ವಿಧಾನಸೌಧದಲ್ಲಿ ವ್ಯಕ್ತಿ ಆತ್ಮಹತ್ಯೆ ಯತ್ನ, ಪೊಲೀಸರ ತಲೆದಂಡ
ಬೆಂಗಳೂರು, ಜುಲೈ 16 : ವಿಧಾನಸೌಧದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ 10 ಪೊಲೀಸರ ತಲೆದಂಡವಾಗಿದೆ. ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು, ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಚಿಕ್ಕಬಳ್ಳಾಪುರ ಮೂಲದ ರೇವಣ್ಣ ಕುಮಾರ್ (45) ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಪ್ರಕರಣದ ಕುರಿತು ಆಂತರಿಕ ತನಿಖೆ ನಡೆಸಿದ ಪೊಲೀಸ್ ಇಲಾಖೆ ಸಬ್ ಇನ್ಸ್‌ಪೆಕ್ಟರ್, ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ 10 ಸಿಬ್ಬಂದಿಗಳನ್ನು ಅಮಾನತುಗೊಳಿಸಿದೆ.
ಆತ್ಮಹತ್ಯೆಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ, ವಿಧಾನಸೌಧದ ದ್ವಾರದಲ್ಲಿರುವ ಸಿಬ್ಭಂದಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಿತ್ತು. ಈಗ ಅದರ ವರದಿ ಬಂದಿದ್ದು, 10 ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಪಶ್ಚಿಮ ದ್ವಾರದ ಮೂಲಕ ರೇವಣ್ಣ ಕುಮಾರ್ ವಿಧಾನಸೌಧ ಪ್ರವೇಶಿಸಿದ್ದ. ಆಡಳಿತ ಶಕ್ತಿ ಕೇಂದ್ರಕ್ಕೆ ಬರುವ ಎಲ್ಲರನ್ನೂ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತದೆ. ಆದರೆ, ರೇವಣ್ಣ ಕುಮಾರ್ ಗುರುತಿನ ಪತ್ರವನ್ನು ಸಹ ಪರಿಶೀಲನೆ ಮಾಡದೆ, ಅವರನ್ನು ಸರಿಯಾಗಿ ತಪಾಸಣೆ ಮಾಡದೆ ಒಳಬಿಡಲಾಗಿತ್ತು.
ಜೂನ್ 24ರಂದು ವಿಧಾನಸೌಧಕ್ಕೆ ಪ್ರವೇಶಿಸಿದ್ದ ರೇವಣ್ಣ ಕುಮಾರ್. 3ನೇ ಮಹಡಿಯ ಶೌಚಾಲಯಕ್ಕೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದ. ಚಿಂತಾಮಣಿ ತಾಲೂಕಿನ ಅನೂರು ಗ್ರಾಮ ಪಂಚಾಯತ್‌ನಲ್ಲಿ ತಾತ್ಕಾಲಿಕ ಸಹಾಯಕ ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದ ರೇವಣ್ಣ ಕುಮಾರ್, ಉದ್ಯೋಗ ಖಾಯಂ ಆಗದ ಕಾರಣ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು.
ರೇವಣ್ಣ ಕುಮಾರ್ ಬರೆದಿದ್ದ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿತ್ತು, "ದಯವಿಟ್ಟು ನನ್ನ ಬಗ್ಗೆ ತಪ್ಪು ತಿಳಿಯಬೇಡಿ. 6 ಸಾವಿರ ನೌಕರರ ಪ್ರತೀಕವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವು ಆತ್ಮಹತ್ಯೆಯಲ್ಲ, ಸರ್ಕಾರಕ್ಕೆ ನೀಡುತ್ತಿರುವ ಬಲಿದಾನ. ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಅನ್ಯತಾ ಭಾವಿಸಬಾರದು. ನಾವು ಎಷ್ಟೇ ಹೋರಾಟ ಮಾಡಿದರೂ ನಮಗೆ ನ್ಯಾಯ ಸಿಗುತ್ತಿಲ್ಲ. ನೀವಾದರೂ ನ್ಯಾಯ ಕೊಡಿಸಿ, ಇದು ಸಾವಲ್ಲ ಬಲಿದಾನ, " ಎಂದು ಬರೆದಿದ್ದರು.












Click it and Unblock the Notifications