ಜಯನಗರ ಬಡಾವಣೆಗೊಂದು ಸ್ಮಾರ್ಟ್ ರಸ್ತೆ ನಿರ್ಮಾಣ
ಬೆಂಗಳೂರು, ಸೆ.3 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷೆಯ ಟೆಂಡರ್ ಶ್ಯೂರ್ ಯೋಜನೆಯಡಿ ಜಯನಗರಕ್ಕೆ ಸ್ಮಾರ್ಟ್ ರಸ್ತೆ ಲಭಿಸಿದೆ. ಮಂಗಳವಾರ ಜಯನಗರದ 11ನೇ ಮುಖ್ಯರಸ್ತೆಯಲ್ಲಿ ಪಾಲಿಕೆಯ ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಮಂಗಳವಾರ ಜಯನಗರದಲ್ಲಿ ಟೆಂಡರ್ ಶ್ಯೂರ್ ಯೋಜನೆಯಡಿ ಬಿಬಿಎಂಪಿ ನಿರ್ಮಿಸುವ ರಸ್ತೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಜಯನಗರ ದೇಶದಲ್ಲೇ ಸ್ಮಾರ್ಟ್ ಬಡಾವಣೆ. ಸ್ಮಾರ್ಟ್ ಬಡಾವಣೆಗೆ ಈಗ ಸ್ಮಾರ್ಟ್ ರಸ್ತೆ ಲಭಿಸಿದೆ ಎಂದರು.

ಜಯನಗರ ನಾಲ್ಕನೇ ಹಂತದಲ್ಲಿರುವ ಕೂಲ್ ಜಾಯಿಂಟ್ ಜಂಕ್ಷನ್ನಿಂದ ಹೊರವರ್ತುಲ ರಸ್ತೆಯವರೆಗೆ 2.7 ಕಿ.ಮೀ. ಉದ್ದದ ರಸ್ತೆಯನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಬಿಬಿಎಂಪಿ ಮೇಲ್ದರ್ಜೆಗೇರಿಸುತ್ತದೆ. ಸಾಕಷ್ಟು ಸಂಚಾರ ದಟ್ಟಣೆ ಹೊಂದಿರುವ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಆರಂಭವಾಗಿದ್ದು, ಇದು ಮಾದರಿ ರಸ್ತೆಯಾಗಲಿದೆ ಎಂದು ಶಾಸಕ ವಿಜಯ್ ಕುಮಾರ್ ಹೇಳಿದರು.
ಯೋಜನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಕಟ್ಟೆ ಸತ್ಯನಾರಾಯಣ ಅವರು, ನಗರದಲ್ಲಿ ಟೆಂಡರ್ ಶ್ಯೂರ್ ಯೋಜನೆಯಡಿ 200 ಕೋಟಿ ಮೊತ್ತದ ಯೋಜನೆಯನ್ನು ವಿವಿಧ ಭಾಗಗಳಲ್ಲಿ ಕೈಗೊಳ್ಳಲಾಗಿದೆ ಎಂದರು. [ರಸ್ತೆ ಅಭಿವೃದ್ಧಿಗಾಗಿ ಟೆಂಡರ್ ಶೂರ್ ಯೋಜನೆ]
ಜನದಟ್ಟಣೆ ಇರುವ ಪ್ರದೇಶದ ಪ್ರಮುಖ ರಸ್ತೆಗಳಲ್ಲಿ ಟೆಂಡರ್ ಶ್ಯೂರ್ ವ್ಯವಸ್ಥೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ನಗರದ ಒಟ್ಟು 12 ರಸ್ತೆಗಳಲ್ಲಿ ಈ ಯೋಜನೆ ರೂಪಿಸಲಾಗಿದೆ. ಏಳು ರಸ್ತೆಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಈ ಯೋಜನೆಯಡಿ ನಿರ್ಮಿಸುವ ರಸ್ತೆಯನ್ನು ಮತ್ತೆ ಅಗೆಯಲು ಅವಕಾಶ ಇಲ್ಲದಂತೆ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಹೇಗಿರುತ್ತದೆ ಟೆಂಡರ್ ಶ್ಯೂರ್ ರಸ್ತೆ : ಟೆಂಡರ್ ಶ್ಯೂರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯಡಿ ನಿರ್ಮಿಸುವ ರಸ್ತೆಗಳಲ್ಲಿ ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿಕಲ್ ಫೈಬರ್ ಕೇಬಲ್, ಬೀದಿದೀಪ, ಸಿಗ್ನಲ್ ದೀಪ, ಸೇರಿದಂತೆ ಎಲ್ಲದಕ್ಕೂ ವ್ಯವಸ್ಥೆ ಮಾಡಲಾಗಿರುತ್ತದೆ. [ಬೆಂಗಳೂರಿನಲ್ಲಿ ತಲೆಎತ್ತಲಿವೆ ಇನ್ನೂ 15 ಫ್ಲೈಓವರ್]
ಪಾದಚಾರಿಗಳಿಗೆ ಸಮರ್ಪಕವಾದ ಫುಟ್‌ಪಾತ್ ಸೌಲಭ್ಯ, ಸೈಕಲ್ ಸವಾರರಿಗೆ ಪ್ರತ್ಯೇಕ ಮಾರ್ಗ, ದೊಡ್ಡ ವಾಹನಗಳು ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್ ಸೇರಿ ವಿಶೇಷ ಸೌಲಭ್ಯಗಳೂ ಇರುತ್ತವೆ. ಒಮ್ಮೆ ಈ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಪುನಃ ಅದನ್ನು ಅಗೆಯುವ ಅಗತ್ಯವಿರುವುದಿಲ್ಲ.












Click it and Unblock the Notifications