ರೈತರಿಗಾಗಿ ಸದಾ ನನ್ನ ಮನೆ ಬಾಗಿಲು ತೆರೆದಿರುತ್ತದೆ: ಸಿಎಂ ಯಡಿಯೂರಪ್ಪ!
ಬೆಂಗಳೂರು, ಜ. 26: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರವಾಗಿದೆ. ಜೊತೆಗೆ ಇಡೀ ದೇಶಾದ್ಯಂತ ರೈತರ ಪ್ರತಿಭಟನೆ ಬೆಂಬಲಿಸಿ ರೈತರು ಬೆಂಬಲ ವ್ಯಕ್ತಪಡಿಸಿ ಟ್ರ್ಯಾಕ್ಟರ್ ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ಮಾಡಲು ರಾಜ್ಯ ಸರ್ಕಾರ ಅವಕಾಶ ಕೊಟ್ಟಿಲ್ಲ ಎಂಬ ಆರೋಪಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಯಾವ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿಲ್ಲ. ರೈತರ ಪ್ರತಿಭಟನೆಯನ್ನು ನಮ್ಮ ಸರ್ಕಾರ ಹತ್ತಿಕ್ಕಿಲ್ಲ. ಬೆಂಗಳೂರಿನಲ್ಲಿ ಟ್ರ್ಯಾಕ್ಟರ್‌ಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಅದಕ್ಕೆ ತರಬೇಡಿ ಅಂತ ಹೇಳಿದ್ದೇವು. ಪ್ರತಿಭಟನೆ ಮಾಡುತ್ತಿರುವವರು ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದೇವೆ ಅಂತ ಹೇಳುತ್ತಿಲ್ಲ. ಕೇವಲ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಅಷ್ಟೆ ಎಂದು ಸಿಎಂ ಯಡಿಯೂರಪ್ಪ ಅವರು ಕಿಡಿ ಕಾರಿದ್ದಾರೆ.
ರೈತರಿಗಾಗಿ ಯಾವತ್ತೂ ಕೂಡ ನನ್ನ ಮನೆ ಬಾಗಿಲು ತೆರೆದಿರುತ್ತದೆ. ಯಾವಾಗ ಬೇಕಾದರೂ ರೈತ ಮುಖಂಡರು ಬಂದು ನನ್ನೊಂದಿಗೆ ಚರ್ಚೆ ಮಾಡಬಹುದು ಎಂದು ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.