GPS ಆಧಾರಿತ ಟ್ಯಾಂಕರ್ ನೀರು ಪೂರೈಕೆಗೆ ಬೆಂಗಳೂರಲ್ಲಿ ಭಾರೀ ಸ್ಪಂದನೆ: BWSSB
ಬೆಂಗಳೂರು, ಮೇ 12: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರಿ ಕಾವೇರಿ ಯೋಜನೆಯ ಅಡಿಯಲ್ಲಿ BIS ಪ್ರಮಾಣಿತ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕೆ ಬೆಂಗಳೂರು ಜಲಮಂಡಳಿ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಜಲಮಂಡಳಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷರಾದ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಸರಬರಾಜು ಕುರಿತು ಸೋಮವಾರ ತಿಳಿಸಿರುವ ಅವರು, ತಂತ್ರಜ್ಞಾನ ಬಳಕೆಯ ಮೂಲಕ BIS ಪ್ರಮಾಣೀತ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಜನರ ಮನೆಬಾಗಿಲಿಗೆ ತಲುಪಿಸುತ್ತಿರುವ ದೇಶದ ಏಕೈಕ ಸರಕಾರಿ ಸಂಸ್ಥೆ ಎನ್ನುವ ಹೆಗ್ಗಳಿಕೆ ನಮ್ಮದಾಗಿದೆ. ಈಗಾಗಲೇ ಯೋಜನೆಗೆ ಚಾಲನೆ ನೀಡಲಾಗಿದೆ.

ಏಕರೂಪದ ಸೇವೆಗಾಗಿ ಬ್ರಾಂಡಿಂಗ್
ಖಾಸಗಿ ಟ್ಯಾಂಕರ್‌ಗಳು ಪೂರೈಸುವಂತಹ ನೀರಿನ ಗುಣಮಟ್ಟದ ಬಗ್ಗೆ ಯಾವುದೇ ಖಾತರಿ ಇಲ್ಲ. ಬಹಳಷ್ಟು ಸಂಧರ್ಭಗಳಲ್ಲಿ ಅವರು ಪೂರೈಸುವಂತಹ ಕೊಳವೆಬಾವಿಯ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. ಅಲ್ಲದೇ, ಅಂತರ್ಜಲದ ಮೇಲೆ ಇನ್ನಷ್ಟು ಒತ್ತಡ ಹೆಚ್ಚು ಮಾಡುತ್ತಾರೆ. ಇದನ್ನ ತಡಿಯುವುದು ಹಾಗೆಯೇ BIS ಪ್ರಮಾಣಿತ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ ಮೇಲೆ ಅವಲಂಬಿತರಾಗಿರುವಂತಹ ಜನರಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಯಾವುದೇ ಸಂಧರ್ಭದಲ್ಲೂ ಕೂಡಾ ಯಾರಾದರೂ ನಮ್ಮ ನೀರನ್ನು ಪರಿಶೀಲಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.
100 ಟ್ಯಾಂಕರ್‌ಗಳ ಬ್ರಾಂಡಿಂಗ್
ಬೆಂಗಳೂರು ಜಲಮಂಡಳಿ ತನ್ನ ಒಡೆತನದಲ್ಲಿರುವ 60 ಹಾಗೂ ನೊಂದಣಿಯಾಗಿರುವಂತಹ 100 ಕ್ಕೂ ಹೆಚ್ಚು ಟ್ಯಾಂಕರ್‌ಗಳನ್ನು ಬ್ರಾಂಡಿಂಗ್ ಮಾಡಿಸಿದೆ. ಖಾಸಗಿ ಟ್ಯಾಂಕರ್‌ಗಳು ನಮ್ಮ ನೀರನ್ನು ಬಿಟ್ಟು ಬೇರೆ ನೀರನ್ನು ಸರಬರಾಜು ಮಾಡಬಾರದು ಎನ್ನುವ ಷರತ್ತನ್ನು ವಿಧಿಸಲಾಗಿದೆ. ಟ್ರಿಪ್ ಆಧಾರದಲ್ಲಿ ಖಾಸಗಿ ಟ್ಯಾಂಕರ್‌ಗಳಿಗೆ ಹಣ ಪಾವತಿ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಕೆಗೆ ಬಳಸಲಾಗುವಂತಹ ಈ ಟ್ಯಾಂಕರ್‌ಗಳಲ್ಲಿ ಅಗತ್ಯ ಇಪಿಐ ಕೋಟೀಂಗ್ ಮಾಡಿಸಲಾಗಿದೆ. ಈ ಯೋಜನೆಗಾಗಿ ಜಲಮಂಡಳಿ ವತಿಯಿಂದ ಹೊಸ ಟ್ಯಾಂಕರ್‌ಗಳನ್ನು ಖರೀದಿಸಲಾಗಿಲ್ಲ ಎಂದರು.

1000 ಕ್ಕೂ ಹೆಚ್ಚು ಜನರಿಂದ ಆಪ್ ಡೌನ್‌ಲೋಡ್
ಸಂಚಾರಿ ಕಾವೇರಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಎರಡು ದಿನಗಳಲ್ಲೇ ಸುಮಾರು 1000 ಕ್ಕೂ ಹೆಚ್ಚು ಜನರು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ. ಅಲ್ಲದೇ ಟ್ಯಾಂಕರ್ ಬುಕ್ಕಿಂಗ್ ಮಾಡಿರುವಂತಹ ಜನರಿಗೆ ನೀರು ಸರಬರಾಜು ಮಾಡಲಾಗಿದೆ. RFID ಹಾಗೂ GPS ಟ್ರ್ಯಾಕಿಂಗ್ ಅಳವಡಿಸಿದ್ದು ಟ್ಯಾಂಕರ್ ಜಲಮಂಡಳಿಯ ನಿಗದಿತ ಕಾವೇರಿ ಕನೆಕ್ಟ್ ಸೆಂಟರ್‌ಗಳಲ್ಲೇ ನೀರು ತುಂಬಿಸಿ, ಅವುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದನ್ನು ಖಾತರಿ ಮಾಡಿಕೊಂಡಿದ್ದೇವೆ ಎಂದು ಅವರು ವಿವರಿಸಿದರು.
ಸರಬರಾಜು ಆಗುವಂತಹ ನೀರಿನ ಬಗ್ಗೆ ಯಾವುದೇ ಅನುಮಾನಗಳಿದ್ದಲ್ಲಿ ಪರೀಕ್ಷೆಗೆ ಜಲಮಂಡಳಿ ಸಿದ್ಧವಿದೆ ಎಂದು ಜಲಮಂಡಳಿ ಅಧ್ಯಕ್ಷ ಇಂದಿನ ಪ್ರಕಟಣೆಯಲ್ಲಿ ಹೇಳಿದ್ದಾರೆ. ಈ ವಿವರಣೆ ಮೂಲಕ ಬೆಂಗಳೂರು ಜನರಿಗೆ ನೀರು ಪೂರೈಕೆಗೆ ಹಳೆಯ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಟೀಕಿಸಿದ್ದ ಬಿಜೆಪಿಗೆ ಉತ್ತರ ಸಿಕ್ಕಂತಾಗಿದೆ.












Click it and Unblock the Notifications