ಮದ್ಯಪಾನ ತಪಾಸಣೆ: ಪೊಲೀಸರಿಗೆ ಡಿಕ್ಕಿ ಹೊಡೆದ ಟೆಕ್ಕಿ
ಬೆಂಗಳೂರು, ಮೇ. 26: ಮದ್ಯಪಾನ ತಪಾಸಣೆ ವೇಳೆ ಸಂಚಾರ ಪೊಲೀಸ್ ಮುಖ್ಯ ಪೇದೆಗೆ ದ್ವಿಚಕ್ರ ವಾಹನ ಸವಾರನೊಬ್ಬ ಡಿಕ್ಕಿ ಹೊಡೆದಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನಿರಂಜನ್ ಕುಮಾರ್, ಮುಖ್ಯಪೇದೆ ತಮ್ಮಯ್ಯ, ಪೇದೆಗಳಾದ ಗೋಪಾಲ್ ಹಾಗೂ ಕುಮಾರ್ ನಾಯಕ್ ಎಂಬುವರು ಮೇ.24 ಶನಿವಾರ ರಾತ್ರಿ ಸುಂಕದಕಟ್ಟೆ ಕೆಬ್ಬೆಹಳ್ಳಿ ಬಳಿ ಮದ್ಯಪಾನ ತಪಾಸಣೆ ನಡೆಸುತ್ತಿದ್ದರು.[ಸುಳ್ಳು ಕೇಸ್ ಬೆದರಿಕೆ: ಟ್ರಾಫಿಕ್ ಇನ್ಸ್‌ಪೆಕ್ಟರ್ ಸಸ್ಪೆಂಡ್]

ಈ ವೇಳೆ ಅನ್ನಪೂರ್ಣೇಶ್ವರಿ ಬಡಾವಣೆ ನಿವಾಸಿ ನಾಗರಬಾವಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ರಮೇಶ್(32) ಮದ್ಯಪಾನ ಮಾಡಿ ನಾಗರಬಾವಿ ಮುಖ್ಯರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ವೇಗವಾಗಿ ಬರುತ್ತಿದ್ದ. ಈ ವೇಳೆ ಸಂಚಾರ ಪೊಲೀಸರು ತಪಾಸಣೆಗಾಗಿ ರಮೇಶ್‌ನನ್ನು ತಡೆಯಲು ಮುಂದಾದಾಗ ಗಾಬರಿಗೊಂಡ ರಮೇಶ್ ತಪ್ಪಿಸಿಕೊಳ್ಳುವ ಭರದಲ್ಲಿ ಮುಖ್ಯ ಪೇದೆ ತಮ್ಮಯ್ಯ ಅವರಿಗೆ ಡಿಕ್ಕಿ ಹೊಡೆದು ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ.[ಟ್ರಾಫಿಕ್ ಪೊಲೀಸು ಕೆಲಸ ಯಾರಿಗೆ ಬೇಕು ಹೇಳಿ?]
ತಮ್ಮಯ್ಯ ಅವರ ಕಾಲಿಗೆ ತೀವ್ರವಾಗಿ ಗಾಯಗಳಾಗಿದ್ದು, ಅವರನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ಮಾಡಿದ ರಮೇಶ್‌ಗೂ ಸಣ್ಣ ಗಾಯಗಳಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಮೇಶ್ ಮದ್ಯಪಾನ ಮಾಡಿರುವುದು ಪರೀಕ್ಷೆ ವೇಳೆ ದೃಢಪಟ್ಟಿದೆ. ಪೊಲೀಸರ ತಪಾಸಣೆಗೆ ಅಸಹಕಾರ, ಡಿಕ್ಕಿ ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ರಮೇಶ್ ವಿರುದ್ಧ ಪ್ರಕರಣ ದಾಖಲಿಸಿಸಲಾಗಿದೆ.












Click it and Unblock the Notifications