ಮಹಾಲಕ್ಷ್ಮಿಯನ್ನ ಪೀಸ್ ಪೀಸ್ ಮಾಡಿದ್ದು ಹೀಗೆ..! ಆರೋಪಿಯ ಕ್ರೂರತ್ವ ಬಿಚ್ಚಿಟ್ಟ ಪೊಲೀಸರು
ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ವೈಯಾಲಿಕಾವಲ್‌ನ ಮಹಾಲಕ್ಷ್ಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿದೆ. ಫ್ರಿಡ್ಜ್‌ನಲ್ಲಿ ಮೃತ ಮಹಾಲಕ್ಷ್ಮಿಯ ದೇಹ ತುಂಡು ತುಂಡಾಗಿ ಇದ್ದಿದ್ದ ವಿಚಾರ ಬೆಂಗಳೂರಿಗರ ನಿದ್ದೆಗೆಡಿಸಿದೆ.
ಮೊದಲಿಗೆ ಪೊಲೀಸರಿಗೂ ಆರೋಪಿಯ ಪತ್ತೆ ತಲೆನೋವಾಗಿತ್ತು. ಆತನನ್ನು ಬೆನ್ನತ್ತಿ ಹೋದ ಕೂಡಲೇ ಕೊನೆಗೆ ಆರೋಪಿ ಕೂಡ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ಆದರೆ, ಆತನ ಕ್ರೂರತ್ವ ಹಾಗೂ ಮಹಾಲಕ್ಷ್ಮಿಯನ್ನು ತುಂಡು ತುಂಡು ಮಾಡಿದ್ದ ಮನೋಭಾವಕ್ಕೆ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ.

ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹಾಲಕ್ಷ್ಮಿಯನ್ನು ಪೀಸ್ ಪೀಸ್ ಮಾಡಿರುವ ಪ್ರಕ್ರಿಯೆ ಹೇಗಿತ್ತು ಎನ್ನುವುದು ಸದ್ಯ ತಿಳಿದುಬಂದಿದೆ. ಆರೋಪಿ ಮುಕ್ತಿ ರಂಜನ್ ರಾಯ್ ಮದುವೆ ವಿಚಾರವಾಗಿ ಮಹಾಲಕ್ಷ್ಮಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದ. ಬಳಿಕ ಬರ್ಬರವಾಗಿ ಕೊಲೆ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ.
ಪೊಲೀಸರಿಗೆ ಮಹಾಲಕ್ಷ್ಮಿ ಮನೆಯಲ್ಲಿ ತಪಾಸಣೆ ನಡೆಸಿದಾಗ ಅಂಗಡಿಯ ಬಿಲ್‌ವೊಂದು ಪತೆಯಾಗಿತ್ತು. ಬಳಿಕ ಪೊಲೀಸರು ಇದರ ಜಾಡು ಹಿಡಿದಾಗ ಆರೋಪಿಯು ಈ ಅಂಗಡಿಯಿಂದ ಮಟನ್ ಹಾಗೂ ಚಿಕನ್ ಕಟ್ ಮಾಡುವ ಎರಡು ಮಚ್ಚುಗಳನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ. ಅದರಿಂದಲೇ ಆರೋಪಿಯು ಮಹಾಲಕ್ಷ್ಮಿ ದೇಹವನ್ನು 59 ತುಂಡುಗಳಾಗಿ ಕತ್ತರಿಸಿ, ಬಳಿಕ ಫ್ರಿಡ್ಜ್‌ನಲ್ಲಿಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಆದರೆ, ಮಹಾಲಕ್ಷ್ಮಿ ಶವವನ್ನು ಈತ ಒಂದೇ ದಿನದಲ್ಲಿ ಪೀಸ್ ಪೀಸ್ ಮಾಡಿದ್ದನೋ ಅಥವಾ ಹಲವು ದಿನಗಳವರೆಗೆ ಈ ಕೃತ್ಯ ಎಸಗಿದ್ದಾನೋ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಒಟ್ಟಾರೆ ಮಹಾಲಕ್ಷ್ಮಿ ದೇಹವನ್ನು ಮಟನ್ ಹಾಗೂ ಚಿಕನ್ ಕಡಿದಂತೆ ವಿಕೃತಿ ಮೆರೆದಿರುವುದಂತೂ ಸತ್ಯ.
