Success Story: 'ಬೇಬಿ ಸೋರೆಕಾಯಿ' ಬೆಳೆದು ಮಾಸಿಕ ₹15,00,000 ಸಂಪಾದಿಸುತ್ತಿರುವ ಬೆಂಗಳೂರಿನ ಪದವೀಧರ
Success Story: ಸಾಮಾನ್ಯವಾಗಿ ಪದವಿ ಶಿಕ್ಷಣ ಮುಗಿದ ತಕ್ಷಣ ಬಹುತೇಕ ಮಂದಿ ದೊಡ್ಡ ದೊಡ್ಡ ಉದ್ಯೋಗಗಳ ಮುಖ ಮಾಡಿಬಿಡುತ್ತಾರೆ. ಆದರೆ ಬೆಂಗಳೂರಿನ ಕರಿಗೌಡ ಎಂಬುವರು ತಮ್ಮ ಕೃಷಿ ಭೂಮಿಯನ್ನೇ ಭವಿಷ್ಯದ ಅಂಗಳವಾಗಿಸಿಕೊಂಡು ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಹವಾ ಸೃಷ್ಟಿಸಿದ್ದಾರೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಸಾಂಪ್ರದಾಯಿಕ ಬೆಳೆಗಳ ನಷ್ಟದ ಸುಳಿಯಿಂದ ಹೊರಬಂದು, ವಿದೇಶಿ ಮಾರುಕಟ್ಟೆ ಬಗ್ಗೆ ತಿಳಿದುಕೊಂಡ ಇವರು ತಮ್ಮ 2.5 ಎಕರೆ ಜಮೀನಿನಲ್ಲಿ 'ಬೇಬಿ ಸೋರೆಕಾಯಿ' ಬೆಳೆದು ಕತಾರ್‌ಗೆ ರಫ್ತು ಮಾಡುತ್ತಿದ್ದಾರೆ. ಆ ಮೂಲಕ ದಿನಕ್ಕೆ ಬರೋಬ್ಬರಿ ₹50,000 (ತಿಂಗಳಿಗೆ ಅಂದಾಜು ₹15 ಲಕ್ಷ) ಆದಾಯ ಗಳಿಸುವ ಮೂಲಕ ಕೃಷಿ ಕ್ಷೇತ್ರದಲ್ಲೂ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ವಿದೇಶಿ ಮಾರುಕಟ್ಟೆ ಕಡೆಗೆ ಗಮನಹರಿಸಿದ ಕರಿಗೌಡ
ಕರಿಗೌಡ ಅವರದ್ದು ಕೃಷಿ ಹಿನ್ನೆಲೆಯ ಕುಟುಂಬವಾಗಿದೆ. ಪದವಿ ಶಿಕ್ಷಣ ಮುಗಿಸಿದ ನಂತರ ಅವರು ನಗರದ ಉದ್ಯೋಗದ ಕಡೆಗೆ ಮುಖ ಮಾಡದೆ ಕೃಷಿಯನ್ನೇ ವೃತ್ತಿಯನ್ನಾಗಿ ಆಯ್ದುಕೊಂಡರು. ಆರಂಭದಲ್ಲಿ ತಂದೆ ಮತ್ತು ಅಜ್ಜ ಬೆಳೆಯುತ್ತಿದ್ದ ಟೊಮ್ಯಾಟೊ, ಮೆಣಸಿನಕಾಯಿ ಹಾಗೂ ಮುಸುಕಿನ ಜೋಳದಂತಹ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಆಗಾಗ್ಗೆ ನಷ್ಟ ಅನುಭವಿಸುತ್ತಿದ್ದರು. ಇದರಿಂದ ಹೊರಬರಲು ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಗಳ ಕಡೆಗೆ ಗಮನ ಹರಿಸಿದರು.
