ರಮ್ಯಾ 'ಕೊಲೆಗಡುಕ' ಎಂದಿದ್ದು ಮೋದಿಗೋ, ಅಮಿತ್ ಶಾ ಅವರಿಗೋ?
ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಅವರಿಗೆ ಕೊಲೆಗಡುಕ ಎಂದು ಕರೆದರೇ ಕಾಂಗ್ರೆಸ್ ನಾಯಕಿ ರಮ್ಯಾ. ಗುಜರಾತ್ ಸಿಎಂ ವಿಜಯ್ ರುಪಾನಿ ಟ್ವೀಟ್ ಗೆ ಪ್ರತ್ಯುತ್ತರ ನೀಡುವಾಗ ಇಂಥದ್ದೊಂದು ಹೇಳಿಕೆ ನೀಡಿದ ರಮ್ಯಾ.
ನವದೆಹಲಿ, ಆಗಸ್ಟ್ 5: ಚಿತ್ರನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಅವರು ತಮ್ಮದೊಂದು ಟ್ವೀಟ್ ನಲ್ಲಿ 'ಕೊಲೆಗಡುಕ' ಎಂದ ಪದ ಉಪಯೋಗಿಸಿದ್ದು, ಇದು ಮೋದಿ ಅಥವಾ ಅಮಿತ್ ಶಾ ಅವರಿಗೇ ನೀಡಿದ ನೇರ ಟಾಂಗ್ ಎಂದು ಹೇಳಲಾಗಿದೆ.
ರಮ್ಯಾ ಅವರು ಹೀಗೆ ಟ್ವೀಟ್ ಮಾಡುವ ಹಿಂದಿನ ಕಾರಣ ಇಲ್ಲಿದೆ. ಶುಕ್ರವಾರ ಗುಜರಾತ್ ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಭೇಟಿ ಮಾಡಿದ್ದು, ಅಲ್ಲಿ ಅವರ ಕಾರಿನ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಇದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಿನ ಆರೋಪ, ಪ್ರತ್ಯಾರೋಪಗಳಿಗೆ ಗುರಿಯಾಗಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, ''ಕಾಂಗ್ರೆಸ್ ನ ಇಂಥ ನಾಟಕ (ಕಲ್ಲು ತೂರಾಟದ ಘಟನೆ) ಎಂಬುದು ಗುಜರಾತ್ ಜನರಿಗೆ ಗೊತ್ತಿಲ್ಲದ ವಿಚಾರವೇನಲ್ಲ'' ಎಂದು ಕೆಣಕಿದ್ದಾರೆ.
ಇದರಿಂದ ಕೆರಳಿದ ರಮ್ಯಾ ಅವರು, ''ಹೌದೌದು. ಕಾನೂನು ಸುವ್ಯವಸ್ಥೆಯನ್ನು ನೀವು ಒಬ್ಬ ಕೊಲೆಗಡುಕನಿಂದ ಕಲಿತವರು ತಾನೇ'' ಎಂದು ಟಾಂಗ್ ನೀಡಿದ್ದಾರೆ.

ಅವರ ಈ ಮಾತು, ಪ್ರಧಾನಿ ನರೇಂದ್ರ ಮೋದಿಗೋ, ಅಮಿತ್ ಶಾ ಅವರಲ್ಲಿ ಒಬ್ಬರಿಗೆ ಸಲ್ಲುತ್ತದೆ ಎಂದ ಮಾತು ಚಾಲ್ತಿಯಲ್ಲಿದೆ. ಇದಕ್ಕೆ ಉತ್ತರ ಖುದ್ದು ರಮ್ಯಾ ಅವರೇ ನೀಡಬೇಕು.











Click it and Unblock the Notifications