ಭೂ ಮಾಫಿಯಾ ಕಪಿಮುಷ್ಟಿಯಿಂದ ಪಾರಾದ ಬೆಳ್ಳಂದೂರು, ಅಗರ ಕೆರೆ
ಬೆಂಗಳೂರು, ಮಾರ್ಚ್ 05: ನಗರದ ಪರಿಸರ ಪ್ರೇಮಿ ನಾಗರೀಕರು ಮತ್ತು ನಮ್ಮ ಬೆಂಗಳೂರು ಫೌಂಡೇಶನ್ ನಡೆಸಿದ ಕಾನೂನು ಹೋರಾಟಕ್ಕೆ ಜಯ ದೊರೆತಿದ್ದು ಬೆಳ್ಳಂದೂರು ಕೆರೆ ಹಾಗೂ ಅಗರ ಕೆರೆ ಕಾರ್ಪೊರೇಟ್ ಒತ್ತುವರಿಯಿಂದ ಪಾರಾಗಿದೆ.
ಕೆರೆ ಒತ್ತುವರಿಗೆ ಸಂಬಂಧಪಟ್ಟಂತೆ ಮಂತ್ರಿ ಟೆಕ್‌ಜೋನ್ ಮತ್ತು ಕೋರ್‌ಮೈಂಡ್ ಕಾರ್ಪೊರೇಟ್ ವಿರುದ್ಧ ಬಂದಿದ್ದ ಎನ್‌ಜಿಟಿ ಆದೇಶದ ವಿರುದ್ಧ ಸುಪ್ರಿಂಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದ್ದು, ಎನ್‌ಜಿಟಿಯು 2016ರ ಆದೇಶವನ್ನೇ ಎತ್ತಿಹಿಡಿದಿದೆ.
ಸುಪ್ರಿಂಕೋರ್ಟ್‌ನ ತೀರ್ಪಿನ ಪ್ರಕಾರ ಮಂತ್ರಿ ಟೆಕ್‌ಜೋನ್ ಹಾಗೂ ಕೋರ್‌ಮೈಂಡ್ ಸಾಫ್ಟ್‌ವೇರ್ ಸಂಸ್ಥೆಗಳು 117.5 ಕೋಟಿ ಹಾಗೂ 13.5 ಕೋಟಿ ಹಣವನ್ನು ದಂಡ ಕಟ್ಟಬೇಕಿದೆ ಹಾಗೂ ಒತ್ತುವರಿ ಮಾಡಿಕೊಂಡಿದ್ದ 3 ಎಕರೆ 10 ಗುಂಟೆ ಜಾಗವನ್ನು ಬಿಟ್ಟುಕೊಡಬೇಕಿದೆ. ಅಷ್ಟಲ್ಲದೆ ರಾಜಕಾಲುವೆಯನ್ನು ಮತ್ತೆ ಕಟ್ಟಿಸಿಕೊಡಬೇಕಿದೆ.

ಸಂಸದ ರಾಜೀವ್ ಚಂದ್ರಶೇಖರ್ ಅವರು ಸಂಸ್ಥಾಪಿಸಿರುವ ನಮ್ಮ ಬೆಂಗಳೂರು ಫೌಂಡೇಶನ್ 2014 ರಿಂದಲೂ ಈ ಪ್ರಕರಣದಲ್ಲಿ ಅರ್ಜಿದಾರರಾಗಿದ್ದು, ಆರಂಭದಿಂದಲೂ ಈ ಬಗ್ಗೆ ಸತತ ಹೋರಾಟವನ್ನು ಮಾಡುತ್ತಲೇ ಬರುತ್ತಿದೆ. ಸಿಟಿಜನ್ ಆಕ್ಷನ್ ಫೋರಂ ಸಹ ನಮ್ಮ ಬೆಂಗಳೂರು ಫೌಂಡೇಶನ್‌ಗೆ ಸಾಥ್ ನೀಡಿದೆ.
ಬೆಳ್ಳಂದೂರು ಕೆರೆಯ ಸುಮಾರು 100 ಎಕರೆ ಜಾಗ ಒತ್ತುವರಿ ಆಗಿದೆ. ನಗರದ ಹಲವು ಕೆರೆಗಳಿಗೆ ಇದೇ ಸ್ಥಿತಿ ಬಂದಿದೆ. ಆದರೆ ಇಂದಿನ ತೀರ್ಪಿನಿಂದ ನಮ್ಮ ಹೋರಾಟಕ್ಕೆ ಜಯ ದೊರೆತಿದೆ ಎಂದು ನಮ್ಮ ಬೆಂಗಳೂರು ಫೌಂಡೇಶನ್‌ನ ನಿರ್ದೇಶಕರಾದ ಸುರೇಶ್ ಎನ್.ಆರ್. ಅವರು ಹೇಳಿದ್ದಾರೆ.
ಬೆಳ್ಳಂದೂರು ಕೆರೆ ಮತ್ತು ಅಗರ ಕೆರೆ ಒತ್ತುವರಿ ವಿರುದ್ಧ ಹೋರಾಟದಲ್ಲಿ ನಮ್ಮ ಬೆಂಗಳೂರು ಫೌಂಡೇಶನ್ ಮುಂಚಿನಿಂದಲೂ ನೇತೃತ್ವವಹಿಸಿ ಮುನ್ನಡೆಸಿಕೊಂಡು ಬಂದಿದೆ. ಒತ್ತುವರಿ ವಿರುದ್ಧ ಸಾರ್ವಜನಿಕ ಆಕ್ರೋಶ ಹುಟ್ಟುಹಾಕಿ ಹೋರಾಟ ಸಂಘಟಿಸುವ ಜೊತೆಗೆ, ಕಾನೂನು ಹೋರಾಟವನ್ನೂ ಮಾಡಿದೆ ಎಂದು ಅವರು ಹೇಳಿದರು.












Click it and Unblock the Notifications