Karnataka Rails: ವಂದೇ ಭಾರತ್ ಸೇರಿ 06 ರೈಲುಗಳ ಮಾರ್ಗ ಬದಲಾವಣೆ: ವೇಳಾಪಟ್ಟಿ ಇಲ್ಲಿದೆ
ಬೆಂಗಳೂರು, ನವೆಂಬರ್ 13: ಬೆಳ್ಳಂದೂರು ರಸ್ತೆ-ಕರ್ಮೇಲಾರಂ ರೈಲು ವಿಭಾಗದಲ್ಲಿ ಸುರಕ್ಷತಾ ಸಿಗ್ನಲಿಂಗ್, ಪಾಯಿಂಟ್ಸ್ ಹಾಗೂ ತಾತ್ಕಾಲಿಕ ಟ್ರ್ಯಾಕ್ ಪರಸ್ಪರ ಸಂಪರ್ಕ ಬದಲಾವಣೆ ಹಾಗೂ ಇತರ ಕಾಮಗಾರಿಗಳು ಕೈಗೊಳ್ಳಲಾಗಿದೆ. ಹೊಸ ಹುಸ್ಕೂರು ರೈಲು ನಿಲ್ದಾಣದಲ್ಲಿ ತುರ್ತು ಕಾಮಗಾರಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ 06 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಪರಿಷ್ಕರಣೆ ಇದೇ ನವೆಂಬರ್ 16ರಂದು ಭಾನುವಾರದಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಗ ಬದಲಾದ ರೈಲುಗಳ ಪಟ್ಟಿ, ವಿವರ
* SMVT ಬೆಂಗಳೂರು-ಎರ್ನಾಕುಲಂ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12677) ನವೆಂಬರ್ 16ರಿಂದ SMVT ಬೆಂಗಳೂರು, ಕೃಷ್ಣರಾಜಪುರಂ, ಜೋಲಾರ್ಪೇಟೆ, ತಿರುಪತ್ತೂರು, ಸೇಲಂ ಮಾರ್ಗವಾಗಿ ಸಂಚರಿಸಲಿದೆ. ಕರ್ಮೇಲಾರಂ, ಹೊಸೂರು ಮತ್ತು ಧರ್ಮಪುರಿ ನಿಲ್ದಾಣಗಳಲ್ಲಿ ನಿಲುಗಡೆ ನೀಡದೇ ಸಂಚರಿಸಲಿದೆ ಎಂಬುದನ್ನು ಪ್ರಯಾಣಿಕರು ಗಮನಿಸಬೇಕೆಂದು ರೈಲ್ವೆ ಇಲಾಖೆ ತಿಳಿಸಿದೆ.

* SMVT ಬೆಂಗಳೂರು-ಕರೈಕಲ್ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16529) ಈ ರೈಲು SMVT ಬೆಂಗಳೂರು, ಬೈಯಪ್ಪನಹಳ್ಳಿ, ಕೃಷ್ಣರಾಜಪುರಂ, ಜೋಲಾರ್ಪೇಟೆ, ತಿರುಪತ್ತೂರು, ಸೇಲಂ ಮಾರ್ಗವಾಗಿ ಸೇವೆ ನೀಡಲಿದ್ದು, ಬೆಳಂದೂರು ರಸ್ತೆ ಹಾಗೂ ಓಮಲೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡಲ್ಲ.
* ಯಶವಂತಪುರ-ಸೇಲಂ ಡೈಲಿ ಎಕ್ಸ್‌ಪ್ರೆಸ್ ರೈಲು (16211) ರೈಲು ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ಬನಸವಾಡಿ, SMVT ಬೆಂಗಳೂರು, ಕೃಷ್ಣರಾಜಪುರಂ, ಜೋಲಾರ್‌ಪೇಟೆ ಸೇಲಂ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಬೆಳಂದೂರು ರಸ್ತೆ ಮತ್ತು ಓಮಲೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.
* ಬೆಂಗಳೂರು ಕಂಟೋನ್ಮೆಂಟ್ -ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20641) ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ತಿರುಪತ್ತೂರು, ಸೇಲಂ ಮಾರ್ಗವಾಗಿ ಸಂಚಾರ ಸೇವೆ ನೀಡಲಿದೆ. ಹೊಸೂರು ಮತ್ತು ಧರ್ಮಪುರಿ ನಿಲ್ದಾಣಗಳಲ್ಲಿ ರೈಲು ನಿಲ್ಲುವುದಿಲ್ಲ.
* ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್ ರೈಲು (20642) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಧರ್ಮಪುರಿ ನಿಲ್ದಾಣದಲ್ಲಿ ನಿಲುಗಡೆ ನೀಡದೇ ಸೇಲಂ, ತಿರುಪತ್ತೂರು, ಜೋಲಾರ್‌ಪೇಟೆ ಎ.ಕ್ಯಾಬಿನ್, ಬಂಗಾರಪೇಟೆ, ಕೃಷ್ಣರಾಜಪುರಂ, ಬೆಂಗಳೂರು ಕಂಟೋನ್ಮೆಂಟ್ ಮೂಲಕ ಸಾಗಲಿದೆ.
* ಕೊಯಮತ್ತೂರು-ಲೋಕಮಾನ್ಯ ತಿಲಕ್ ಡೈಲಿ ಎಕ್ಸ್‌ಪ್ರೆಸ್ ರೈಲು (11014) ಸೇಲಂ, ತಿರುಪತ್ತೂರು, ಜೋಲಾರ್‌ಪೇಟೆ ಎ ಕೇಬಿನ್, ಬಂಗಾರಪೇಟೆ, ಕೃಷ್ಣರಾಜಪುರಂ, ಬೆಂಗಳೂರು ಕಂಟೋನ್ಮೆಂಟ್ ಮಾರ್ಗವಾಗಿ ಸಾಗಲಿದ್ದು, ಧರ್ಮಪುರಿ ಮತ್ತು ಹೊಸೂರು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ ಎಂದು ನೈಋತ್ಯ ರೈಲ್ವೆಯ ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಅವರು ಮಾಹಿತಿ ನೀಡಿದ್ದಾರೆ.
ಈ ಕಾಮಗಾರಿಯ ಅವಧಿಯಲ್ಲಿ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ https://www.enquiry.indianrail.gov.in ಗೆ ಅಥವಾ NTES ಆಪ್ ಮೂಲಕ ನವೀಕೃತ ಮಾಹಿತಿ ಪರಿಶೀಲಿಸಬಹುದು. ಈ ಬದಲಾವಣೆಗಳಿಂದ ಪ್ರಯಾಣಿಕರು ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ತಪ್ಪಿಸುವ ಅಗತ್ಯವಿದೆ. ಆದ್ದರಿಂದ ಪ್ರಯಾಣಕ್ಕೂ ಮುನ್ನ ಹೊಸ ವೇಳಾಪಟ್ಟಿ ಹಾಗೂ ಮಾರ್ಗ ವಿವರಗಳನ್ನು ಖಚಿತಪಡಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.












Click it and Unblock the Notifications