ಮೆಜೆಸ್ಟಿಕ್ ಸುತ್ತ-ಮುತ್ತ ವಾಹನ ನಿಲ್ಲಿಸುವಂತಿಲ್ಲ
ಬೆಂಗಳೂರು, ಅ.1 : ಸರಣಿ ರಜೆಗಳ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ಉಂಟಾಗುವ ಸಂಚಾರ ದಟ್ಟಣೆಯನ್ನು ತಡೆಯಲು ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಬುಧವಾರದಿಂದ ಶುಕ್ರವಾರದ ತನಕ ಈ ಆದೇಶ ಅನ್ವಯವಾಗುತ್ತದೆ.
ಗಾಂಧಿ ಜಯಂತಿ, ವಿಜಯದಶಮಿ, ವಾರಾಂತ್ಯದ ಪ್ರಯುಕ್ತ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲು ಬುಧವಾರ ಸಂಜೆಯಿಂದ ಮೆಜೆಸ್ಟಿಕ್‌ಗೆ ಆಗಮಿಸುತ್ತಾರೆ. ಆದ್ದರಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಇದನ್ನು ತಪ್ಪಿಸಲು ವಾಹನ ನಿಲುಗಡೆ ನಿಷೇಧಿಸಲಾಗಿದೆ. [ಸರ್ಕಾರಿ ನೌಕರರಿಗೆ ಅ.6ರಂದು ಬಕ್ರೀದ್ ರಜೆ]

ಯಾವ ರಸ್ತೆಗಳಿಗೆ ಅನ್ವಯ : ಧನ್ವಂತರಿ ರಸ್ತೆ, ರೈಲು ನಿಲ್ದಾಣ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಪ್ಲಾಟ್ ಫಾರಂ ರಸ್ತೆ, ಖೋಡೇಸ್ ಜಂಕ್ಷನ್ನಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. ಮೈಸೂರು, ಕೊಡಗು ಮತ್ತು ಕೇರಳ ಕಡೆಗೆ ಹೋಗುವ ಬಸ್‌ಗಳು ಮೈಸೂರು ರಸ್ತೆಯ ಸ್ಯಾಟಲೈಟ್ ನಿಲ್ದಾಣದಿಂದ, ತಮಿಳುನಾಡು ಕಡೆಗೆ ಹೋಗುವ ಬಸ್‌ಗಳು ಶಾಂತಿನಗರ ನಿಲ್ದಾಣದಿಂದ ಹೊರಡಲಿವೆ.
ಪೀಣ್ಯಕ್ಕೆ ಹೋಗಬೇಕು : ಬಳ್ಳಾರಿ, ಹೊಸಪೇಟೆ ವಲಯದ ವೇಗದೂತ ಬಸ್ಸುಗಳು ಸೆ.21ರಿಂದ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ಸಂಚರಿಸುತ್ತಿವೆ. ಉತ್ತರ ಕರ್ನಾಟಕದ ನಾನಾ ಪ್ರದೇಶಗಳಿಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ (ಕೆಬಿಎಸ್) ಸಂಚರಿಸುತ್ತಿದ್ದ 146 ವೇಗದೂತ ಬಸ್‌ಗಳು ಪೀಣ್ಯಕ್ಕೆ ಸ್ಥಳಾಂತರಗೊಂಡಿವೆ. [ಪೀಣ್ಯದಿಂದ ಹೊರಡುವ ಬಸ್ಸುಗಳು]
ಅ.2ರ ಗುರುವಾರದಿಂದ ಸರಣಿ ರಜೆ ಇದೆ. ಸಾರ್ವಜನಿಕರು ಊರುಗಳಿಗೆ ತೆರಳಲು ಬುಧವಾರ ಸಂಜೆ ಕೆಂಪೇಗೌಡ ಬಸ್ ನಿಲ್ದಾಣ, ನಗರ ರೈಲು ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಲಿದೆ. ಆದ್ದರಿಂದ ಸಾರ್ವಜನಿಕರು ಬಿಎಂಟಿಸಿ ಬಸ್ ಅಥವಾ ಆಟೋಗಳಲ್ಲಿ ನಿಲ್ದಾಣಕ್ಕೆ ಬರಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಸಾಲು-ಸಾಲು ರಜೆಗಳು
* ಅ.2 ಗಾಂಧಿ ಜಯಂತಿ
* ಅ.3 ಆಯುಧಪೂಜಾ
* ಅ.4 ವಿಜಯದಶಮಿ
* ಅ. 5 ಭಾನುವಾರ
* ಅ. 6 ಬಕ್ರೀದ್












Click it and Unblock the Notifications