ಶಿವಾನಂದ ವೃತ್ತ ಉಕ್ಕಿನ ಮೇಲ್ಸೇತುವೆ ಆಗಸ್ಟ್ 15ಕ್ಕೆ ಸಂಚಾರಕ್ಕೆ ಮುಕ್ತ ಸಾಧ್ಯತೆ
ಬೆಂಗಳೂರು ಜು. 10: ವರ್ಷಗಳಿಂದಲೂ ಗಡುವು ಮೀರುತ್ತಿದ್ದ ಬೆಂಗಳೂರಿನ ಮೊದಲ ಉಕ್ಕಿನ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಕಾಲ ಕೂಡಿ ಬಂದಿದ್ದು, ಮುಂದಿನ ತಿಂಗಳ ಆಗಸ್ಟ್ 15ರ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ನಗರದ ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ ಹೈಕೋರ್ಟ್ ಗೆ ವರದಿ ಸಲ್ಲಿಸಿತ್ತು. ವರದಿ ಪರಿಶೀಲಿಸಿದ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಹೀಗಾಗಿ ಬಿಬಿಎಂಪಿ ಮೇಲ್ಸೇತುವೆ ಕಾಮಗಾರಿ ಮುಗಿಸಲು ಕಾರ್ಯೋನ್ಮುಖವಾಗಿದ್ದು, ಮುಂದಿನ ತಿಂಗಳ ಆಗಸ್ಟ್ 15ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಒಟ್ಟು 16ಪಿಲ್ಲರ್ ಗಳ ಈ ಮೇಲ್ಸೇತುವೆ 493 ಮೀಟರ್ ಎತ್ತರ ವಾಗಿದೆ. ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್ ಕಡೆಗೆ ಡೌನ್ ರಾಂಪ್ ನಿರ್ಮಾಣದಲ್ಲಿ ಸಮಸ್ಯೆ ಉಂಟಾಗಿತ್ತು. ಭೂಸ್ವಾಧೀನ ಇನ್ನಿತರ ಕಾರಣಗಳಿಗೆ ಕಾಮಗಾರಿ ಕೆಲಸ ಕೋರ್ಟ್ ಮೆಟ್ಟಿಲೇರಿತ್ತು. ಇದಾದ ನಂತರ ಮೂಲ ವಿನ್ಯಾಸವನ್ನು ಬದಲಾಯಿಸಿದ ಬಿಬಿಎಂಪಿ ಅಧಿಕಾರಿಗಳು ನಿರ್ಮಾಣ ಯೋಜನೆಯನ್ನು ಪುನಃ ರಚಿಸಿದ್ದಾರೆ. ಅದರಂತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಭೂಸ್ವಾಧೀನದಿಂದ 40ಕೋಟಿ ರು. ಹೊರೆ
ರೈಲ್ವೆ ಬ್ರಿಡ್ಜ್ ಕಡೆಗಿನ ಮೇಲ್ಸೇತುವೆಯ ಡೌನ್ ರಾಂಪ್ ಗಾಗಿ 579.5 ಚದರ ಮೀಟರ್‌ನ ಏಳು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿತ್ತು. ಅದಕ್ಕಾಗಿ ಬಿಬಿಎಂಪಿ 40 ಕೋಟಿ ರೂಪಾಯಿ ವ್ಯಯಿಸುವ ಅಗತ್ಯವಿತ್ತು. ಇದನ್ನು ತಡೆಯಲು ಹಾಗೂ ಕಾಮಗಾರಿ ಸರಾಗವಾಗಿ ಸಾಗಿಸಲು ಡೌನ್ ರಾಂಪ್ ಉದ್ದವನ್ನು ಅಂದಾಜು 30 ಮೀಟರ್ ನಷ್ಟು ಕಡಿಮೆ ಮಾಡಿ ಕಾಮಗಾರಿ ಮುಗಿಸಲು ಸಜ್ಜಾಗಿದೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಅವರು ಹೇಳಿದ್ದಾರೆ.
ಇಂಡಿಯನ್ ರೋಡ್ ಕಾಂಗ್ರೆಸ್‌ನ ಪ್ರಕಾರ, ಕಾಮಗಾರಿಯ ಶೇಕಡಾವಾರು ಗ್ರೇಡಿಯಂಟ್ ಅನ್ನು ಬದಲಾಯಿಸಲು ಅಧಿಕಾರ ಹೊಂದಿದ್ದೇವೆ. ಈ ಹಿನ್ನೆಲೆಯಲ್ಲಿ ಇರುವ ಮಿತಿಯೊಳಗೆ ಮತ್ತು ಮೂಲ ವಿನ್ಯಾಸದ ಪ್ರಕಾರ ಶಿವಾನಂದ ವೃತ್ತದ ರೈಲ್ವೆ ಬ್ರಿಡ್ಜ ಭಾಗದ ಡೌನ್ ರಾಂಪ್ ಅನ್ನು ನಿರ್ಮಿಸುತ್ತಿದ್ದೇವೆ. ಯೋಜನೆ ಮುಗಿಸಲು 30 ದಿನ ಕಾಲಾವಕಾಶ ಬೇಕಿದೆ. ಪದೇ ಬರುತ್ತಿರುವ ಮಳೆ ಕೆಲಸಕ್ಕೆ ಅಡ್ಡಿಪಡಿಸುತ್ತಿದೆ. ಒಟ್ಟಾರೆ ಮುಂದಿನ ಒಂದೂವರೆ ತಿಂಗಳು ಅಂದರೆ ಆಗಸ್ಟ್ 15ರ ಹೊತ್ತಿಗೆ ಕೆಲಸ ಮುಗಿಸಿ ಸಾರ್ವಜನಿಕ ಸಂಚಾರಕ್ಕೆ ನೀಡಲಿದ್ದೇವೆ. ಈಗಾಗಲೇ ಎಲ್ಲ ಸಿವಿಲ್ ಕಾಮಗಾರಿ ಆರಂಭಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

13ತಿಂಗಳಲ್ಲೇ ಮುಗಿಯಬೇಕಿದ್ದ ಮೇಲ್ಸೇತುವೆ
ಸುಮಾರು 60ಕೋಟಿ ವೆಚ್ಚದಲ್ಲಿ 2017ರ ಜೂನ್ ನಲ್ಲಿ ಆರಂಭವಾಗಿದ್ದ ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ 13ತಿಂಗಳಲ್ಲಿ ಅಂದರೆ 2018 ಜುಲೈಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಸಾಕಷ್ಟು ಸಮಸ್ಯೆಗಳು ಎದುರಾದ ಹಿನ್ನೆಲೆ 2022ರ ಜುಲೈ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಇದೀಗ ಹೈಕೋರ್ಟ್ ಹಸಿರು ನಿಶಾನೆ ತೋರಿದ ಬಳಿಕ ಕಾಮಗಾರಿಗೆ ವೇಗ ದೊರೆತಿದೆ. ಈ ಬಾರಿ ನಿಗದಿತ ಗಡುವಿನಲ್ಲಿ ಮುಗಿಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications