Bangalore Rain: ವರಮಹಾಲಕ್ಷ್ಮಿ ಹಬ್ಬ ದಿನವೇ ಬೆಂಗಳೂರಿನ ಹಲವೆಡೆ ಭರ್ಜರಿ ಮಳೆ
ಬೆಂಗಳೂರು, ಆಗಸ್ಟ್ 16: ಕಳೆದ ಒಂದು ವಾರದಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಸಂಜೆ ವೇಳೆ ಅಬ್ಬರಿಸುವ ವರುಣನ ಆರ್ಭಟಕ್ಕೆ ಜನ ಹೈರಾಣಾಗಿ ಹೋಗಿದ್ದಾರೆ. ವರಮಹಾಲಕ್ಷ್ಮಿ ಹಬ್ಬ ದಿನವಾದ ಇಂದು ಕೂಡ ಬೆಂಗಳೂರಿನ ವಿವಿಧ ಭಾಗದಲ್ಲಿ ಮಳೆಯಾಗಿದೆ. ಕಬ್ಬನ್ ಪಾರ್ಕ್ ರಸ್ತೆ, ವಿಧಾನ ಸೌಧ, ಕಾರ್ಪೊರೇಷನ್ ಸರ್ಕಲ್, ಶಾಂತಿನಗರ, ರಿಚ್ಮಂಡ್ ಸರ್ಕಲ್ ಹಾಗೂ ಚಿಕ್ಕಪೇಟೆ ಸೇರಿದಂತೆ ನಗರದ ವಿವಿಧೆಡೆ ಏಕಾಏಕಿ ಮಳೆಯಾಗಿದೆ.
ಬೆಂಗಳೂರಿನ ವಿವಿಧ ಭಾಗದಲ್ಲಿ ಮಳೆ ಆರಂಭವಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು. ಅಲ್ಲದೇ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇನ್ನು ಪೀಣ್ಯಾ, ದಾಸರಹಳ್ಳಿ, ಬಾಗಲಗುಂಟೆ ಭಾಗದಲ್ಲೂ ಮಳೆಯಾಗುತ್ತಿದ್ದು, ಇಂದು ರಾತ್ರಿ ಕೂಡ ವರುಣನ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಈ ಹಿಂದೆಯೇ ಹವಾಮಾನ ಇಲಾಖೆ ಸೂಚನೆ ನೀಡಿತ್ತು.

ಬೆಂಗಳೂರಿನ ಕೆಲ ಭಾಗದಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಇನ್ನು ಕೆಲವು ಭಾಗದಲ್ಲಿ ಬಿಸಿಲಿನ ಝಳ ಹೆಚ್ಚಾಗಿತ್ತು. ಆದರೆ ಇಂದು ಮಧ್ಯಾಹ್ನದ ಬಳಿಕ ಮಳೆ ಆರಂಭವಾಗಿದ್ದು, ಸಂಜೆ ವೇಳೆಗೆ ಮಳೆಯ ಅಬ್ಬರ ಜೋರಾಗಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಮತ್ತೆ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನುಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು, ಹಾಸನ ಜಿಲ್ಲೆಗಳಲ್ಲಿ ಇಂದು ಕೂಡ ಇಂದು ಮಳೆಯಾಗುತ್ತಿದೆ. ಹೀಗಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ.












Click it and Unblock the Notifications