ಗಣೇಶೋತ್ಸವ: ಖಾಸಗಿ ಬಸ್‌ಗಳಿಂದ ಸುಲಿಗೆ: ಟಿಕೆಟ್ ದರ ದುಪ್ಪಟ್ಟು ಮಾಡಿವರ ಪರ್ಮಿಟ್ ರದ್ದಿಗೆ ಇಲಾಖೆ ಸಜ್ಜು
ಬೆಂಗಳೂರು, ಸೆಪ್ಟಂಬರ್ 05: ಗೌರಿ ಗಣೇಶ ಹಬ್ಬದಾಚರಣೆಗೆ ದಿನಗಣನೆ ಆಂಭವಾಗಿದೆ. ಗಣೇಶನನ್ನು ಸ್ವಾಗತಿಸಲು ಮನೆ ಮಂದಿಯಲ್ಲ ಸಜ್ಜಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರಿನಂತಹ ದೂರು ಊರುಗಳಿಂದ ತಮ್ಮ ತಮ್ಮ ಊರುಗಳತ್ತ ಜನರು ಹೊರಡುತ್ತಿದ್ದಾರೆ. ಈ ಅವಕಾಶವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು ಎಂದಿನಂತೆ ಈ ಬಾರಿಯು ಟಿಕೆಟ್ ದರವನ್ನು ಮನಬಂದಂತೆ ಹೆಚ್ಚಳ ಮಾಡಿದ್ದಾರೆ. ಅಂತವರ ಮೇಲೆ ಸಾರಿಗೆ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ಹೆಚ್ಚಿನ ಪ್ರಮಾಣದಲ್ಲಿ ದಂಡ ವಿಧಿಸಿದೆ.
ಹೌದು, ಪ್ರತಿ ಬಾರಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ಅಗತ್ಯ ವ್ಯವಸ್ಥೆ, ಹೆಚ್ಚುವರಿ ಬಸ್ ಸೌಲಭ್ಯಗಳ ಹೊರತಾಗಿಯು ಖಾಸಗಿ ಬಸ್‌ಗಳಿಗೆ ಬೇಡಿಕೆ ಇರುತ್ತದೆ. ಕೆಲವೇ ಗಂಟೆಗಳಲ್ಲಿ ಸಾರ್ವಜನಿಕ ಸಾರಿಗೆ ಬಸ್ ಬುಕ್ ಆಗಿಬಿಡುತ್ತವೆ. ಇದರಿಂದ ಪ್ರಯಾಣಿಕರಿಗೆ ಖಾಸಗಿ ಬಸ್ ಸಂಚಾರ ಅನಿವಾರ್ಯವಾಗಿಬಿಡುತ್ತವೆ.

ಸಾರಿಗೆ ಇಲಾಖೆ ಅಧಿಕಾರಿಗಳಿಂದ ಖುದ್ದು ಪರಿಶೀಲನೆ, ದಂಡ
ಇದೇ ಸಮಯಕ್ಕೆ ಕಾಯುವ ಖಾಸಗಿ ಬಸ್ ಮಾಲೀಕರು ಮನ ಬಂದಂತೆ ಟಿಕೆಟ್ ದರ ಹೆಚ್ಚಿಸುತ್ತಾರೆ. ಇದೀಗ ಗಣೇಶ ಹಬ್ಬದ ಪ್ರಯುಕ್ತ ಬುಧವಾರದಿಂದಲೇ ಬೆಂಗಳೂರಿನಿಂದ ಜನರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಇತ್ತ ಖಾಸಗಿ ಬಸ್ ದರ ಹೆಚ್ಚಿಗೆ ಮಾಡಿದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳ ಹತ್ತು ತಂಡ ನಗರದ ವಿವಿಧೆಡೆ ಪರಿಶೀಲನೆ ನಡೆಸಿವೆ.