ಬೇಬಿ ಸೋರೆಕಾಯಿಗೆ ವಿದೇಶದಲ್ಲಿ ಭಾರಿ ಬೇಡಿಕೆ
ಕತಾರ್ ಸೇರಿದಂತೆ ಗಲ್ಫ್ ದೇಶಗಳಲ್ಲಿ ಚಿಕ್ಕ ಗಾತ್ರದ ಸೋರೆಕಾಯಿಗೆ ಭಾರಿ ಬೇಡಿಕೆಯಿದೆ. ಸಾಮಾನ್ಯ ಸೋರೆಕಾಯಿಗಿಂತ ಇವು ಗಾತ್ರದಲ್ಲಿ ಚಿಕ್ಕದಾಗಿದ್ದು, ಮೃದುವಾದ ಸಿಪ್ಪೆ ಮತ್ತು ಸಿಹಿ ರುಚಿಯನ್ನು ಹೊಂದಿರುತ್ತವೆ. 'ಸ್ವೀಕಾರ್ 045 ಎಫ್1' (Swikar 045 F1) ತಳಿಯ ಸೋರೆಕಾಯಿಯನ್ನು ಕರಿಗೌಡ ಬೆಳೆಯುತ್ತಾರೆ. ಬಿತ್ತನೆ ಮಾಡಿದ 70 ದಿನಗಳಲ್ಲಿ ಮೊದಲ ಕೊಯ್ಲು ಆರಂಭವಾಗುತ್ತದೆ. ಸೆಪ್ಟೆಂಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಪ್ರತಿದಿನ ಸುಮಾರು 1 ಟನ್ (1,000 ಕೆ.ಜಿ.) ಬೇಬಿ ಸೋರೆಕಾಯಿಯನ್ನು ಇವರು ಕೊಯ್ಲು ಮಾಡುತ್ತಾರೆ.
ವಿಮಾನದ ಮೂಲಕ ಕತಾರ್‌ಗೆ ರಫ್ತು
ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತರಕಾರಿ ಕಳುಹಿಸುವುದು ಸಣ್ಣ ರೈತರಿಗೆ ಸವಾಲಿನ ಕೆಲಸ. ಆದರೆ ಕರಿಗೌಡ ಅವರು ಮಧ್ಯವರ್ತಿಗಳು ಹಾಗೂ ರಫ್ತುದಾರರ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ರಫ್ತುದಾರರೇ ನೇರವಾಗಿ ತೋಟಕ್ಕೆ ಬಂದು ಕೆ.ಜಿ.ಗೆ 50 ರೂಪಾಯಿ ದರದಲ್ಲಿ ತರಕಾರಿಯನ್ನು ಖರೀದಿಸುತ್ತಾರೆ. ಕಾಯಿಗಳ ಸಿಪ್ಪೆಗೆ ಹಾನಿಯಾಗದಂತೆ ಕಾಗದ ಮತ್ತು ಕಾರ್ಟನ್ ಬಾಕ್ಸ್‌ಗಳಲ್ಲಿ ಇವುಗಳನ್ನು ಪ್ಯಾಕ್ ಮಾಡಿ ವಿಮಾನದ ಮೂಲಕ ಕತಾರ್‌ಗೆ ರಫ್ತು ಮಾಡಲಾಗುತ್ತದೆ.
ಎಷ್ಟು ಗಾತ್ರದ ಕಾಯಿಗೆ ಬೇಡಿಕೆ ಹೆಚ್ಚಳ?
ವಿದೇಶಕ್ಕೆ ಕಳುಹಿಸುವ ತರಕಾರಿಗೆ ಗಾತ್ರ ಮತ್ತು ತೂಕಕ್ಕಿಂತ 'ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡುವುದು' ಅತ್ಯಂತ ಮುಖ್ಯ. ಕಾಯಿಗಳು ದೊಡ್ಡದಾದರೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದಿಲ್ಲ. ಆದ್ದರಿಂದ ಸರಿಯಾದ ಎಳೆಯ ಹಂತದಲ್ಲೇ ಕೊಯ್ಲು ಮಾಡಲಾಗುತ್ತದೆ.
ಸೋರೆಕಾಯಿ ಜೊತೆ ಪರ್ಯಾಯ ಬೆಳೆ
ಕರಿಗೌಡ ಅವರು ಕೇವಲ ಸೋರೆಕಾಯಿಯನ್ನಷ್ಟೇ ನಂಬಿಕೊಂಡಿಲ್ಲ. ಬೆಳೆ ಪರಿವರ್ತನೆ ಮತ್ತು ನಷ್ಟ ನಿರ್ವಹಣೆಗಾಗಿ ಹೊಸೂರು ಮಾರುಕಟ್ಟೆಗೆ ಬದನೆಕಾಯಿಯನ್ನು ಸಹ ಪೂರೈಸುತ್ತಾರೆ. 3-4 ತಿಂಗಳ ಈ ಅವಧಿಯಲ್ಲೇ ಸೋರೆಕಾಯಿಯಿಂದ ಸುಮಾರು 45 ಲಕ್ಷ ರೂಪಾಯಿನಷ್ಟು ಒಟ್ಟು ವಹಿವಾಟು ನಡೆಸುವ ಅವರು, ಮಾಸಿಕ ₹15 ಲಕ್ಷದಷ್ಟು ಸರಾಸರಿ ಆದಾಯ ಗಳಿಸಿ ಇತರ ಯುವಕರಿಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.


Click it and Unblock the Notifications
