ಅನಾರೋಗ್ಯ: ಟೆಕ್ಕಿ ಪುತ್ರನ ಹತ್ಯೆ, ಪತ್ನಿ ಆತ್ಮಹತ್ಯೆ
ಬೆಂಗಳೂರು, ಜೂನ್ 12: ಇದು ಹೆತ್ತವರ ಸಂಕಟ. ಎಚ್ಎಸ್ಆರ್ ಲೇಔಟಿನ ಅರಳೂರಿನಲ್ಲಿ 6 ವರ್ಷದ ಮಗನನ್ನು ನಡುರಾತ್ರಿ ಸಂಪ್ ನಲ್ಲಿ ಮುಳುಗಿಸಿ ಸಾಯಿಸಿದ ಬಳಿಕ ಆ ಮಗುವಿನ ತಾಯಿ ತಾನೂ ನೀರಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ.
ಏಕೆ ಏನಾಗಿತ್ತು ಆ ತಾಯಿಗೆ ಎಂದು ಕೇಳಿದರೆ ಆ ಮಗುವಿಗೆ ವಾಸಿಯಾಗದ ಕಾಯಿಲೆಯಿತ್ತು. ಹಾಗಾಗಿ ನೊಂದ ಹೆತ್ತ ಕರುಳು ಜೀವನ್ಮುಕ್ತಿ ಪಡೆದಿದ್ದಾಳೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಲಕ್ಷ್ಮೀ (27) ಮತ್ತು ಪುತ್ರ ಚಿನ್ಮಯಿ ಸಾಯಿಚರಣ್ ಮೃತಪಟ್ಟ ದುರ್ದೈವಿಗಳು. ಲಕ್ಷ್ಮೀ ಅವರ ಪತಿ ಸುಬ್ಬರಾವ್ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷ್ಮೀ- ಸುಬ್ಬರಾವ್ ದಂಪತಿಗೆ 7 ವರ್ಷದ ಹಿಂದೆ ಮದುವೆಯಾಗಿತ್ತು. ಅನುಪರೂಪದ ಜೋಡಿ. ಸಂಸಾರವೂ ಸುಖವಾಗಿಯೇ ಇತ್ತು. 2 ವರ್ಷ ವಿದೇಶದಲ್ಲಿ ಸುಬ್ಬರಾವ್ ಟೆಕ್ಕಿಯಾಗಿದ್ದರು. ಮುಂದೆ ದಂಪತಿಗೆ ಪುತ್ರ ಜನನವಾಗಿದೆ.

ಈ ಮಧ್ಯೆ ಮಗು ಹುಟ್ಟುತ್ತಲೇ ವಿರಳವಾದ ಕಾಯಿಲೆಯೊಂದಿಗೆ ಜನ್ಮ ಪಡೆದಿದೆ. ಚಿಂತಿತ ದಂಪತಿ ವಿದೇಶಗಳಲ್ಲಿ ಮತ್ತು ಭಾರತದಲ್ಲಿಯೂ ಅನೇಕ ಆಸ್ಪತ್ರೆಗಳಲ್ಲಿ ಮಗುವಿಗೆ ಟ್ರೀಟ್ಮೆಂಟ್ ಕೊಡಿಸುತ್ತಾ ಕಂದಮ್ಮನನ್ನು ಉಳಿಸಿಕೊಳ್ಳಲು ಕಂಕಣಬದ್ಧರಾಗಿದ್ದರು. ಆದರೆ ಪತಿ ಸುಬ್ಬರಾವ್ ಸಹನೆಯ ಕಟ್ಟೆ ಯಾವುದೋ ಕೆಟ್ಟ ಘಳಿಗೆಯಲ್ಲಿ ಒಡೆದಿದೆ. ಮಗುವಿಗೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಿಲ್ಲ ಎಂದು ವೈದ್ಯ ಲೋಕ ಕೈಚೆಲ್ಲಿದಾಗ ಅಪ್ಪ, ಪುತ್ರದಿಂದ ವಿಮುಖನಾಗಿದ್ದಾನೆ.
ಅದು ಎಳೆ ತಾಯಿಯ ಅಂತಃಕರಣಕ್ಕೆ ಗೊತ್ತಾಗಿದೆ. ಆಗಾಗ ಮಗುವಿನ ವಿಷಯದಲ್ಲಿ ಪತಿ-ಪತ್ನಿ ಜಗಳವಾಡತೊಡಗಿದ್ದಾರೆ. ಈ ಮಧ್ಯೆ, 2013ರ ಸೆಪ್ಟೆಂಬರಿನಲ್ಲಿ ಬೆಂಗಳೂರಿಗೆ ಬಂದ ದಂಪತಿ ಅರಳೂರಿನ ಲೇಕ್ ವ್ಯೂ ಅಪಾರ್ಟಮೆಂಟಿನಲ್ಲಿ ಮಗುವಿನೊಂದಿಗೆ ಜೀವನ ನಡೆಸತೊಡಗಿದ್ದಾರೆ. ಮಗುವಿನ ವಿಚಾರವಾಗಿ ಲಕ್ಷ್ಮೀ ಖಿನ್ನತೆ ಹೆಚ್ಚಾಗುತ್ತಾ ಹೋಗಿದೆ.
ಕೊನೆಗೆ, ಮಂಗಳವಾರ ರಾತ್ರಿ ಅಂತಿಮ ನಿರ್ಧಾರವೊಂದನ್ನು ತೆಗೆದುಕೊಂಡ ಲಕ್ಷ್ಮೀ ಅನ್ಯ ಮಾರ್ಗ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಸುಬ್ಬರಾವ್ ನೈಟ್ ಶಿಫ್ಟ್ ಮುಗಿಸಿಕೊಂಡು ರಾತ್ರಿ 1 ಗಂಟೆಗೆ ಮನೆಗೆ ಬಂದು ನಿದ್ರೆಗೆ ಜಾರಿದ್ದಾರೆ.
ಆಗ ಜಾಗೃತಗೊಂಡ ಲಕ್ಷ್ಮೀ, ಮನೆ ಮುಂದೆಯಿದ್ದ 7 ಅಡಿ ಆಳದ ಸಂಪಿನ ಮುಚ್ಚಳ ತೆಗೆದು, ಮೊದಲು ಮಗನನ್ನು ನೀರಿನಲ್ಲಿ ಮುಳುಗಿಸಿ, ಸಾಯಿಸಿದ್ದಾರೆ. ನಂತರ ಸಾವಕಾಶವಾಗಿ ತಾವೂ ಸಾವಿನ ಕದ ತೆರೆದಿದ್ದಾರೆ. ಅದೇ ನೀರಿನಲ್ಲಿ ಮಗುವನ್ನು ಅಪ್ಪಿಕೊಂಡು ಇಹಲೋಕದಿಂದ ಮುಕ್ತಿ ಪಡೆದಿದ್ದಾರೆ.
ನೈಟ್ ಶಿಫ್ಟ್ ಆಯಾಸ ಮುಗಿಸಿಕೊಂಡು ಬೆಳಗ್ಗೆ ಎದ್ದ ಸುಬ್ಬರಾವ್ ಗೆ ಅಕ್ಕಪಕ್ಕ ಪತ್ನಿ, ಪುತ್ರ ಇಲ್ಲದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಎದ್ದು ಮನೆಯಲ್ಲೆಲ್ಲಾ ತಡಕಾಡಿದ್ದಾರೆ. ಎಲ್ಲೂ ಕಾಣದಿದ್ದಾಗ ರೂಮಿನಲ್ಲಿ ಚೀಟಿಯೊಂದು ಕಣ್ಣಿಗೆ ಬಿದ್ದಿದೆ. ಅದು 'ಭಾವ, ನಾವು ಸಂಪಿನಲ್ಲಿದ್ದೇವೆ. ಬಂದು ನೋಡಿ' ಎಂದು ಲಕ್ಷ್ಮಿ ತೆಲುಗಿನಲ್ಲಿ ಬರೆದಿಟ್ಟಿದ್ದ ಪುಟ್ಟ ಹಾಳೆ.
ಎಚ್ಎಸ್ಆರ್ ಲೇಔಟ್ ಪೊಲೀಸರು ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಶಾಸ್ತ್ರ ಮುಂದುವರಿಸಿದ್ದಾರೆ.












Click it and Unblock the Notifications