ಸಾರಿಗೆ ನೌಕರರ ಆತ್ಮಹತ್ಯೆ: ಶ್ರೀರಾಮುಲು ರಾಜೀನಾಮೆಗೆ ಎಎಪಿ ಆಗ್ರಹ
ಬೆಂಗಳೂರು, ಸೆಪ್ಟಂಬರ್ 02: ಮೂವರು ಸಾರಿಗೆ ನೌಕಕರ ಆತ್ಮಹತ್ಯೆಯ ನೈತಿಕ ಹೊಣೆ ಹೊತ್ತು ರಾಜ್ಯ ಸಾರಿಗೆ ಸಚಿವ ಸ್ಥಾನಕ್ಕೆ ಶ್ರೀರಾಮುಲುರವರು ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಭಾಸ್ಕರ್ ರಾವ್ ಆಗ್ರಹಿಸಿದರು.
ಶುಕ್ರವಾರ ಬೆಂಗಳೂರಿನ ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಭಾಸ್ಕರ್ ರಾವ್, "ಸಾರಿಗೆ ಸಚಿವ ಶ್ರೀರಾಮುಲು ಅಧಿಕಾರಾವಧಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮ ಚಟುವಟಿಕೆಗಳು ಮಿತಿ ಮೀರಿವೆ. ಬಿಎಂಟಿಸಿ ಸೇರಿದಂತೆ ಸಾರಿಗೆ ಇಲಾಖೆ ನೌಕರರು ಇಲಾಖೆಯ ಉನ್ನತ ಅಧಿಕಾರಿಗಳು ನೀಡುತ್ತಿರುವ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ದೂರಿದರು.
ಸರ್ಕಾರವು ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೇ ನಿಗಮದ ಸಾರಿಗೆ ನೌಕರರನ್ನು ಶತ್ರುಗಳಂತೆ ಕಾಣುತ್ತಿದೆ. ನೌಕರರ ಹಿತ ಕಾಪಾಡುವುದರಲ್ಲಿ ವಿಫಲರಾದ ಸಚಿವ ಶ್ರೀರಾಮುಲು ತಕ್ಷಣವೇ ರಾಜೀನಾಮೆ ನೀಡಬೇಕು. ಆ ಸ್ಥಾನಕ್ಕೆ ಸಮರ್ಥರು ನೇಮಕಗೊಂಡರೆ ಮಾತ್ರ ಇಲಾಖೆಯಲ್ಲಿನ ಸಾಲುಸಾಲು ಸಮಸ್ಯೆಗಳು ಬಗೆಹರಿಯಲಿವೆ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿವೆ ಎಂದು ಹೇಳಿದರು.

30ಕ್ಕೂ ಹೆಚ್ಚು ಸಾರಿಗೆ ನೌಕರರು ಆತ್ಮಹತ್ಯೆ
ಇದುವರೆವಿಗೂ ಸಾರಿಗೆ ಇಲಾಖೆಯ ವಿವಿಧ ನಿಗಮಗಳಲ್ಲಿ 30ಕ್ಕೂ ಹೆಚ್ಚು ನೌಕರರ ಆತ್ಮಹತ್ಯೆಗೆ ಕಾರಣರಾದ ಡಿಪೋ ವ್ಯವಸ್ಥಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯು ಪ್ರತಿಭಟನೆ ನಡೆಸಿದೆ. ಆದರೆ ಈವರೆಗೆ ರಾಜ್ಯ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.

ನೌಕರರ ಆತ್ಮಹತ್ಯೆ ವಿಚಾರದಲ್ಲಿ ಸರ್ಕಾರ ಮೌನ
ಜಿಗಣಿ, ಬನಶಂಕರಿ ಹಾಗೂ ಚನ್ನಸಂದ್ರ ಡಿಪೋಗಳ ಮೂವರ ಆತ್ಮಹತ್ಯೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ಮೌನ ತಾಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆತ್ಮಹತ್ಯೆ ಮಾಡಿಕೊಂಡ ನೌಕರರ ಕುಟುಂಬಗಳಿಗೆ ಈ ಸಮಯದಲ್ಲಿ ಪರಿಹಾರ ನೀಡುವ ಸೌಜನ್ಯವನ್ನೂ ಸರ್ಕಾರ ತೋರದಿರುವುದು ದುರಂತವೇ ಸರಿ. ಕೊರೊನಾ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಆ ಮೃತರ ಕುಟುಂಬಕ್ಕೂ ಸಹ ಪರಿಹಾರ ನೀಡದ ಬೇಜವಾಬ್ದಾರಿ ತೋರಿರುವುದು ಕರ್ನಾಟಕ ರಾಜ್ಯ ಸರ್ಕಾರ ಎಂದು ಭಾಸ್ಕರ್ ರಾವ್ ಹೇಳಿದರು.

ಸಾರಿಗೆ ಇಲಾಖೆ ನಿರ್ವಹಿಸುವಲ್ಲಿ ಸಚಿವರು ವಿಫಲ
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಮಾತನಾಡಿ, "ಸಾರಿಗೆ ಇಲಾಖೆಯ ಪುನಶ್ಚೇತನ ಹಾಗೂ ನೌಕರರ ಹಿತ ಕಾಪಾಡಲು ವಿಫಲರಾಗಿರುವ ಸಚಿವ ಶ್ರೀರಾಮುಲು ಅವರಿಗೆ ಆ ಸ್ಥಾನದಲ್ಲಿ ಮುಂದುವರಿಯುವ ಯೋಗ್ಯತೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡಲೇ ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಆತ್ಮಹತ್ಯೆ ಮಾಡಿಕೊಂಡ ನೌಕರ ಹೊಳೆ ಬಸಪ್ಪರವರು ಡಿಪೋ ಮ್ಯಾನೇಜರ್ ವಿರುದ್ಧ ಡೆತ್ ನೋಟ್ ಬರೆದಿಟ್ಟಿದ್ದರೂ ಪೊಲೀಸರು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಸೂಚನೆ ನೀಡಬೇಕಿದೆ," ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬಿಎಂಟಿಸಿ ಅಧ್ಯಕ್ಷರ ಬೇಜವಾಬ್ದಾರಿ ಇದೆ
ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವಿನಾಕಾರಣ ಆಮ್ ಆದ್ಮಿ ಪಕ್ಷವನ್ನು ದೂಷಿಸುತ್ತಿದ್ದಾರೆ. ಇದು ಅವರಿಗಿರುವ ನೌಕರರ ಮೇಲಿನ ನಿರ್ಲಕ್ಷ್ಯ, ಬೇಜವಾಬ್ದಾರಿ ಮತ್ತು ಲಂಚಬಾಕತನಕ್ಕೆ ಸಾಕ್ಷಿ ಆಗಿದೆ ಎಂದು ಸುರೇಶ್ ರಾಥೋಡ್ ಬಿಎಂಟಿಸಿ ಅಧ್ಯಕ್ಷರ ನಡೆ ಖಂಡಿಸಿದರು. ಸರ್ಕಾರ ಶೀಘ್ರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರ ಮನೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.












Click it and Unblock the Notifications