SWR: ರೈಲು ಪ್ರಯಾಣಿಕರೇ ಗಮನಿಸಿ: ಮೇ 25ರಂದು ಕೆಲವು ರೈಲುಗಳು 60-120 ನಿಮಿಷ ವಿಳಂಬ
ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಚನ್ನಸಂದ್ರ ಮತ್ತು ಯಲಹಂಕ ನಿಲ್ದಾಣಗಳ ನಡುವೆ ಸೇತುವೆ ಕಾಮಗಾರಿ ಕೈಗೊಳ್ಳಲಿರುವ ಹಿನ್ನಲೆಯಲ್ಲಿ ಮೇ 25ರಂದು ಹೊರಡುವ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳನ್ನು ನಿಯಂತ್ರಿಸಲಾಗುತ್ತದೆ. ಯಾವೆಲ್ಲ ಮಾರ್ಗದ ರೈಲುಗಳು ಎಷ್ಟು ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ ಎಂಬುದು ಇಲ್ಲಿದೆ.
ಹಜೂರ್ ಸಾಹಿಬ್ ನಾಂದೇಡ್-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು (16594) ಎಂದಿನಂತೆ ಮೇ 25 ರಂದು ಹೊರಡುತ್ತದೆ. ಈ ರೈಲನ್ನು ಮಾರ್ಗಮಧ್ಯೆ ನಿಯಂತ್ರಣಕ್ಕೊಳಪಡಲಿದೆ. 60 ನಿಮಿಷಗಳ ಕಾಲ ವಿಳಂಬವಾಗಿ ಸಂಚಾರ ಮಾಡಲಿದೆ.

ಮೇ 25 ರಂದು ಬೀದರ್-ಎಸ್‌ಎಂವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (06540) ಮಾರ್ಗಮಧ್ಯೆ 120 ನಿಮಿಷಗಳ ಕಾಲ ನಿಯಂತ್ರಣಕ್ಕೊಳಪಡಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಎಸ್‌ಆರ್ ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ಡೈಲಿ ಎಕ್ಸ್‌ಪ್ರೆಸ್ ರೈಲು (16593) ಬೆಂಗಳೂರಿನಿಂದ ಮೇ 25 ರಂದು 75 ನಿಮಿಷ ತಡವಾಗಿ ಹೊರಡಲಿದೆ. ಅಲ್ಲದೆ ಇದೇ ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ ಮತ್ತು ಯಲಹಂಕ ಬದಲಾದ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಈ ರೈಲು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ರಾಮನಗರದಲ್ಲಿ ರೈಲು ನಿಲುಗಡೆಗೆ ಚಾಲನೆ, ಹಳಿ ಅಭಿವೃದ್ಧಿ
ಸ್ಥಳೀಯ ನಾಗರಿಕರ ಸುಗಮ ಪ್ರಯಾಣಕ್ಕೆ ಅನುಕೂಲವಾಗುವಂತೆ, ರಾಮನಗರ ನಿಲ್ದಾಣದಲ್ಲಿ ರೈಲುಗಳ ಹೆಚ್ಚುವರಿ ನಿಲುಗಡೆಗೆ ಚಾಲನೆ ನೀಡಲಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು - ಮೈಸೂರು ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ (12614) ಚಾಲನೆ ನೀಡುವ ಮೂಲಕ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ನಿಲುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟರು.
ಬೆಂಗಳೂರು ಮತ್ತು ಮೈಸೂರು ಮಧ್ಯ ನಿತ್ಯ ಅನೇಕ ರೈಲುಗಳು ಓಡಾಡುತ್ತಿವೆ. ಇದರಲ್ಲಿ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ರಾಮನಗರದಲ್ಲಿ ನಿಲ್ಲಲಿದೆ. ಬೆಂಗಳೂರು-ಮೈಸೂರು ಮಾರ್ಗದಲ್ಲಿ ನಾಲ್ಕು ಪಥದ ರೈಲು ಹಳಿ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಎರಡು ಮಹಾನಗರಗಳ ರೈಲು ಸಾರಿಗೆ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ ಎಂದು ಸಚಿವ ವಿ.ಸೋಮಣ್ಣ ಅವರು ವಿವರಿಸಿದರು. ಈ ಮೂಲಕ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು ಭಾಗದ ಜನರಿಗೆ ಗುಡ್‌ನ್ಯೂಸ್ ನೀಡಿದರು.













Click it and Unblock the Notifications