ಬೆಂಗಳೂರಿಗೆ ಬೇಕು ನಮ್ಮ ರೈಲು ಯೋಜನೆ
ಬೆಂಗಳೂರು, ಫೆ.11 : ಪ್ರೊ.ರಾಜೀವ್ ಗೌಡ ಅವರ ಬೆಂಗಳೂರು ನೀಡ್ಸ್ ಯು ಸಂಘಟನೆ ಮತ್ತು ವಿವಿಧ ನಾಗರೀಕ ಗುಂಪುಗಳ ವತಿಯಿಂದ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಬೆಂಗಳೂರು ಉಪನಗರ ರೈಲು ಸೇವೆಯನ್ನು ಆರಂಭಿಸುವ ಕುರಿತು ಮನವಿ ಸಲ್ಲಿಸಲಾಯಿತು.
ಫೆ.8ರ ಭಾನುವಾರ ಪ್ರೊ.ರಾಜೀವ್ ಗೌಡ, ಐಐಎಂಬಿ ಸಾರ್ವಜನಿಕ ಕಾರ್ಯನೀತಿ ಕೇಂದ್ರ, ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಪ್ರಜಾರಾಗ್ ಸಹಭಾಗಿತ್ವದಲ್ಲಿ ಉಪನಗರ ರೈಲು ಸೇವೆಯ 40 ಜನಪ್ರತಿನಿಧಿಗಳ ಜೊತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ನಮ್ಮ ರೈಲು ಯೋಜನೆಯನ್ನು ಶೀಘ್ರ ಅನುಷ್ಠಾನ ಮಾಡಬೇಕೆಂದು ಮನವಿ ಮಾಡಲಾಯಿತು. [ಬೆಂಗಳೂರಿಗೆ ಉಪ ನಗರ ರೈಲು ಯೋಜನೆ]

ಪ್ರೊ. ರಾಜೀವ್ ಗೌಡ ನೇತೃತ್ವದ ತಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ, ಬೆಂಗಳೂರು ಉಪನಗರ ರೈಲು ಸೇವೆ ಆರಂಭಿಸಲು ಇಲಾಖೆ ಅನುಮೋದನೆ ನೀಡಬೇಕು, ಈ ಯೋಜನೆ ಅನುಷ್ಠಾನಕ್ಕಾಗಿ ಅಗತ್ಯವಿರುವ ವಿಶೇಷ ವಾಹನ ಖರೀದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 50 ಪಾಲುದಾರಿಕೆಯಲ್ಲಿ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ಬೆಂಗಳೂರು ರೈಲು ಸೇವೆಯ ಮೊದಲನೇ ಹಂತವನ್ನು ಶೀಘ್ರ ಅನುಷ್ಠಾನ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಉಪ ನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯ ಮಾಡುತ್ತೇವೆ. ಈ ನಮ್ಮ ರೈಲು ಯೋಜನೆಯಿಂದ ಬೆಂಗಳೂರು-ಚೆನ್ನೈ ಕಾರಿಡಾರ್ ಯೋಜನೆಗೆ ಸಹಾಯಕವಾಗಲಿದ್ದು, ರಾಜ್ಯದಲ್ಲಿ ಕೈಗಾರಿಕೀಕರಣವನ್ನು ಉತ್ತೇಜಿಸುತ್ತದೆ. ನಗರದ ಜನರಿಗೆ ಇದರಿಂದ ಸಹಾಯಕವಾಗುವುದಲ್ಲದೇ ರಾಜ್ಯ ಸರ್ಕಾರ ಮ್ತು ರೈಲ್ವೆ ಇಲಾಖೆಗೆ ಲಾಭಕಾರಿಯಾಗಿದೆ ಎಂದು ಪ್ರೊ.ರಾಜೀವ್ ಗೌಡ ಹೇಳಿದರು.
ಈ ರೈಲು ಯೋಜನೆಯಿಂದ ಮಹಾನಗರಕ್ಕೆ ಅಗತ್ಯವಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಲಭ್ಯವಾಗುತ್ತದೆ. ಬೆಂಗಳೂರು ಸುತ್ತಲಿನ ಉಪನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲು ಸಹಾಯಕವಾಗುತ್ತದೆ ಸಾಮಾಜಿಕ ಹಾಗೂ ಪ್ರಾದೇಶಿಕ ಅಭಿವೃದ್ಧಿಗೂ ಈ ಯೋಜನೆ ಸಹಕಾರಿಯಾಗಲಿದೆ ಎಂದು ರಾಜೀವ್ ಗೌಡ ಹೇಳಿದ್ದಾರೆ.
2009ರಿಂದ ಪ್ರಜಾ ರಾಗ್ ಮತ್ತು ಪ್ರೊ. ರಾಜೀವ್ ಗೌಡ ಅವರು, ನಮ್ಮ ರೈಲು ಯೋಜನೆಯ ಅನುಷ್ಠಾನಕ್ಕಾಗಿ ಕೆಲಸ ಮಾಡುತ್ತಿದ್ದಾರೆ. 2013-14ನೇ ಬಜೆಟ್ ನಲ್ಲಿ ಸಿದ್ದರಾಮಯ್ಯ ಈ ಯೋಜನೆಯನ್ನು ಸೇರಿಸಿದ್ದಾರೆ. ಫೆ.8ರಂದು ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರೈಲು ಯೋಜನೆ ಅನುಷ್ಠಾನಗೊಳಿಸಲು ಬೆಂಗಳೂರು ರೈಲು ವಿಕಾಸ ನಗಮ ಸ್ಥಾಪಿಸುವುದಾಗಿಯೂ ಘೋಷಿಸಿದ್ದಾರೆ.
ನಮ್ಮ ರೈಲು ಯೋಜನೆಯೂ ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್, ಪೀಣ್ಯ, ಬೊಮ್ಮಸಂದ್ರ ಮುಂತಾದ ಕೈಗಾರಿಕಾ ಹಾಗೂ ಉತ್ಪಾದನಾ ಕೇಂದ್ರಗಳಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತದೆ. ಈ ಸೇವೆಯಿಂದ ಪ್ರತಿದಿನ ಸುಮಾರು 1.5 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.











Click it and Unblock the Notifications