ಮಹಾ ಮಳೆಗೆ ಸಿಕ್ಕಿ ನಡಗುತ್ತಿದ್ದ ಭಿಕ್ಷುಕನಿಗೆ ಊಟ- ಬಟ್ಟೆ ಕೊಟ್ಟು ಮಾನವೀಯತೆ ಮೆರೆದ ಎಎಸ್ಐ!
ಬೆಂಗಳೂರು, ನ. 06: ರಾಜಧಾನಿಯಲ್ಲಿ ಸುರಿದ ಭಾರೀ ಮಳೆಗೆ ಮಲಗಲು ಜಾಗವೂ ಇರಲಿಲ್ಲ. ಚಳಿಗೆ ಜ್ವರ ಬಂದು ನಡಗುತ್ತಿದ್ದ. ಹಸಿದ ಹೊಟ್ಟೆ ತುಂಬಿಸಿಕೊಳ್ಳುವ ಶಕ್ತಿಯೂ ಇರಲಿಲ್ಲ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ಭಿಕ್ಷುಕನೊಬ್ಬನಿಗೆ ಊಟ ಕೊಟ್ಟು, ಚಿಕಿತ್ಸೆ ಕೊಡಿಸಿ ಆರೈಕೆ ಮಾಡಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಎಎಸ್ಐ ಮಾನವೀಯತೆ ಮೆರೆದಿದ್ದಾರೆ. ಎಎಸ್ಐ ಸಿದ್ದಲಿಂಗೇಗೌಡ ಅವರ ಮಾನವೀಯ ಕೆಲಸ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಸತತವಾಗಿ ಸುರಿಯುತ್ತಿದ್ದ ಮಳೆಯಿಂದ ವಿಲ್ಸನ್ ಗಾರ್ಡನ್ ಡಬಲ್ ರೋಡ್ ಕೆರೆಯಂತಾಗಿತ್ತು. ರಾತ್ರಿ ವೇಳೆ ರೌಂಡ್ಸ್ ಮಾಡುತ್ತಿದ್ದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಎಎಸ್ಐ ಸಿದ್ದಲಿಂಗೇಗೌಡ ಅವರು ಭಿಕ್ಷುಕನನ್ನು ನೋಡಿದ್ದಾರೆ. ಮಳೆಗೆ ನೆನೆದು ನಡಗುತ್ತಿದ್ದ. ಸಮೀಪ ಹೋಗಿ ವಿಚಾರಿಸಿದರೆ ಮಲಗಲು ಜಾಗವೂ ಇಲ್ಲ. ಕೇಳಿದಾಗ ಒಂದು ದಿನದಿಂದ ಊಟವೂ ಇಲ್ಲದೇ ಹಸಿದ ಹೊಟ್ಟೆಯಲ್ಲಿ ಕಾಲ ಕಳೆಯುತ್ತಿದ್ದ.
ಆತನ ಸ್ಥಿತಿ ನೋಡಿದ ಎಎಸ್ಐ ಹೊಸ ಬಟ್ಟೆ ಕೊಡಿಸಿ ಅದನ್ನು ತಾವೇ ತೊಡಿಸಿದ್ದಾರೆ. ಆ ಬಳಿಕ ಊಟ ಕೊಡಿಸಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಭಿಕ್ಷುಕನಿಗೆ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಿದ್ದಾರೆ. ಭಿಕ್ಷುಕನಿಗೆ ಉಪಚಾರ ನೀಡಿದ ಬಳಿಕ ಆತ ಚೇತರಿಸಿಕೊಂಡಿದ್ದು, ಸುಮ್ಮನಹಳ್ಳಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಹೊಸ ಬಟ್ಟೆ ಕೊಡಿಸಿ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡ ಭಿಕ್ಷುಕ ಇದೀಗ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ವಿಶ್ರಾಂತಿ ಪಡೆಯುತ್ತಿದ್ದಾನೆ.
