಮೀಟರ್ ಸುರಂಗದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಆದರೆ, ಯೋಜನೆ ಮಾತ್ರ ಇನ್ನೂ ಆರಂಭ ಆಗಿಲ್ಲ. ಈ ಸುರಂಗ ಮಾರ್ಗದ ಮೂಲಕ ವೈಟ್ ಫೀಲ್ಡ್‌ನಿಂದ ನಗರದ ವಿವಿಧ ಭಾಗಗಳಿಗೆ ತಲುಪಲು ಸುಮಾರು 30 ನಿಮಿಷಗಳ ಪ್ರಯಾಣದ ಸಮಯ ಕಡಿಮೆ ಆಗಲುದೆ.
ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಹೆಬ್ಬಾಳವನ್ನು ಸಂಪರ್ಕಿಸುವ 18 ಕಿಲೋ ಮೀಟರ್ ಸುರಂಗ ಮಾರ್ಗವನ್ನು ನಿರ್ಮಿಸುವ ವೇಳೆ ಈ ಯೋಜನೆಯನ್ನು ಕೂಡ ಹಾಕಿಕೊಳ್ಳಲಾಗಿದೆ. ಇನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿಮಾನ ನಿಲ್ದಾಣದ ಮೆಟ್ರೋ ಮಾರ್ಗವನ್ನು ನೀಲಿ ಮಾರ್ಗವೆಂದು ಹಸರಿಸಿದೆ. ಇದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕಿಸುವ ಮಾರ್ಗ ಆಗಿದ್ದು, 58.19 ಕಿಲೋ ಮೀಟರ್ ಉದ್ದವನ್ನು ಒಳಗೊಂಡಿದೆ. 2026ರಲ್ಲಿ ಇಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಪೂರ್ವ ಸುರಂಗ ಮಾರ್ಗವು ವೈಟ್‌ಫೀಲ್ಡ್‌ನಿಂದ ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಈ ಸುರಂಗದ ನಿರ್ಮಾಣವು ಈ ವರ್ಷ ಪ್ರಾರಂಭವಾಗಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಣ್ಣೂರು ಜಂಕ್ಷನ್, ಕೊತ್ತನೂರು, ಕೆ.ನಾರಾಯಣಪುರ, ಮಿತ್ತಗಾನಹಳ್ಳಿ ಜಂಕ್ಷನ್ ಮತ್ತು ಬಾಗಲೂರು ಜಂಕ್ಷನ್‌ನಲ್ಲಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಾಯ್ತೆರೆದುಕೊಂಡಿವೆ. ಇದರಿಂದ ಸ್ಥಳೀಯ ನಿವಾಸಿಗಳು ಪ್ರತಿನಿತ್ಯವೂ ಪರದಾಡುವಂತಹ ಪರಿಸ್ಥಿನಿ ನಿರ್ಮಾಣವಾಗಿದೆ. ವೈಟ್‌ಫೀಲ್ಡ್ ಪ್ರದೇಶದ ನಿವಾಸಿಗಳು ಹೆಬ್ಬಾಳದ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಸುಮಾರು 1 ಗಂಟೆ 30 ನಿಮಿಷಗಳ ಸಮಯ ಬೇಕಾಗುತ್ತದೆ. ಆದರೆ ಬಾಗಲೂರು ಮೂಲಕ ಪ್ರಯಾಣ ಬೆಳೆಸಿದರೆ, ಸುಮಾರು 1 ಗಂಟೆ 15 ನಿಮಿಷಗಳು ಆಗುತ್ತದೆ.
ಬಿಐಎಎಲ್‌ನ ಸಿಇಒ ಹರಿ ಮಾರಾರ್, "ಸುರಂಗದ ವಿನ್ಯಾಸವು ಒಟ್ಟಾರೆ ಸಂಚಾರ ದಟ್ಟಣೆಯನ್ನು ನಿವಾರಣೆ ಮಾಡಲಿದೆ ಮತ್ತು ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ತುಂಬಾ ಉಪಯುಕ್ತವಾಗಲಿದೆ," ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಕರ್ನಾಟಕ ಉಪ ಸಿಎಂ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಮಾತನಾಡಿದ್ದು, ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಕಾಮಗಾರಿಯು 2025ರ ಆರಂಭದಲ್ಲೇ ಪ್ರಾರಂಭವಾಗಲಿದೆ. ಈ ಬಹುನಿರೀಕ್ಷಿತ ಯೋಜನೆಯು ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ ಸಂಚಾರವನ್ನು ಸುಗಮಗೊಳಿಸುತ್ತದೆ ಎಂದು ಹೇಳಿದ್ದರು.












Click it and Unblock the Notifications