Breaking; ಮತದಾರರ ಮಾಹಿತಿ ಕಳವು, ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು, ನವೆಂಬರ್ 24; ಬೆಂಗಳೂರು ನಗರದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಹಗರಣ ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಪ್ರಶ್ನೆಯನ್ನು ಕೇಳಿದೆ.
ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, 'ಚಿಲುಮೆ ಸಂಸ್ಥೆಯೊಂದಿಗೆ ಇಡೀ ಬಿಬಿಎಂಪಿಯೇ ಶಾಮೀಲಾಗಿದೆ' ಎಂದು ಗಂಭೀರ ಆರೋಪವನ್ನು ಮಾಡಿದೆ. 'ಸರ್ಕಾರದ ಹಸ್ತಕ್ಷೇಪವಿಲ್ಲದೆ, ನಿರ್ದೇಶನವಿಲ್ಲದೆ ಹಗರಣ ಇಷ್ಟು ವಿಸ್ತಾರವಾಗಿ ಹಬ್ಬಿಕೊಳ್ಳಲು ಸಾಧ್ಯವೇ?' ಎಂದು ಪ್ರಶ್ನಿಸಿದೆ.
'ಬೆಂಗಳೂರು ಉಸ್ತುವಾರಿ, ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ಸಿಎಂ ಅಡಿಯಲ್ಲೇ ಇರುವಾಗ ಬಸವರಾಜ ಬೊಮ್ಮಾಯಿ ಅವರ ಗಮನಕ್ಕಿಲ್ಲದೆ ಹಗರಣ ನಡೆಯಲು ಸಾಧ್ಯವೇ?' ಎಂದು ಪಕ್ಷ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

ಬಿಬಿಎಂಪಿ ನೀಡಿರುವ ದೂರಿನ ಅನ್ವಯ ಹಲಸೂರು ಗೇಟ್ ಠಾಣೆ ಪೊಲೀಸರು ಮತದಾರರ ಪಟ್ಟಿ ಪರಿಷ್ಕರಣೆ ಹಗರಣದ ಬಗ್ಗೆ ತನಿಖೆ ಕೈಗೊಂಡಿದೆ. 'ಚಿಲುಮೆ' ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಅವರು ಸದ್ಯ ಪೊಲೀಸರ ವಶದಲ್ಲಿಯೇ ಇದ್ದಾರೆ.
ಚಿಲುಮೆ ಸಂಸ್ಥೆಯೊಂದಿಗೆ ಇಡೀ ಬಿಬಿಎಂಪಿಯೇ ಶಾಮೀಲಾಗಿದೆ,
— Karnataka Congress (@INCKarnataka) November 24, 2022
ಸರ್ಕಾರದ ಹಸ್ತಕ್ಷೇಪವಿಲ್ಲದೆ, ನಿರ್ದೇಶನವಿಲ್ಲದೆ ಹಗರಣ ಇಷ್ಟು ವಿಸ್ತಾರವಾಗಿ ಹಬ್ಬಿಕೊಳ್ಳಲು ಸಾಧ್ಯವೇ?
ಬೆಂಗಳೂರು ಉಸ್ತುವಾರಿ, ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ಸಿಎಂ ಅಡಿಯಲ್ಲೇ ಇರುವಾಗ @BSBommai ಅವರ ಗಮನಕ್ಕಿಲ್ಲದೆ ಹಗರಣ ನಡೆಯಲು ಸಾಧ್ಯವೇ?#SayCM pic.twitter.com/9nHHS2tkUZ
ಪ್ರಕರಣದ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸರಿಗೆ ಬಿಬಿಎಂಪಿ ದೂರು ನೀಡುತ್ತಿದ್ದಂತೆಯೇ ರವಿಕುಮಾರ್ ತಲೆಮರೆಸಿಕೊಂಡಿದ್ದರು. ಮಲ್ಲೇಶ್ವರದ 17ನೇ ಕ್ರಾಸ್‌ನಲ್ಲಿರುವ ಚಿಲುಮೆ ಸಂಸ್ಥೆಯ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಬಳಿಕ ಭಾನುವಾರ ರವಿಕುಮಾರ್ ಬಂಧಿಸಲಾಗಿತ್ತು.
ರವಿಕುಮಾರ್, ಅವರ ಸಹೋದರ ಕೆಂಪೇಗೌಡ, ಯೋಜನಾಧಿಕಾರಿ ಪ್ರಜ್ವಲ್‌ರನ್ನು ಡಿಸೆಂಬರ್ 2ರ ತನಕ ಪೊಲೀಸರ ವಶಕ್ಕೆ ನೀಡಲಾಗಿದೆ. ಚಿಲುಮೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಇಬ್ಬರು ಸಿಬ್ಬಂದಿಗಳು ಇನ್ನೂ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ.
ಚುನಾವಣಾ ಆಯೋಗಕ್ಕೆ ದೂರು; ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದೆ. ಈಗಾಗಲೇ ಚುನಾವಣಾ ಆಯೋಗದ ತಂಡ ರಾಜ್ಯಕ್ಕೆ ಆಗಮಿಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದೆ.












Click it and Unblock the Notifications