ಕಾನೂನು ಸುವ್ಯವಸ್ಥೆ ರೌಂಡ್ಸಗೆ ತೆರಳಿದ್ದ ಸಿದ್ದಲಿಂಗೇಗೌಡ ಭಿಕ್ಷುಕನ ವಿಚಾರದಲ್ಲಿ ತೋರಿದ ಮಾನವೀಯತೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದ ಪೊಲೀಸ್ ಅಧಿಕಾರಿಗಳು ಸಿದ್ದಲಿಂಗೇಗೌಡರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಪೊಲೀಸರೆಂದರೆ ಮಾನವೀಯತೆ ಇಲ್ಲದವರು ಎಂಬ ಭಾವನೆ ಜನರಲ್ಲಿದೆ. ಆದರೆ, ಸಿದ್ದಲಿಂಗೇಗೌಡರು ಮಾಡಿರುವ ಕಾರ್ಯ ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಪಶ್ಚಿಮ ವಿಭಾಗದ ಪೊಲೀಸರ ಕಾರ್ಯಾಚರಣೆ:
ಭಿಕ್ಷಾಟನೆ ನಿರ್ಮೂಲನೆಗಾಗಿ ಪಶ್ಚಿಮ ವಿಭಾಗದ ಪೊಲೀಸರು ಇತ್ತೀಚೆಗೆ ತಮ್ಮ ವ್ಯಾಪ್ತಿಯಲ್ಲಿರುವ ಭಿಕ್ಷುಕರನ್ನು ಹಿಡಿದು ನಿರಾಶ್ರಿತರ ಕೇಂದ್ರಕ್ಕೆ ಸಾಗಿಸುವ ವಿನೂತನ ಕಾರ್ಯಾಚರಣೆ ನಡೆಸಿದ್ದರು. ಸಿಗ್ನಲ್‌ಗಳಲ್ಲಿ, ಬೀದಿಗಳಲ್ಲಿ ಇದ್ದ ಭಿಕ್ಷುಕರನ್ನು ರಕ್ಷಣೆ ಮಾಡಿ ಕಾಮಾಕ್ಷಿಪಾಳ್ಯದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬಿಟ್ಟಿದ್ದರು. ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಇಂತಹ ಮಾನವೀಯ ಸೇವೆಯನ್ನು ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಾಲನೆ ನೀಡಿದ್ದರು. ಸುಮಾರು ನೂರಕ್ಕೂ ಹೆಚ್ಚು ಭಿಕ್ಷುಕರನ್ನು ಪತ್ತೆ ಮಾಡಿ ಆಶ್ರಯ ಕಲ್ಪಿಸಿದ್ದರು. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಆಪರೇಷನ್ ಸ್ಮೈಲ್ ಎಂಬ ಕಾರ್ಯಾಚರಣೆ ನಡೆಸಿ ಭಿಕ್ಷುಕ ಮಕ್ಕಳನ್ನು ರಕ್ಷಣೆ ಮಾಡಿದ್ದರು.

ಬೆಂಗಳೂರಲ್ಲಿ ಭಿಕ್ಷಾಟನೆ:
ರಾಜಧಾನಿ ಬೆಂಗಳೂರಿನಲ್ಲಿ ಭಿಕ್ಷಾಟನೆ ದೊಡ್ಡ ಮಾಫಿಯಾ ಆಗಿ ತಲೆ ಎತ್ತಿದೆ. ಊರು ಬಿಟ್ಟು ಬರುವ ಮಕ್ಕಳ ಅಂಗಾಂಗಗಳನ್ನು ಕತ್ತರಿಸಿ, ಅವರನ್ನು ವಿಕಲಚೇತನರನ್ನಾಗಿ ಮಾಡಿ ಜನ ಸಂದಣಿ ಪ್ರದೇಶಗಳಲ್ಲಿ ಅವರನ್ನು ಬಿಡಲಾಗುತ್ತದೆ. ಮಕ್ಕಳ ಮೂಲಕ ಭಿಕ್ಷಾಟನೆ ಮಾಡಿಸಿ ಬಂದ ಹಣವನ್ನು ತಾವೇ ಕಿತ್ತುಕೊಳ್ಳುತ್ತಾರೆ. ಭಿಕ್ಷೆ ಬೇಡಿ ಬಂದವರಿಗೆ ಕೇವಲ ಊಟ, ವಸತಿ ಕೊಡುವ ದೊಡ್ಡ ಜಾಲ ಬೆಂಗಳೂರಿನಲ್ಲಿ ಸಕ್ರಿಯವಾಗಿತ್ತು. ಮಕ್ಕಳ ಅಪಹರಣ, ಭಿಕ್ಷಾಟನೆ ಗಂಭೀರ ಸ್ವರೂಪ ಪಡೆದಕೊಂಡ ಬಳಿಕ ಬೆಂಗಳೂರು ಪೊಲೀಸರು ಆಪರೇಷನ್ ಸ್ಮೈಲ್ ಕಾರ್ಯಾಚರಣೆ ನಡೆಸಿದ್ದರು. ಈ ದಂಧೆಗೆ ಸಂಪೂರ್ಣ ಕಡಿವಾಣ ಬಿದ್ದಿದೆ ಎಂದು ಈಗಲೂ ನಂಬುವಂತಿಲ್ಲ. ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಮಾರ್ಕೆಟ್‌ನಲ್ಲಿ ಮಕ್ಕಳು, ವಿಕಲಚೇತನರು ಭಿಕ್ಷೆ ಬೇಡುವ ದಂಧೆ ಈಗಲೂ ನಡೆಯುತ್ತಿದೆ. ಇದರೊಂದಿಗೆ ಸಿಗ್ನಲ್‌ಗಳಲ್ಲಿ ಪುಟ್ಟ ಮಕ್ಕಳನ್ನು ಜೋಳಿಗೆಯಲ್ಲಿ ಹಾಕಿಕೊಂಡು ಮಹಿಳೆಯರು ಭಿಕ್ಷೆ ಬೇಡುವ ದಂಧೆ ಸಕ್ರಿಯವಾಗಿ ಮುಂದುವರೆದಿದೆ.
ಬೆಂಗಳೂರು ಮಾತ್ರವಲ್ಲ, ಮೆಟ್ರೊ ಸಿಟಿಗಳಲ್ಲಿ ಭಿಕ್ಷಾಟನೆ ದೊಡ್ಡ ಪಿಡುಗು ಆಗಿ ಬೆಳೆದು ನಿಂತಿದೆ. ರಾಜ್ಯದಲ್ಲಿ ಕಾಣೆಯಾಗುವ ಮಕ್ಕಳನ್ನು ಪತ್ತೆ ಮಾಡಿ ಅವರಿಗೆ ಕೆಲಸ ಕೊಡಿಸುವ ಸೋಗಿನಲ್ಲಿ ಭಿಕ್ಷಾಟನೆಗೆ ತಳ್ಳುವ ಜಾಲವಿದೆ. ಪ್ರತಿ ವರ್ಷ ಸಾವಿರಾರು ಮಕ್ಕಳು ಕಾಣೆಯಾಗುತ್ತಿದ್ದಾರೆ. ಮಕ್ಕಳು ಕಾಣೆಯಾಗುತ್ತಿರುವ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡಬೇಕು. ಆಗ ಭಿಕ್ಷಾಟನೆಯ ಮೂಲ ದಂಧೆಗೆ ಕಡಿವಾಣ ಬೀಳಲಿದೆ. ಕೇವಲ ಭಿಕ್ಷುರಕರಿಗೆ ಆಶ್ರಯ ನೀಡುವುದು ಮಾತ್ರವಲ್ಲ, ಇದು ಬಹುದೊಡ್ಡ ಜಾಲ ಇದನ್ನು ಬಡ ಸಮೇತ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದೊಡ್ಡ ಕಾರ್ಯ ಯೋಜನೆ ರೂಪಿಸಬೇಕು ಎಂದು ಭಿಕ್ಷಾಟನೆ ಮತ್ತು ಮಾನವ ಕಳ್ಳ ಸಾಗಣೆ ಜಾಲದ ಬಗ್ಗೆ ಅಧ್ಯಯನ ನಡೆಸಿರುವ ಪೊಲೀಸ್ ಇನ್ಸ್‌ಪೆಟ್ಟರ್ ಒಬ್ಬರು 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.