ಗೌಡರ ನೇತೃತ್ವದಲ್ಲಿ 100 ದಿನಗಳ ಸೆಲೆಬ್ರೇಶನ್ ವಾಕ್
ಬೆಂಗಳೂರು, ಫೆ. 8 : ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮಾಧ್ಯಮ ಸಲಹೆಗಾರ ಪ್ರೊ. ರಾಜೀವ್ ಗೌಡ ಅವರ ನೇತೃತ್ವದಲ್ಲಿ 'ಬೆಂಗಳೂರು ನೀಡ್ಸ್ ಯು' ತಂಡ ಪುಲಿಕೇಶಿ ನಗರದಲ್ಲಿ ನಡೆಸಲಾದ 'ಸ್ವಲ್ಪ ಕ್ಲೀನಪ್ ಮಾಡಿ' ಅಭಿಯಾನದ 100 ದಿನಗಳ ನೆನಪಿನಲ್ಲಿ ಶನಿವಾರ '100 ದಿನಗಳ ಸೆಲೆಬ್ರೇಶನ್ ವಾಕ್' ನಡೆಸಿತು.
2013ರ ಅಕ್ಟೋಬರ್ ತಿಂಗಳಲ್ಲಿ ಪುಲಿಕೇಶಿ ನಗರದಲ್ಲಿನ ಕಸದ ರಾಶಿ ಮತ್ತು ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ರಾಜೀವ್ ಗೌಡ ಅವರ ತಂಡ ಅಧ್ಯಯನ ನಡೆಸಿತ್ತು. ನಂತರ, ಸ್ಥಳೀಯ ನಿವಾಸಿಗಳು, ಕಾರ್ಪೊರೇಟರ್ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ ಕಸದ ರಾಶಿ ತೆಗೆಸಿ ಸ್ವಚ್ಛಗೊಳಿಸಲಾಗಿತ್ತು.
"ವ್ಯವಸ್ಥೆಯಲ್ಲಿನ ವಿಫಲತೆಗೆ ಇಲ್ಲಿನ ಕಸದ ತೊಂದರೆಯೇ ಕಾರಣ. ಬೆಂಗಳೂರು ನೀಡ್ಸ್ ಯು ತಂಡ ಜನರಲ್ಲಿ ಅರಿವು ಮೂಡಿಸುತ್ತಿರುವುದಲ್ಲದೆ, ಕಾರ್ಪೊರೇಟರ್ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಶ್ರಮಿಸುತ್ತಿದೆ. ಯುವಜನತೆ ಒಗ್ಗಟ್ಟಾಗಿ ಕೆಲಸ ಮಾಡಿ ಸಮಸ್ಯೆ ಬಗೆಹರಿಸುತ್ತಿದ್ದಾರೆ" ಎಂದು ರಾಜೀವ್ ಗೌಡ ಅವರ ಶ್ಲಾಘಿಸಿದರು.

ಬೆಂಗಳೂರು ನೀಡ್ಸ್ ಯು ತಂಡದ ಶ್ರಮವನ್ನು ಮೆಚ್ಚಿದ ಕಾರ್ಪೊರೇಟರ್ ಅಬ್ದುಲ್ ಜಕೀರ್ ಅವರು, "ಮೂರ್ ರಸ್ತೆಯಲ್ಲಿ 35 ವರ್ಷಗಳಿಂದ ಕಸದ ರಾಶಿ ಬೀಳುತ್ತಿತ್ತು. ಅದನ್ನು ರಾಜೀವ್ ಗೌಡ ಅವರ ತಂಡ ಸ್ವಚ್ಛಗೊಳಿಸಿ, ಪಾದಚಾರಿಗಳಿಗೆ ಅನುಕೂಲವಾಗುವಂತೆ ಮಾಡಿದ್ದಾರೆ ಮತ್ತು ಪ್ರದೇಶವನ್ನು ಸುಂದರವಾಗಿಸಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ನೀಡ್ಸ್ ಯು ತಂಡದ ಕಾರ್ಯನಿರ್ವಹಣೆಯನ್ನು ಸ್ಥಳೀಯ ನಿವಾಸಿಗಳಾದ ಶೇಖ್ ಸೈಯದ್ ಮತ್ತು 40 ವರ್ಷಗಳಿಂದ ಇಲ್ಲಿ ನೆಲೆಸಿರುವ ಟಿ ರಾಜು ಅವರು ಕೊಂಡಾಡಿದರು. ಈ ಅಭಿಯಾನದಲ್ಲಿ ಭಾಗಿಯಾಗಿದ್ದ ಪೌರಕಾರ್ಮಿಕರಾದ ಸೀತಾ ಮತ್ತು ಭಾಗ್ಯಲಕ್ಷ್ಮಿ ಅವರು, "ಹಿಂದೆ ಕಸದ ತೊಂಡರೆ ಬಹಳವಿತ್ತು. ಆದರೆ, ಬೆಂಗಳೂರು ನೀಡ್ಸ್ ಯು ತಂಡದ ಸ್ವಚ್ಛತಾ ಕೆಲಸದಿಂದ ನಮ್ಮ ಕೆಲಸವೂ ಸುಗಮವಾಗಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಸ್ವಲ್ಪ ಕ್ಲೀನಪ್ ಮಾಡಿ ಅಭಿಯಾನದಡಿ ಮಸೀದಿ ರಸ್ತೆ, ನಾಯ್ಡು ಹೌಸ್, ತುಳಸಿ ರಾಮದಾಸ್ ರಸ್ತೆ, ವೀರಣ್ಣ ಗಾರ್ಡನ್, ಹೇನ್ಸ್ ರಸ್ತೆ ಮತ್ತು ಮೂರ್ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಇದುವರೆಗೆ, ಬೆಂಗಳೂರಿನಾದ್ಯಂತ 13 ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದೆ ಎಂದು ರಾಜೀವ್ ಗೌಡ ಅವರು ಹೇಳಿದರು.












Click it and Unblock the Notifications