ಆರೋಪಿ ಮುಕ್ತಿ ರಂಜನ್ ರಾಯ್ ಅವರು ಒಡಿಶಾದ ಧುಸುರಿಯಲ್ಲಿ ಸೂಸೈಡ್ ಮಾಡಿಕೊಂಡು ಪ್ರಾಣಬಿಟ್ಟಿದ್ದಾನೆ. ಇದಕ್ಕೂ ಮುನ್ನ ಡೆತ್‌ನೋಟ್ ಬರೆದು, ಅದರಲ್ಲಿ ಮಹಾಲಕ್ಷ್ಮಿ ಕೊಲೆಯ ಬಗ್ಗೆಯೂ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ. ಆರೋಪಿಯ ಮರಣೋತ್ತರ ಪರೀಕ್ಷೆ ಬಳಿಕ ಮತ್ತಷ್ಟು ಮಾಹಿತಿ ತಿಳಿಯಲಿದೆ. ಈ ಸಂಬಂಧ ಕರ್ನಾಟಕ ಪೊಲೀಸರು ಆರೋಪಿ ಗ್ರಾಮದಲ್ಲೇ ಬೀಡುಬಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಆರೋಪಿ ಮುಕ್ತಿ ರಂಜನ್ ರಾಯ್ ವಾಸವಿದ್ದ. ಇಲ್ಲಿನ ಮಾಲ್‌ನಲ್ಲಿ ಸೇಲ್ಸ್ ಎಕ್ಸೆಕ್ಯೂಟಿವ್ ಕೆಲಸ ಮಾಡಿಕೊಂಡಿದ್ದ. ಬಳಿಕ ಅಲ್ಲೇ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮಿ ಜೊತೆಗೆ ಒಡನಾಟ ಬೆಳೆಸಿಕೊಂಡಿದ್ದ. ಕೊನೆಗೆ ಮದುವೆ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಕೊಲ್ಲುವ ಹಂತಕ್ಕೆ ತಲುಪಿದೆ. ಕೊಲೆಯಾದ ನಂತರ ಮುಕ್ತಿ ರಂಜನ್ ರಾಯ್, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಮಾರ್ಗವಾಗಿ ತನ್ನೂರಾದ ಒಡಿಶಾದ ಬೋನಿಪುರಕ್ಕೆ ತೆರಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ತನ್ನ ಗ್ರಾಮಕ್ಕೆ ಹೋದ ಬಳಿಕ ಬೆಂಗಳೂರಿನಲ್ಲೇ ಇದ್ದ ತನ್ನ ತಮ್ಮನಿಗೆ ಫೋನ್ ಮಾಡಿ, ಮಹಾಲಕ್ಷ್ಮಿ ಕೊಲೆ ವಿಚಾರವನ್ನು ತಿಳಿಸಿದ್ದ. ನೀನೂ ಅಲ್ಲಿರಬೇಡ, ಬೇಗ ಜಾಗ ಖಾಲಿ ಮಾಡು ಎಂದಿದ್ದ. ಸದ್ಯ ಆರೋಪಿಯ ತಮ್ಮ ಬೆಂಗಳೂರಿನಲ್ಲಿಯೇ ಇದ್ದು ಹೇಳಿಕೆ ಪಡೆಯಲಾಗಿದೆ. ಬಳಿಕ ತನ್ನ ತಾಯಿಗೂ ಮಾಹಿತಿ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕರ್ನಾಟಕ ಪೊಲೀಸರು ಆರೋಪಿಯ ಬೆರಳಚ್ಚು ಮಾದರಿ ಸಂಗ್ರಹಿಸಿದ್ದು, ಇಂದು ಅಥವಾ ನಾಳೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications