ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಅತ್ಯಂತ ಉದ್ದದ ಹೊರವರ್ತುಲ ರಸ್ತೆ ಶೀಘ್ರ

By Rajendra
|
Google Oneindia Kannada News

ಬೆಂಗಳೂರು, ನ.30: ಸುದೀರ್ಘ ಮೂರು ವರ್ಷಗಳ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ನಂದಿ ಇನ್ಫ್ರಾಸ್ಟಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ಕೊನೆಗೂ ತಮ್ಮ ಕಚ್ಚಾಟ ನಿಲ್ಲಿಸಿವೆ. 41 ಕಿ.ಮೀ. ಉದ್ದದ ನೈಸ್ ಪೆರಿಫೆರಲ್ ರಿಂಗ್ ರಸ್ತೆಗೆ ಪ್ರಸ್ತಾವಿತ 65 ಕಿ.ಮೀ. ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‍ಆರ್) ಜೋಡಣೆ ಯಾಗಲಿದೆ.

ಈ ಮೂಲಕ ನಗರದ ಅತೀ ಉದ್ದದ ರಸ್ತೆ ಕಾಮಗಾರಿಗೆ ಶೀಘ್ರ ಚಾಲನೆ ದೊರೆಯಲಿದೆ. ಈ ಸಮಗ್ರ ರಸ್ತೆಯಿಂದಾಗಿ ನಗರದಲ್ಲಿ ಮೂರನೇ ರಿಂಗ್ ರಸ್ತೆ ನಿರ್ಮಾಣವಾದಂತೆ ಆಗುತ್ತದೆ ಹಾಗೂ ಸಂಚಾರ ದಟ್ಟಣೆ ಸಮಸ್ಯೆಗೂ ತಕ್ಕಮಟ್ಟಿಗೆ ಪರಿಹಾರ ದೊರಕ ಬಹುದಾಗಿದೆ.

ಸಮಗ್ರ ರಸ್ತೆ ಯೋಜನೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಉನ್ನತ ಅಧಿಕಾರ ಸಮಿತಿಯ ಸಭೆಯಲ್ಲಿ ಶೀಘ್ರದಲ್ಲಿ ಅನುಮೋದನೆ ದೊರಕುವ ನಿರೀಕ್ಷೆ ಇದೆ. ಇದೇ ಹೊತ್ತಿಗೆ ಎರಡನೇ ಹಂತದ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಕೈಬಿಡಲು ಬಿಡಿಎ ಮುಂದಾಗಿದೆ.

ತೀರ್ಮಾನ ತೆಗೆದುಕೊಳ್ಳುವಲ್ಲಿ ಆದ ವಿಳಂಬದಿಂದಾಗಿ ಯೋಜನೆಯ ಮೊತ್ತದಲ್ಲಿ ಭಾರಿ ಹೆಚ್ಚಳ ಆಗಲಿದ್ದು, ಈ ಯೋಜನೆ ಅನುಷ್ಠಾನಕ್ಕೆ ರು.5,800 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಯೋಜನೆಯನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ನೈಸ್-ಪಿಆರ್‍ಆರ್ ಯೋಜನೆ ಪೂರ್ಣಗೊಂಡ ಬಳಿಕ ಎಲೆಕ್ಟ್ರಾನಿಕ್ ಸಿಟಿ-ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಪ್ರಯಾಣದ ಅವಧಿಯಲ್ಲಿ ಸುಮಾರು ಅರ್ಧ ಗಂಟೆಯಷ್ಟು ಕಡಿಮೆ ಆಗಲಿದೆ.

ಈ ಯೋಜನೆಗೆ 2010ರ ಅಕ್ಟೋಬರ್ ನಲ್ಲೇ ಚಾಲನೆ ಸಿಗಬೇಕಿತ್ತು. ಆದರೆ, ನೈಸ್ ಹಾಗೂ ಬಿಡಿಎ ನಡುವೆ ರಸ್ತೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಧಿಕೃತ ಒಪ್ಪಿಗೆ ದೊರಕಿರಲಿಲ್ಲ. ಈ ಯೋಜನೆ ಜಾರಿಗೆ ಬಂದ ಬಳಿಕ ಮೂರನೇ ರಿಂಗ್ ರಸ್ತೆ ಬಳಸುವ ವಾಹನ ಸವಾರರು ಎರಡು ಬಗೆಯ ರಸ್ತೆ ಶುಲ್ಕಗಳನ್ನು ಪಾವತಿಸಬೇಕಿದೆ.

