BBMP Election: ಮೂರೂ ಪಕ್ಷಗಳು ಸದ್ಯಕ್ಕೆ ನಿರಾಳ
ಬೆಂಗಳೂರು, ಡಿ 16: ಮುಂಬೈ ನಂತರ ದೇಶದ ಎರಡನೇ ಅತಿಹೆಚ್ಚು ಬಜೆಟ್ ಮಂಡಿಸುವ ಸಂಪದ್ಬರಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣೆ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.
ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ ಎನ್ನುವ ಹಾಗೇ, ಆಮ್ ಆದ್ಮಿ ಪಕ್ಷದ ಹೊರತಾಗಿ ಮೂರೂ ಪಕ್ಷಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುವುದು ಬೇಕಾಗಿರಲಿಲ್ಲ. ಮೇಲ್ನೋಟಕ್ಕೆ ಮಾತ್ರ ಬಿಜೆಪಿ ವಿರುದ್ದ ಗೂಬೆ ಕೂರಿಸುವ ಕೆಲಸ ನಡೆಯುತ್ತಿದ್ದದ್ದು ಸ್ಪಷ್ಟ.
ವಾರ್ಡ್ ಮರುವಿಂಗಡನೆಯ ನಂತರ 198 ಇದ್ದ ವಾರ್ಡುಗಳ ಸಂಖ್ಯೆ 243ಕ್ಕೆ ಏರಿತ್ತು. ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಭಾರೀ ವಿರೋಧ ವ್ಯಕ್ತ ಪಡಿಸಿ, ಬಿಜೆಪಿ ತನಗೆ ಅನುಕೂಲವಾಗುವಂತೆ ವಾರ್ಡ್ ವಿಂಗಡಣೆ ಮಾಡಿದೆ ಎಂದು ಆರೋಪಿಸಿತ್ತು.
ಆ ವೇಳೆ, ಬಿಬಿಎಂಪಿ ಚುನಾವಣೆ ನಡೆಯಬಹುದು ಎಂದು ವಿಶ್ಲೇಷಿಸಲಾಗಿತ್ತು. ಈಗ, ಕಾಲಾವಕಾಶ ಬೇಕು ಎನ್ನುವ ಸರಕಾರದ ಮನವಿಗೆ ಸರ್ವೋಚ್ಚ ನ್ಯಾಯಾಲಯ ಸ್ಪಂದಿಸಿದೆ. ಆ ಮೂಲಕ, ಮುಂಬರುವ ಅಸೆಂಬ್ಲಿ ಚುನಾವಣೆಯ ನಂತರವಷ್ಟೇ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಚುನಾವಣಾ ಆಯೋಗಕ್ಕೆ ಸರ್ವೋಚ್ಚ ನ್ಯಾಯಾಲಯ ಆದೇಶ
ಕಳೆದ ಮೇ ತಿಂಗಳಲ್ಲಿ ಎಂಟು ವಾರಗಳಲ್ಲಿ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು. "ನಾವು ಚುನಾವಣೆಗೆ ಸಿದ್ದರಿದ್ದೇವೆ, ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಡಿಲಿಮಿಟೇಷನ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಓಬಿಸಿ ಮೀಸಲಾತಿಯೊಂದಿಗೆ ಮೀಸಲಾತಿ ನಡೆಸುತ್ತೇವೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.

ಹೈಕೋರ್ಟ್ 2022ರ ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಬೇಕೆಂದು ಆದೇಶ
ಇದಾದ ನಂತರ ಮತ್ತೆ ಬಿಬಿಎಂಪಿ ಚುನಾವಣೆ ಮುಂದೂಡಲ್ಪಟ್ಟು, ರಾಜ್ಯ ಹೈಕೋರ್ಟ್ 2022ರ ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಬೇಕೆಂದು ಆದೇಶ ನೀಡಿತ್ತು. ಮತ್ತೆ ಎಚ್ಚೆತ್ತುಕೊಂಡ ಸರಕಾರ ಮತ್ತೆ ಮೂರು ತಿಂಗಳ ಸಮಾಯವಕಾಶವನ್ನು ಕೇಳಿತ್ತು. ನಗರಾಭಿವೃದ್ಧಿ ಇಲಾಖೆ ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧ ನ್ಯಾ. ಭಕ್ತವವತ್ಸಲಂ ಸಮಿತಿಯಿಂದ ಮಾಹಿತಿಯನ್ನು ಕೇಳಿರುವುದರಿಂದ ಮೂರು ತಿಂಗಳು ಕಾಲಾವಕಾಶ ಬೇಕಿದೆ ಎಂದು ಸುಪ್ರೀಂಕೋರ್ಟ್ ನಲ್ಲಿ ಮನವಿ ಸಲ್ಲಿಸಿತ್ತು. ನ್ಯಾಯಾಲಯ ಸರಕಾರದ ಮನವಿಗೆ ಅಸ್ತು ಎಂದಿದೆ.

ಮಾ.31ರ ತನಕ ಗಡುವನ್ನು ರಾಜ್ಯ ಸರಕಾರಕ್ಕೆ ನೀಡಿದೆ
ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕಿರುವ ಹಿನ್ನೆಲೆಯಲ್ಲಿ ಮೂರು ತಿಂಗಳ ಸಮಯ ಬೇಕೆಂದು ಸರಕಾರ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು.ಇದಕ್ಕೆ ಸ್ಪಂದಿಸಿದ ನ್ಯಾ. ಅಬ್ದುಲ್ ನಾಸೀರ್ ಹಾಗೂ ನ್ಯಾ. ಹಿಮಾ ಕೊಹ್ಲಿ ಅವರಿದ್ದ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ಮಾ.31, 2023ರ ತನಕ ಗಡುವನ್ನು ರಾಜ್ಯ ಸರಕಾರಕ್ಕೆ ನೀಡಿದೆ. ಆ ಮೂಲಕ, ಸರಕಾರ ಮತ್ತು ವಿರೋಧ ಪಕ್ಷಗಳು ನಿರಾಳವಾಗಿವೆ.

ರಾಜ್ಯ ಸರಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ
ರಾಜ್ಯ ಸರಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, ಓಬಿಸಿ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಬೇಕಿದೆ. ಇದಕ್ಕಾಗಿ ರಚಿಸಲಾಗಿರುವ ಭಕ್ತವತ್ಸಲಂ ಸಮಿತಿ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಕಲೆಹಾಕಲು ಸಮಯಾವಕಾಶವನ್ನು ಕೇಳಿದೆ. ಹಾಗಾಗಿ, ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಮನವಿ ಮಾಡಿದ್ದರು. ಸುಪ್ರೀಂಕೋರ್ಟ್ ಕೊಟ್ಟ ಗಡುವಿನ ಸಮಯದಲ್ಲೇ ಹೆಚ್ಚುಕಮ್ಮಿ ಅಸೆಂಬ್ಲಿ ಚುನಾವಣೆಯೂ ನಡೆಯುವ ಸಾಧ್ಯತೆ ಇರುವುದರಿಂದ, ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ನಂತರವೇ ಬಿಬಿಎಂಪಿ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುವ ಸಾಧ್ಯತೆ ಹೆಚ್ಚು.












Click it and Unblock the Notifications