ಸ್ನೇಹಿತನ ಜೀವ ಉಳಿಸಲು ಸರಗಳ್ಳನಾದ ಆಧುನಿಕ ವಾಲ್ಮೀಕಿ !
ಬೆಂಗಳೂರು, ಜನವರಿ 05 : ಮಹರ್ಷಿ ವಾಲ್ಮೀಕಿ ಬಗ್ಗೆ ಪುರಾಣ, ಕಥೆಗಳಲ್ಲಿ ಕೇಳಿದ್ದೇವೆ. ರಾಮಾಯಣ ಬರೆಯುವ ಮೊದಲು ಮಹರ್ಷಿ ಒಬ್ಬ ಕಳ್ಳ ಆಗಿದ್ದರು ಎಂಬುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಸಾಮಾನ್ಯ ವ್ಯಕ್ತಿ ತನ್ನ ಪ್ರಾಣ ಸ್ನೇಹಿತನ ಜೀವ ಉಳಿಸಲು ಸರಗಳ್ಳತನ ಮಾಡಿದ್ದಾನೆ. ಆ ಕಳ್ಳನ ಕಥೆ ಕೇಳಿ ಪೊಲೀಸರೇ ಮೂಕ ವಿಸ್ಮಿತರಾಗಿದ್ದಾರೆ. ಆ ಕಣ್ಣೀರ ಕಥೆಯನ್ನು ಕಾನೂನು ಕೇಳಬೇಕಲ್ಲ, ಕೊನೆಗೆ ಆ ಆಧುನಿಕ ವಾಲ್ಮೀಕಿಯನ್ನು ಪೊಲೀಸರು ಜೈಲಿಗೆ ಕಳಿಸಿದ್ದಾರೆ.
ಶಂಕರಪುರಂನ ತ್ರಿಶಾಲ್ ಲಾಡ್ಜ್ ಬಳಿ ಯಾರೋ ಇಬ್ಬರು ಆಸಾಮಿಗಳು ಚಿನ್ನದ ಮಾಂಗಲ್ಯ ಸರ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ವಿವಿಪುರಂ ಪೊಲೀಸರಿಗೆ ಹೋಗಿತ್ತು. ಕದ್ದ ಮಾಲು ಕಡಿಮೆ ಬೆಲೆಗೆ ಕೊಡದಿದ್ದರೆ ಅಂತಹವರ ಬಗ್ಗೆ ಮಾರ್ವಡಿಗಳೇ ಪೊಲೀಸರಿಗೆ ಮಾಹಿತಿ ಸೋರಿಕೆ ಮಾಡುವ ಪದ್ಧತಿ ಮೊದಲಿನಿಂದಲೂ ಇದೆ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್‌ಸ್ಪೆಕ್ಟರ್ ಮಿರ್ಜಾ ಆಲಿ ಅವರು ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿ ಮಂಜುನಾಥ್ ಮತ್ತು ಮರಿಸ್ವಾಮಿ ಇಬ್ಬರನ್ನು ವಶಕ್ಕೆ ಪಡೆಯಲು ಸೂಚಿಸಿದ್ದಾರೆ. ಮಾಂಗಲ್ಯ ಸರ ಮಾರಾಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆ ತಂದಿದ್ದಾರೆ. ಈವೇಳೆ ಕಳ್ಳತನ ಮಾಡಿದ್ದನ್ನು ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಅವರು ಕಳ್ಳತನ ಮಾಡಿದ ಉದ್ದೇಶ ಕೇಳಿ ಪೊಲೀಸರ ಕಣ್ಣಾಲಿಗಳೇ ಒದ್ದೆಯಾಗಿವೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೋಣಹಳ್ಳಿ ನಿವಾಸಿ ಮಂಜುನಾಥ್ ಮತ್ತು ಟಿ. ನರಸೀಪುರ ತಾಲೂಕಿನ ಮರಿಸ್ವಾಮಿ ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ ಪರಮಾಪ್ತ ಸ್ನೇಹಿತರಾಗಿದ್ದರು. ಬೆಂಗಳೂರಿನಲ್ಲಿ ಸಿಕ್ಕ ಕೆಲಸ ಮಾಡಿಕೊಂಡು ಹಣ ಸಂಪಾದನೆ ಮಾಡುತ್ತಿದ್ದರು. ಊರಿನಲ್ಲಿ ಜಮೀನು ಇದ್ದರೂ ಅದರಿಂದ ಜೀವನ ಸಾಗಿಸಲು ಆಗುತ್ತಿರಲಿಲ್ಲ. ಹೀಗಾಗಿ ಬೆಂಗಳೂರಿನಲ್ಲಿಯೇ ಹಣ ಸಂಪಾದಿಸಿ ಜೀವನ ಸಾಗಿಸುತ್ತಿದ್ದರು. ಕರೋನಾಗೆ ಹೆದರಿ ಊರಿಗೆ ಹೋಗಿದ್ದರು. ಅಲ್ಲಿ ಜೀವನ ನಡೆಯುವುದೇ ಕಷ್ಟವಾಗಿತ್ತು.