ನೈಸ್ ವಿಭಾಗದಲ್ಲಿ ಅಧಿಕ ರಸ್ತೆ ಶುಲ್ಕವಾದರೆ, ಪೆರಿಫರಲ್ ರಿಂಗ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗದಿಪಡಿಸಿದ ಪ್ರಮಾಣ ದಲ್ಲಿ ಕಡಿಮೆ ರಸ್ತೆ ಶುಲ್ಕ ಪಾವತಿಸಬೇಕಿದೆ. ರಸ್ತೆ ಶುಲ್ಕ ಕಡಿಮೆ ಇರಲಿದೆ ಎಂದು ಬಿಡಿಎ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಕಾಮಗಾರಿಗೆ ಅಧಿಕ ವೆಚ್ಚ ತಗಲುವ ಹಿನ್ನೆಲೆಯಲ್ಲಿ ನೈಸ್ ನಿಗದಿಪಡಿಸಿರುವಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ರಸ್ತೆ ಶುಲ್ಕ ಸಂಗ್ರಹಿಸಬೇಕು ಎಂದು ನೈಸ್ ಅಭಿಪ್ರಾಯಪಟ್ಟಿದೆ.

Soon Bangalore gets longest road
ಹಿನ್ನೆಲೆ: 2009ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.­ಯಡಿ­ಯೂರಪ್ಪ ಅಧ್ಯಕ್ಷತೆಯ ಉನ್ನತ ಅಧಿಕಾರ ಸಮಿತಿ ಹಾಗೂ ಅಬೈಡ್ ಕಾರ್ಯಪಡೆ ನೈಸ್-ಪೆರಿಫೆರಲ್ ರಿಂಗ್ ರಸ್ತೆಯ ಜೋಡಣೆ ಮಾಡಲು ಶಿಫಾರಸು ಮಾಡಿದ್ದವು. 2010ರ ಅಕ್ಟೋಬರ್ 20ರಂದು ಭೂಸ್ವಾಧೀನ ವೆಚ್ಚ, ಸಂಪರ್ಕ ರಸ್ತೆ ನಿರ್ಮಾಣ ಹಾಗೂ ರಸ್ತೆ ಸಮಗ್ರಗೊಳಿಸುವ ವೆಚ್ಚವನ್ನು ಭರಿಸಲು ನೈಸ್ ಒಪ್ಪಿ­ಕೊಂಡಿತ್ತು.

ಹೊಸೂರು ರಸ್ತೆ ಹಾಗೂ ತುಮಕೂರು ರಸ್ತೆಯ ಕೊನೆಯಲ್ಲಿ ಈ ಸಂಪರ್ಕ ರಸ್ತೆಗಳನ್ನು ಪಿಆರ್‍ಆರ್ ಟೋಲ್ ಬೂತ್ ಗೆ ಜೋಡಣೆ ಮಾಡಲು ಯೋಜಿಸಲಾಗಿತ್ತು. ಈ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸಂಪರ್ಕ ರಸ್ತೆಯನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕು ಹಾಗೂ ಈ ಭಾಗದಲ್ಲಿ ಯಾವುದೇ ಟೋಲ್ ಪ್ಲಾಜಾ ನಿರ್ಮಿಸಬಾರದು ಎಂದು ನೈಸ್ ಗೆ ಬಿಡಿಎ ಷರತ್ತು ವಿಧಿಸಿತ್ತು ಎನ್ನಲಾಗಿದೆ.

ಟೋಲ್ ಪ್ಲಾಜಾ ನಿರ್ಮಿಸದಿರಲು ನೈಸ್ ಒಪ್ಪಿಗೆ ಸೂಚಿಸಿತ್ತು. ಆದರೆ, ರಸ್ತೆ ಅಭಿವೃದ್ಧಿ ಕಾರ್ಯವನ್ನು ಮಾಡಿರಲಿಲ್ಲ. ಈ ಹಗ್ಗಜಗ್ಗಾಟ ಮೂರು ವರ್ಷಗಳ ಕಾಲ ಮುಂದುವರಿದಿತ್ತು.

ಪಿಆರ್‍ಆರ್ ಎರಡನೇ ಹಂತಕ್ಕೆ ಎಳ್ಳುನೀರು?
ಒಂದನೇ ಹಂತದ ಸಮಗ್ರ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರಕಿದ ಕೂಡಲೇ 51 ಕಿ.ಮೀ. ವಿಸ್ತಾರದ ಎರಡನೇ ಹಂತದ ಪೆರಿಫರಲ್ ರಿಂಗ್ ರಸ್ತೆ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ.

ಎರಡನೇ ಹಂತದ ಯೋಜನೆಯಲ್ಲಿ ಬನ್ನೇರುಘಟ್ಟ, ಕನಕಪುರ, ಮೈಸೂರು ರಸ್ತೆ, ಮಾಗಡಿ ರಸ್ತೆ ಮೂಲಕ ಹೊಸೂರು ರಸ್ತೆ ಹಾಗೂ ತುಮಕೂರು ರಸ್ತೆ ನಡುವೆ ಸಂಪರ್ಕ ಸಾಧಿಸಲು ಯೋಜನೆ ರೂಪಿಸಲಾಗಿತ್ತು. ಇದೊಂದು ಕ್ಲಿಷ್ಟಕರವಾದ ಮಾರ್ಗ ವಾಗಿತ್ತು.

ಮೂಲ ಯೋಜನೆ ಪ್ರಕಾರ ಯೋಜನೆ ರೂಪಿಸಿದ್ದರೆ ಗೊಟ್ಟಿಗೆರೆಯಲ್ಲಿ ಆಶ್ರಯ ಯೋಜನೆಯಡಿ ನಿರ್ಮಾಣ ಗೊಂಡಿದ್ದ 400 ಮನೆಗಳ ನಿವಾಸಿಗಳು ಸಮಸ್ಯೆಗೆ ಸಿಲುಕುತ್ತಿದ್ದರು. ಪಥ ಬದಲಾವಣೆ ಮಾಡಿದ್ದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ತೊಂದರೆಯಾಗುತ್ತಿತ್ತು. ಇಲ್ಲಿ ಪರಿಸರದ ಪ್ರಶ್ನೆ ಉದ್ಭವಿಸುತ್ತಿತ್ತು. ಬೇರೆ ಯಾವ ಪರ್ಯಾಯ ಮಾರ್ಗಗಳು ಇರಲಿಲ್ಲ.

ಈ ಹಿನ್ನೆಲೆಯಲ್ಲಿ ಬಿಡಿಎ ಈ ಯೋಜನೆಯನ್ನು ಕೈಬಿಡುವುದೇ ಸೂಕ್ತ ಎಂದು ಪ್ರತಿಪಾದಿಸಿತ್ತು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಗಮನಕ್ಕೂ ತರಲಾಗಿತ್ತು. ಇದಕ್ಕೆ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.

ಈ ವಿಷಯದ ಬಗ್ಗೆ ಮೂರು ವರ್ಷಗಳ ಹಿಂದೆಯೇ ಚರ್ಚೆ ನಡೆದಿತ್ತು. ಬಿಡಿಎ ಆಯುಕ್ತರ ಕಚೇರಿಯಲ್ಲಿ 2010ರ ಅಕ್ಟೋಬರ್ ನಲ್ಲಿ ನಡೆದ ಬಿಡಿಎ-ನೈಸ್ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆದು ಈ ಪ್ರಸ್ತಾವ ಕೈಬಿಡುವುದೇ ಉತ್ತಮ ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು.

ಸಮಗ್ರ ರಸ್ತೆ ಯೋಜನೆಗೆ ಒಪ್ಪಿಗೆ ದೊರೆತ ಕೂಡಲೇ ಎರಡನೇ ಹಂತದ ಯೋಜನೆ ರದ್ದಾಗಲಿದೆ. ಒಂದು ವೇಳೆ ಈ ಯೋಜನೆ ರದ್ದಾದರೆ ನೂರಾರು ನಿವಾಸಿಗಳು ಹಾಗೂ ಕೃಷಿಕರಿಗೆ ಭೂಮಿ ಕಳೆದುಕೊಳ್ಳುವ ತಲೆನೋವು ಇರುವುದಿಲ್ಲ.

1. ತುಮಕೂರು ರಸ್ತೆ ಕಡೆಯಲ್ಲಿ ನೈಸ್- ಪೆರಿಫೆರಲ್ ವರ್ತಲ ರಸ್ತೆ ಜೋಡಣೆ
2. ಹೊಸೂರು ರಸ್ತೆ ಕಡೆಯಲ್ಲಿ ಸಮಗ್ರ ಯೋಜನೆ
3. ಸಮಗ್ರ ಯೋಜನೆ ಚಾಲನೆ ಸಿಕ್ಕ ಬಳಿಕ ಪಿಆರ್‍ಆರ್ ಎರಡನೇ ಹಂತದ ಯೋಜನೆ ಕೈಬಿಡಲಾಗುವುದು. (ಒನ್ಇಂಡಿಯಾ ಕನ್ನಡ)

English summary
After three long years, the Bangalore Development Authority (BDA) and the Nandi Infrastructure Corridor Enterprises (NICE) are finally set to end their wrangling over integrating the tolled 41-km NICE Peripheral Road with the proposed 65-km Peripheral Ring Road (PRR) Phase I.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X