ಬುಧವಾರ ರಾತ್ರಿ ಬೆಂಗಳೂರಿನ ಮೆಜೆಸ್ಟಿಕ್, ಗೊರಗುಂಟೆ ಪಾಳ್ಯ, ಹೆಬ್ಬಾಳ, ಆನಂದರಾವ್ ವೃತ್ತ, ನವರಂಗ, ವಿಜಯನಗರ, ಸ್ಯಾಟ್‌ಲೈಟ್, ಕಲಾಸಿಪಾಳ್ಯ ಸೇರಿದಂತೆ ಅನೇಕ ಕಡೆಗಳಲ್ಲಿ ಸಾರಿಗೆ ಇಲಾಖೆ ತಂಡಗಳು ತೆರಳಿ ಖಾಸಗಿ ಬಸ್ ಟಿಕೆಟ್ ದರ ಪರಿಶೀಲಿಸಿದ್ದಾರೆ. ಮನ ಬಂದಂತೆ ದುಪ್ಪಟ್ಟು ದರ ವಿಧಿಸಿದ ಖಾಸಗಿ ಬಸ್ ಮಾಲೀಕರಿಗೆ ಅತ್ಯಧಿಕ ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿವಿಧ ಬಸ್‌ಗಳ ಪರ್ಮಿಟ್ ರದ್ದಿಗೆ ನಿರ್ಧಾರ
ಅಲ್ಲದೇ ಹಬ್ಬದ ನೆಪ ಮಾಡಿಕೊಂಡು ಪ್ರಯಾಣಿಕರಿಂದ ಹೆಚ್ಚು ಹಣ ಕೀಳಲು ಮುಂದಾದ ಸುಮಾರು 20 ಖಾಸಗಿ ಬಸ್ ಗಳ ಪರವಾನಿಗೆ (ಪರ್ಮಿಟ್) ರದ್ದುಗೊಳಿಸಲು ತೀರ್ಮಾನಿಸಿದೆ. ಈ ಮೂಲಕ ಖಾಸಗಿ ಬಸಗಳಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. ಇದೊಂದು ರೀತಿಯ ಉತ್ತಮ ಬೆಳವಣಿಗೆ. ಏಕೆಂದು ಮುಂದೆಯು ಸಾಲು ಸಾಲು ಹಬ್ಬಗಳಿವೆ. ಪ್ರತಿ ಬಾರಿಯೂ ಹೀಗೆಯು ದುಪ್ಪಟ್ಟ ಹಣ ಹೆಚ್ಚಿಸಲಾಗುತ್ತದೆ ಎಂದು ಮೆಜೆಸ್ಟಿಕ್ ನಲ್ಲಿ ಪ್ರಯಾಣಿಕರೊಬ್ಬರು ತಿಳಿಸಿದರು.
ಸದ್ಯ ಬುಧವಾರದಿಂದಲೇ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ತೆರಳುವವರ ಸಂಖ್ಯೆ ಕಂಡು ಬಂದಿದೆ. ಹೀಗಾಗಿಅಲ್ಲಲ್ಲ ವಾಹನಗಳ ದಟ್ಟಣೆ ಕಂಡು ಬಂದಿದೆ. ಶುಕ್ರವಾರ, ಶನಿವಾರ ಹಬ್ಬದ ಇದೆ. ಭಾನುವಾರ ರಜಾದಿನ ಹಿನ್ನೆಲೆಯಲ್ಲಿ ಇಂದು ಗುರುವಾರ, ಶುಕ್ರವಾರ ಸಂಚರಿಸುವವರ ಸಂಖ್ಯೆ ಹೆಚ್ಚಿರುತ್ತದೆ.
ಹೀಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ, ದಂಡಾಸ್ತ್ರ ಪ್ರಯೋಗ ಮುಂದುವರಿಯಲಿದ್ದಾರೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಸಾರಿಗೆ ಬಸ್‌ಗಳು ಲಭ್ಯ
ಇನ್ನು ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 1500 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ಮುಂದಾಗಿದೆ. ಬೆಂಗಳೂರಿನಿಂದ ರಾಜ್ಯದ ಇತರ ಜಿಲ್ಲೆಗಳಿಗೆ ಮತ್ತು ಭಾನುವಾರ ಅಲ್ಲಿಂದ ಬೆಂಗಳೂರಿಗೆ ಈ ಬಸ್‌ಗಳು ಓಡಾಡಲಿವೆ. ಅಲ್ಲದೇ ಬೇರೆ ಬೇರೆ ಘಟಕಗಳಿಂದ ಹೆಚ್ಚುವರಿ ಬಸ್ ಸಂಚಾರ ಸೇವೆ ನೀಡಲಿವೆ. ಇನ್ನೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯಿಂದ ನೂರಾರು ಬಸ್‌ಗಳನ್ನು ಹಬ್ಬದ ಪ್ರಯುಕ್ತ ಬಿಡಲಾಗಿದೆ. ಈ ಬಸ್‌ಗಳ ಆಸನಗಳನ್ನು ನೀವು ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಲು ಅವಕಾಶ ಇದೆ.












Click it and Unblock the Notifications