ಇದ್ದಕ್ಕಿದ್ದಂತೆ ಮರಿಸ್ವಾಮಿಯ ಕಾಲಿನಲ್ಲಿ ಊತ ಕಂಡಿತ್ತು. ದಿನೇ ದಿನೇ ಆನೆ ಕಾಲಿನಂತೆ ಬೆಳೆಯುತ್ತಿತ್ತು. ಗಾಬರಿಗೊಂಡ ಮರಿಸ್ವಾಮಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ವಾಸಿಯಾಗಿಲ್ಲ. ದೊಡ್ಡ ಆಸ್ಪತ್ರೆಯಲ್ಲಿ ತೋರಿಸಿದಾಗ ಕ್ಯಾನ್ಸರ್ ತಗುಲಿದೆ ಎಂಬ ವಿಷಯ ಗೊತ್ತಾಗಿದೆ. ಅಷ್ಟು ದುಬಾರಿ ಮೊತ್ತದ ಚಿಕಿತ್ಸೆ ಕೊಡಿಸಲು ಆಗದ ಸ್ಥಿತಿ ಮರಿಸ್ವಾಮಿಯದ್ದು. ತನ್ನ ಪ್ರಾಣ ಸ್ನೇಹಿತ ಮಂಜುನಾಥ್ ಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಮಂಜುನಾಥ್ ಏನೇ ಆದ್ರೂ ನಾನು ನೋಡಿಕೊಳ್ಳುತ್ತೇನೆ. ನಿನಗೆ ಚಿಕಿತ್ಸೆ ಕೊಡಿಸುತ್ತೇನೆ ಎಂದು ಮಂಜುನಾಥ್ ಭರವಸೆ ಕೊಟ್ಟಿದ್ದಾನೆ. ಕೆಲವರ ಬಳಿ ಸಾಲ ಕೇಳಿದರೂ ಮಂಜುನಾಥ್ ಗೆ ಗಿಟ್ಟಿಲ್ಲ.ಹೀಗಾಗಿ ಬೇರೆ ದಾರಿ ಕಾಣದೇ ಸರಗಳ್ಳನಾಗಲು ಹೊರಟಿದ್ದಾನೆ. ಮೊದಲು ಕೆಲ ಕಡೆ ಕಳ್ಳತನ ಮಾಡಿ ಬಂದ ಹಣದಲ್ಲಿ ಸ್ನೇಹಿತನಿಗೆ ಚಿಕಿತ್ಸೆ ಕೊಡಿಸಿದ್ದಾನೆ. ಆದರೂ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ಇರುವ ವಿಷಯ ತಿಳಿಸಿ ಇಬ್ಬರೂ ಕಳ್ಳತನಕ್ಕೆ ಇಳಿದು ಬಂದ ಹಣದಲ್ಲಿ ಚಿಕಿತ್ಸೆ ಕೊಡಿಸಲು ತೀರ್ಮಾನಿಸಿದ್ದಾರೆ.
