ಸಾರಿಗೆ ನೌಕರರ ಆತ್ಮಹತ್ಯೆ: ಶ್ರೀರಾಮುಲು ವಜಾಗೆ ಎಎಪಿ ಮನವಿ
ಬೆಂಗಳೂರು, ಸೆಪ್ಟಂಬರ್ 14: ಸಾರಿಗೆ ನೌಕರರ ಸಾಲುಸಾಲು ಆತ್ಮಹತ್ಯೆ ಸಂಭವಿಸಿದೆ. ಸಾರಿಗೆ ಇಲಾಖೆ ನಿಭಾಯಿಸುವಲ್ಲಿ ವಿಫಲರಾ ಸಚಿವ ಶ್ರೀರಾಮುಲು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದೆ.
ಈ ವೇಳೆ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಾಗುವುದು. ಸಾರಿಗೆ ಇಲಾಖೆಯಲ್ಲಿ ಅಸಮರ್ಥ ನಾಯಕರಿರುವ ಕಾರಣಕ್ಕೆ ಸಾರಿಗೆ ನೌಕರರ ಸಾಲು ಸಾಲು ಆತ್ಮಹತ್ಯೆ ಸಂಭವಿಸಿದೆ. ಹೀಗಾಗಿ ಕೂಡಲೇ ಸಾರಿಗೆ ಸಚಿವ ಶ್ರೀರಾಮುಲುರನ್ನು ಸಂಪುಟದಿಂದ ಕೈಬಿಟ್ಟು ಯೋಗ್ಯರಿಗೆ ಆ ಸ್ಥಾನ ನೀಡಬೇಕೆಂದು ಕೋರಲಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 35ಕ್ಕೂ ಹೆಚ್ಚು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೇವಲ 15 ದಿನಗಳಲ್ಲಿ ಆರು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗೆ ನಿರಂತರವಾಗಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಚಿವರು ಹಾಗೂ ಅಧಿಕಾರಿಗಳು ಮೃತ ನೌಕರರ ಶವ ನೋಡಲು ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿಲ್ಲ. ಇದು ನಿಜಕ್ಕೂ ಅಮಾನವೀ ನಡೆ ಎಂದು ಅವರು ದೂರಿದರು.

ಸರ್ಕಾರದಿಂದ ವ್ಯವಸ್ಥಾಪಕರಷ್ಟೇ ಅಮಾನತು
ಆತ್ಮಹತ್ಯೆಗಳನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯ ಪ್ರತಿಭಟನೆ ಬಳಿಕ ಎಚ್ಚೆತ್ತುಕೊಂಡ ಸರ್ಕಾರವು ಕೇವಲ ಸಾರಿಗೆ ಡಿಪೋ ವ್ಯವಸ್ಥಾಪಕರೊಬ್ಬರನ್ನು ಅಮಾನತು ಮಾಡಿ ಸುಮ್ಮನಾಗಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸಲು ಕೂಡ ಸಾರಿಗೆ ಸಚಿವರಿಗೆ ಸಾಧ್ಯವಾಗದಿರುವುದು ನಿಜಕ್ಕೂ ದುರಂತವೇ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀರಾಮುಲುರನ್ನು ಸಂಪುಟದಿಂದ ವಜಾ ಮಾಡಿ
ಜನಸೇವೆಯಲ್ಲಿ ಸಾರಿಗೆ ನೌಕರರ ಪಾತ್ರ ಮಹತ್ವದ್ದಾಗಿದೆ. ಅವರಿಂದಾಗಿಯೇ ಇಂದು ಜನಸಾಮಾನ್ಯರಿಗೆ ಪ್ರಯಾಣ ಸಾಧ್ಯವಾಗುತ್ತಿದೆ. ಆದರೆ ಸರ್ಕಾರವು ಅವರನ್ನು ಶತ್ರುಗಳಂತೆ ನೋಡುತ್ತಿದೆ. ಸಾರಿಗೆ ನೌಕರರಿಗೆ ಅನ್ಯಾಯವಾಗುತ್ತಿರುವುದು ನೋಡಿಕೊಂಡು ಆಮ್ ಆದ್ಮಿ ಪಕ್ಷ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಸರ್ಕಾರವು ಶೀಘ್ರವೇ ಶ್ರೀರಾಮುಲುರನ್ನು ಸಂಪುಟದಿಂದ ವಜಾ ಮಾಡಿ, ಸಂತ್ರಸ್ತ ಸಾರಿಗೆ ನೌಕರರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಸಾರಿಗೆ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಸಾರಿಗೆ ನೀತಿ ರೂಪಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

ನೌಕರರ ಆತ್ಮಹತ್ಯೆಗೆ ಕಿರುಕುಳವೇ ಕಾರಣ
ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ಸಾರಿಗೆ ನೌಕರರ ಪೈಕಿ ಅನೇಕರು ಡೆತ್ ನೋಟ್ ಬರೆದಿಟ್ಟಿದ್ದಾರೆ. ಸಾವಿಗೆ ಇಲಾಖೆಯಲ್ಲಿನ ಕಿರುಕುಳವೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿ ಆರೋಪಿಸಿದ್ದಾರೆ. ಸಚಿವರು ಹಾಗೂ ಉನ್ನತ ಅಧಿಕಾರಿಗಳ ಅಕ್ರಮಗಳಿಂದಾಗಿ ಪ್ರಾಮಾಣಿಕ ನೌಕರರು ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ. 2020 ಹಾಗೂ 2021ರಲ್ಲಿ ಕೋವಿಡ್‌ನಿಂದಾಗಿ 110ಕ್ಕೂ ಹೆಚ್ಚು ಸಾರಿಗೆ ನೌಕರರು ಬಲಿಯಾಗಿದ್ದಾರೆ ಎಂದು ಅವರು ವಿವರಿಸಿದರು.

7 ಮಂದಿಗಷ್ಟೇ 30ಲಕ್ಷ ಪರಿಹಾರ
ಮೃತ ನೌಕರರ ಕುಟುಂಬಗಳಿಗೆ 30 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತಾದರೂ ಈವರೆಗೆ ಕೇವಲ ಏಳು ಕುಟುಂಬಗಳಿಗೆ ಮಾತ್ರ ಆ ಪರಿಹಾರ ದೊರೆತಿದೆ. ಸಾರಿಗೆ ಸಚಿವ ಶ್ರೀರಾಮುಲು ಅವರು ಕೋವಿಡ್ ಪರಿಹಾರ ದೊರಕಿಸಿಕೊಡುವಲ್ಲಿ ಸಹ ವಿಫಲರಾಗಿರುವುದು ಇದರಿಂದ ತಿಳಿಯುತ್ತದೆ ಎಂದು ಅವರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿಗಳು ಅಧಿವೇಶನ, ಇನ್ನಿತರ ಕಾರ್ಯಕ್ರಮದಲ್ಲಿ ನಿರತರಾಗಿರುವ ಕಾರಣ ಸರ್ಕಾರ ಮಟ್ಟದ ಕಾರ್ಯದರ್ಶಿಗಳನ್ನು ಮುಖಂಡರು ಬೇಟಿ ಮಾಡಿದ್ದಾರೆ. ಅಧಿಕಾರಿಗಳು ವಿಧಾನಸೌಧ ಮುತ್ತಿಗೆ ಹಾಗೂ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದರಿಂದ ಕೆಲವು ದಿನ ಎಎಪಿ ಗಡುವು ನೀಡಿದೆ. ಗಡುವಿನಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ ಮತ್ತೆ ವಿಧಾನಸೌಧ ಮುತ್ತಿಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಎಎಪಿ ಮುಖಂಡರಾದ ವಿಜಯ್ ಶರ್ಮ, ಸಂಚಿತ್ ಸವ್ಹಾನಿ, ಬಿ.ಟಿ.ನಾಗಣ್ಣ, ಜಗದೀಶ್ ವಿ ಸದಂ, ದರ್ಶನ್ ಜೈನ್, ಸುರೇಶ್ ರಾಥೋಡ್, ಜಗದೀಶ್ ಚಂದ್ರ, ಚನ್ನಪ್ಪ ಗೌಡ ನೆಲ್ಲೂರು, ಕುಶಲಸ್ವಾಮಿ ಇನ್ನಿತರರು ಭಾಗವಹಿಸಿದ್ದರು.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications