ಶ್ರೀಮತಿ ಗಂಗಮ್ಮ ಸೋಮಪ್ಪಾ ಬೊಮ್ಮಾಯಿ ಸಾಹಿತ್ಯ ಪ್ರಶಸ್ತಿ ಪ್ರಕಟ: ಕಸಾಪ ಜಾಣ,ಕಾವ, ರತ್ನ ಪರೀಕ್ಷೆಗೆ ಅರ್ಜಿ ಆಹ್ವಾನ
ಹುಬ್ಬಳ್ಳಿ, ಜೂನ್ 29: ಪ್ರತಿ ವರ್ಷ ಈ ಬಾರಿಯು ಕೂಡ ಶ್ರೀಮತಿ ಗಂಗಮ್ಮ ಸೋಮಪ್ಪಾ ಬೊಮ್ಮಾಯಿ ಎಜುಕೇಶನಲ್ ಅಂಡ್ ವೆಲ್ ಫೇರ್ ಫೌಂಡೇಶನ್ ವತಿಯಿಂದ ಕೊಡಮಾಡುವ ಪ್ರಶಸ್ತಿಗೆ ಆಯ್ಕೆಯಾದವರನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಪ್ರಕಟಿಸಿದರು.
'ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ' ಈ ಶ್ರೀಮತಿ ಗಂಗಮ್ಮಾ ಸೋಮಪ್ಪಾ ಬೊಮ್ಮಾಯಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಬಾರಿಯು ಸಹ 2020-22 ನೇ ಸಾಲಿನಲ್ಲಿ ಪ್ರಕಟಗೊಂಡ ಯಾವ ಪುಸ್ತಕಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ ಎಂದು ಸಂಸ್ಥೆ ತಿಳಿಸಿದೆ.

'ಅಕ್ಕ ಪ್ರಶಸ್ತಿ'ಗೆ ಡಾ. ಹೇಮಾ ಪಟ್ಟಣಶೆಟ್ಟಿ ಅವರ 'ಅಕ್ಕರದ ಸುಯಿಧಾನ' ಕೃತಿ, 'ಜಾನಪದ ಸಿರಿ ಪ್ರಶಸ್ತಿ'ಗೆ ಹೊರೆಯಾಲ ದೊರೆಸ್ವಾಮಿ ಅವರ 'ಜಾನಪದ ನಡೆನುಡಿ' ಕೃತಿ ಆಯ್ಕೆಯಾಗಿದೆ. ಅರಳು ಮೊಗ್ಗು ಪ್ರಶಸ್ತಿಗೆ ಕುಮಾರಿ ನೇಹಾ ರಾಮಪುರ್ ಅವರ 'ಮ್ಯಾಜಿಕ್ ಪೆನ್ಸಿಲ್' ಕೃತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಆಯ್ಕೆಯಾದ ಪ್ರತಿಯೊಂದು ಕೃತಿಗಳ ಪುರಸ್ಕೃತರಿಗೆ ತಲಾ 25,000 ರೂ ನಗದು ಬಹುಮಾನ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾವ-ಜಾಣ-ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ
ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 'ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ' ಪರೀಕ್ಷೆಗಳಿಗೆ 2023-2024ನೇ ಸಾಳಿಗೆ ಅರ್ಜಿ ಆಹ್ವಾನಿಸಿದೆ.
2023 ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿರುವ 'ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ' ಪರೀಕ್ಷೆಗಳಿಗೆ 2023ರ ಆಗಸ್ಟ್ 31ರೊಳಗಾಗಿ ಅರ್ಜಿ ಸಲ್ಲಿಸಬೇಕಿದೆ. 2023ರ ಸೆಪ್ಟೆಂಬರ್ 15ರ ವರೆಗೆ ದಂಡ ಶುಲ್ಕ ರೂ. 50/- ಸಹಿತ ಹೆಚ್ಚುವರಿಯಾಗಿ ಪಾವತಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
ಪರೀಕ್ಷೆಯ ನಿಯಮಾವಳಿ ಹಾಗೂ ಅರ್ಜಿಯನ್ನು 25 ರೂಪಾಯಿ ಶುಲ್ಕ ಪಾವತಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಇರುವ ಮಾರಾಟ ಮಳಿಗೆಯಲ್ಲಿ ಆದಷ್ಟು ಶೀಘ್ರವೇ ಪಡೆಯಬಹುದು. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಹೆಸರಿಗೆ ಮೂವತ್ತು ರೂಪಾಯಿ ಮನಿಯಾರ್ಡರ್ ಮಾಡಿದರೆ ಅರ್ಜಿಯನ್ನು ತಾವು ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವ ಸೌಲಭ್ಯವನ್ನು ಪರಿಷತ್ತು ಕಲ್ಪಿಸಿದೆ.
ಅರ್ಜಿ ನಮೂನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ಜಾಲತಾಣ www.kasapa.in ಮೂಲಕ ಸಹ ಪಡೆದು ಕೊಳ್ಳಬಹುದು. ಅಂತರ್ಜಾಲದ ಮೂಲಕ ಅರ್ಜಿ ನಮೂನೆ ಪಡೆದವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ 25ರೂಪಾಯಿಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು- 560018, ದೂರವಾಣಿ ಸಂಖ್ಯೆ: 08026612991, 222423867 ಅಥವಾ 26623584 ಸಂಖ್ಯೆ ಸಂಪರ್ಕಿಸುವಂತೆ ಪರಿಷತ್ತು ತಿಳಿಸಿದೆ.












Click it and Unblock the Notifications