ಸರಗಳ್ಳತನ ಮಾಡುವ ಬಗ್ಗೆ ಯೂಟೂಬ್ ವಿಡಿಯೋ ನೋಡಿದ್ದಾರೆ. ಅದರಂತೆ ಚಾಮರಾಜನಗರಕ್ಕೆ ಹೋಗಿ ಚಿಲ್ಲರೆ ಅಂಗಡಿಯೊಂದಕ್ಕೆ ಸ್ಕೆಚ್ ಹಾಕಿದ್ದಾರೆ. ಎರಡು ದಿನ ಗಮನಿಸಿ ವ್ಯಾಪಾರ ಮಾಡುವ ಸೋಗಿನಲ್ಲಿ ಮಹಿಳೆಯ ಸರ ಕದ್ದು ಪರಾರಿಯಾಗಿದ್ದಾರೆ. ಹೀಗೆ ನಾಲ್ಕೈದು ಕಡೆ ಚಿನ್ನದ ಆಭರಣ ಕದ್ದಿದ್ದಾರೆ. ಅಲ್ಲಿ ಅಡಮಾನ ಇಟ್ಟರೆ ಅನುಮಾನ ಬರುತ್ತದೆ ಎಂದು ಭಯಬಿದ್ದು ಬೆಂಗಳೂರಿನಲ್ಲಿ ಅಡಮಾನವಿಡಲು ಬಂದಿದ್ದಾರೆ. ಚಾಮರಾಜನಗರದ ಗಣಗಲು ಗ್ರಾಮದಲ್ಲಿ ಕದ್ದಿದ್ದ ಸರ ಮಾರಾಟ ಮಾಡಲು ಬೆಂಗಳೂರಿಗೆ ಬಂದು ಸಿಕ್ಕಿಬಿದ್ದಿದ್ದಾರೆ. ಚಿಲ್ಲರೆ ಅಂಗಡಿಯಲ್ಲಿ ಸಿಗರೇಟು ಖರೀದಿ ಸೋಗಿನಲ್ಲಿ ಮಹಿಳೆಯ ಕತ್ತಿನಲ್ಲಿದ್ದ 34 ಗ್ರಾಂ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾರೆ. ಕದ್ದ ಮಾಲನ್ನು ಬೆಂಗಳೂರಿನಲ್ ಲಿ ಮಾರಾಟ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ನಡೆಸಿದಾಗ ಮಂಜುನಾಥ್ ತಪ್ಪೊಪ್ಪಿಕೊಂಡಿದ್ದಾನೆ. ಈ ವೇಳೆ ಮರಿಸ್ವಾಮಿ ಹೇಳಿಕೆ ನೀಡಿದ್ದು, ಮಂಜುನಾಥ್ ಸರ ಕದ್ದಿದ್ದೇ ನನಗೋಸ್ಕರ ಎಂದು ಕ್ಯಾನ್ಸರ್ ನಿಂದ ಬಳಲುತ್ತಿರುವ ( ಆನೆಕಾಲು ಮಾದರಿ) ಕಾಲು ತೋರಿಸಿದ್ದಾರೆ. ಮರಿಸ್ವಾಮಿ ಮತ್ತು ಮಂಜುನಾಥ ಸರಗಳ್ಳರಾದ ಕಥೆ ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ. ಆದರೆ ಕಾನೂನು ಕೇಳುವುದಿಲ್ಲವಲ್ಲಾ ? ಇಬ್ಬರ ಬಳಿಯಿದ್ದ ಮಾಂಗಲ್ಯ ಸರ ವನ್ನು ವಶಪಡಿಸಿಕೊಂಡು ಜೈಲಿಗೆ ಕಳುಹಿಸಿದ್ದಾರೆ. ಮಂಜುನಾಥ್ ನನ್ನು ವಿಚಾರಣೆ ನಡಸಿದಾಗ ಮರಿಸ್ವಾಮಿಗೆ ಕ್ಯಾನ್ಸರ್ ನಿಂದ ಕಾಲಿಗೆ ತೊಂದರೆಯಾಗಿತ್ತು.ಆತನಿಗೆ ಚಿಕಿತ್ಸೆ ಕೊಡಿಸಲು ಕಳ್ಳತನಕ್ಕೆ ಇಳಿದಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಜವಾಗಿಯೂ ಸ್ನೇಹಿತನಿಗಾಗಿ ಸರಗಳ್ಳತನ ಮಾಡಿದನೋ, ಸರಗಳ್ಳತನ ಕೇಸಿನಿಂದ ತಪ್ಪಿಸಿಕೊಳ್ಳಲು ಈ ನಾಟಕ ಆಡಿದರೂ ಗೊತ್ತಿಲ್ಲ. ಆದರೆ ಪೊಲೀಸರು ಹೇಳುವ ಪ್ರಕಾರ ಮಂಜುನಾಥ್ ತನ್ನ ಸ್ನೇಹಿತನ ಜೀವಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.












Click it and Unblock the Notifications