ಭಕ್ತರ ಭೇಟಿಗೆ ನೇರವಾಗಿ ಸಿಗದ ಸ್ವಾಮಿ ನಿತ್ಯಾನಂದ; ಎಲ್ಲಿದ್ದೀರಾ ಬಿಡದಿ ಸ್ವಾಮಿ?
ಬೆಂಗಳೂರು, ಸೆಪ್ಟೆಂಬರ್ 25: ಬಿಡದಿ ಆಶ್ರಮದ ಸ್ವಾಮಿ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಆತ ಭಾರತ ದೇಶದಲ್ಲೇ ಇಲ್ಲ ಎಂಬ ಮಾಹಿತಿ ಹರಿದಾಡುತ್ತಿದೆ. ಎಲ್ಲೋ ದೂರದ ಕೆರೆಬಿಯನ್ ದ್ವೀಪಗಳ ಡೊಮಿನಿಯನ್ ರಿಪಬ್ಲಿಕ್ ನ ಫೈವ್ ಸ್ಟಾರ್ ಹೋಟೆಲ್ ನಿಂದ ಗ್ರೀನ್ ಟೆಕ್ ಟೆಕ್ನಾಲಜಿಯನ್ನು ಬಳಸಿ, ಬೆಳಗ್ಗೆ ಒಂದು- ಸಂಜೆ ಒಂದು ವಿಡಿಯೋ ಬಿಡುಗಡೆ ಮಾಡಲಾಗುತ್ತಿದೆ ಎಂಬುದು ಸದ್ಯಕ್ಕೆ ದೊರೆತಿರುವ ಮಾಹಿತಿ.
ಅದು ಹೇಗೆ ಆತ ದೇಶದಲ್ಲಿ ಇಲ್ಲ ಎಂಬ ಗುಮಾನಿ ಬಂದಿದೆ ಅಂದರೆ, ಕಳೆದ ಒಂದು ವರ್ಷದಿಂದ ಬಿಡದಿ ಆಶ್ರಮದಲ್ಲಿ ಸ್ವಾಮಿ ನಿತ್ಯಾನಂದನನ್ನು ವೈಯಕ್ತಿಕವಾಗಿ ಭೇಟಿ ಆದವರೇ ಇಲ್ಲ ಎನ್ನುತ್ತದೆ ಈ ಬಗ್ಗೆ ವರದಿ ಮಾಡಿರುವ ತಮಿಳಿನ ಜೂನಿಯರ್ ವಿಕಟನ್ ಪತ್ರಿಕೆ. ಅಷ್ಟು ಸುಲಭಕ್ಕೆ ದೇಶ ಬಿಟ್ಟು ಹೋಗುವುದಕ್ಕೆ ನಿತ್ಯಾನಂದಗೆ ಹೇಗೆ ಸಾಧ್ಯವಾಯಿತು ಎಂಬುದು ಮತ್ತೊಂದು ಪ್ರಶ್ನೆ.
ವೆನಿಜುವೆಲಾದ ನಕಲಿ ಪಾಸ್ ಪೋರ್ಟ್ ಮೂಲಕ ನೇಪಾಳ ಮಾರ್ಗವಾಗಿ ದೇಶ ಬಿಟ್ಟು ಹೋಗಿದ್ದು, ಹವಾಲಾ ಮೂಲಕ ಹಣವನ್ನು ಕೂಡ ತಾನು ತೆರಳಲಿರುವ ದೇಶಕ್ಕೆ ವರ್ಗಾವಣೆ ಮಾಡಿಕೊಂಡಿದ್ದಾರೆ ಸ್ವಾಮಿ ನಿತ್ಯಾನಂದ ಎನ್ನುತ್ತವೆ ಮೂಲಗಳು. ಸರಿ, ಅವರದೇ ವೆಬ್ ಸೈಟ್ ನಲ್ಲಿರುವ ಸಂಪರ್ಕ ಸಂಖ್ಯೆಗೆ ಪ್ರಯತ್ನ ಪಟ್ಟರೆ ಸಂಪರ್ಕ ಕೂಡ ಸಾಧ್ಯವಾಗುತ್ತಿಲ್ಲ. ಫೇಸ್ ಬುಕ್, ಯೂ ಟ್ಯೂಬ್ ಬಿಟ್ಟರೆ ಸ್ವಾಮಿಗಳು ಕೂಡ ಎಲ್ಲೂ ಕಾಣಿಸಿಕೊಂಡಿಲ್ಲ.

ಅಂದ ಹಾಗೆ, ಕರ್ನಾಟಕ ಪೊಲೀಸರಿಗೆ ಕೂಡ ಈ ಮಾಹಿತಿ ಬಹಳ ನಿಧಾನವಾಗಿ ಗೊತ್ತಾಗಿದೆ. ಈಗ ಎಚ್ಚೆತ್ತುಕೊಂಡಿದ್ದು, ನಿತ್ಯಾನಂದನನ್ನು ಭಾರತಕ್ಕೆ ವಾಪಸ್ ಕರೆತರುವ ಸಕಲ ಪ್ರಯತ್ನವನ್ನೂ ಮಾಡುತ್ತಿದ್ದಾರಂತೆ. ಆದರೆ ಈ ಎಲ್ಲ ಆರೋಪಗಳನ್ನು ಜತೆಗಿಟ್ಟುಕೊಂಡು ಸ್ವಾಮಿ ನಿತ್ಯಾನಂದನ ಅನುಯಾಯಿಗಳನ್ನು ಪ್ರಶ್ನಿಸಿದರೆ ಏನು ಹೇಳುತ್ತಾರೆ ಗೊತ್ತಾ?
"ಹೌದು, ಬಿಡದಿ ಆಶ್ರಮದಲ್ಲಿ ಈಚೆಗೆ ಸ್ವಾಮಿ ನಿತ್ಯಾನಂದ ಭಕ್ತರನ್ನು ಭೇಟಿ ಆಗುತ್ತಿಲ್ಲ. ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭೇಟಿ ಆಗುತ್ತಾರೆ. ಆದ್ದರಿಂದ ಅವರು ವಿದೇಶಕ್ಕೆ ಹಾರಿದ್ದಾರೆ ಹಾಗೂ ಕಾನೂನಿನ ಎದುರು ನಿಲ್ಲಬೇಕು ಎಂಬ ಅಂಜಿಕೆ ಅವರಿಗೆ ಇದೆ" ಎಂದು ಹೇಳುತ್ತಾರೆ.
ಇನ್ನು ಚೆನ್ನೈನಲ್ಲಿ ವಾಸ ಇರುವ ನಿತ್ಯಾನಂದನ ಸಂಬಂಧಿಕರನ್ನು ಮಾತನಾಡಿಸಿದರೆ, ಎಲ್ಲ ವ್ಯವಸ್ಥೆ ಇರುವ ಕ್ಯಾರವಾನ್ ನಂಥ ಬಸ್ ವೊಂದನ್ನು ಅವರ ಪ್ರಯಾಣಕ್ಕೆ ಸಿದ್ಧ ಮಾಡಲಾಗಿದೆ. ಆದ್ದರಿಂದಲೇ ಅವರು ಭಾರತದಾದ್ಯಂತ ಸುತ್ತಾಡುತ್ತಿದ್ದಾರೆ. ಆಗಿಂದಾಗ ನಮ್ಮ ಜತೆಗೆ ಮಾತನಾಡುತ್ತಾರೆ. ಅವರು ಏಕೆ ನೇರವಾಗಿ ಭಕ್ತರನ್ನು ಭೇಟಿ ಆಗುತ್ತಿಲ್ಲ ಎಂಬುದು ಗೊತ್ತಿಲ್ಲ ಎನ್ನುತ್ತಾರೆ.












Click it and Unblock the Notifications