ಬೆಂಗಳೂರಲ್ಲಿ ಕೆರೆ ಜಾಗ ಒತ್ತುವರಿ ಮಾಡಿಕೊಂಡವರಿಗೆ ಶುರುವಾಯ್ತು ನಡುಕ!
ಬೆಂಗಳೂರಲ್ಲಿ ಕೆರೆ ಒತ್ತುವರಿ ಸಾಮಾನ್ಯ ಎನ್ನುವಷ್ಟು ಜೋರಾಗಿದೆ. ಈ ರೀತಿ ಇರುವಾಗಲೇ ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಮಾಡಿಕೊಂಡು ಮೂರು ಜನರಿಗೆ ಪಾಠ ಕಲಿಸಲಾಗಿದೆ. ಸರ್ಕಾರಿ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡವರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಕಠಿಣ ಶಿಕ್ಷೆಯನ್ನು ವಿಧಿಸಿದೆ. ಈ ಮೂಲಕ ಬೆಂಗಳೂರಲ್ಲಿ ಕೆರೆ ಒತ್ತುವರಿ ಮಾಡಿಕೊಳ್ಳುವವರಿಗೆ ನಡುಕು ಶುರುವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿಯ ಕೆರೆ ವಿಭಾಗ ಹಾಗೂ ಬಿಎಂಟಿಎಫ್ ನಿರಂತರವಾಗಿ ಕೆಲಸ ಮಾಡುತ್ತಿದೆ. ಇದೀಗ ಜಮೀನು ಒತ್ತುವರಿ ಮಾಡಿಕೊಂಡು ಶೌಚಾಲಯ ಹಾಗೂ ಮನೆಗಳನ್ನು ನಿರ್ಮಾಣ ಮಾಡಿದ್ದ 3 ಜನ ಆರೋಪಿಗಳಿಗೆ 1 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ, ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶ ಮಾಡಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಹೋಬಳಿ ವ್ಯಾಪ್ತಿಯ ಹೆಬ್ಬಗೋಡಿ ಗ್ರಾಮದ ಸರ್ವೇ ಸಂಖ್ಯೆ 159 ರ 32 ಎಕರೆ 13 ಗುಂಟೆ ಸರ್ಕಾರಿ ಕೆರೆಯ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಎ1- ಕೃಷ್ಣಪ್ಪ, ಎ2- ನಂಜಪ್ಪ, ಎ3- ರಾಮಯ್ಯ, ಎ4- ಎಂ.ವೆಂಕಟೇಶ್, ಎ5- ಎಚ್.ಎಂ.ಸುಬ್ಬಣ್ಣ, ಎ6- ಲಕ್ಷ್ಮೀದೇವಿ, ಎ7- ಪಿಳ್ಳಪ್ಪ ಎನ್ನುವವರು ಅನಧಿಕೃತವಾಗಿ ಕೆರೆ ಒತ್ತುವರಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ಈ ರೀತಿ ಕೆರೆ ಒತ್ತುವರಿ ಮಾಡಿಕೊಂಡಿದ್ದವರು ಒತ್ತುವರಿ ಜಾಗದಲ್ಲಿ ಶೌಚಾಲಯ ಹಾಗೂ ಮನೆಗಳನ್ನು ನಿರ್ಮಾಣ ಸಹ ಮಾಡಿಕೊಂಡಿದ್ದಾರೆ. ಈ ಆರೋಪಿಗಳ ಮೇಲೆ ಬಿಎಂಟಿಎಫ್ ಪೊಲೀಸ್ ಠಾಣೆ ಮೊ.ಸಂ: 19/2012 : 192(ಎ) ಕೆ.ಎಲ್.ಆರ್ ಆಕ್ಟ್ ರೀತಿ ದಿನಾಂಕ: 22-02-2012 ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಬಿಎಂಟಿಎಫ್ ಪೊಲೀಸ್ ಠಾಣೆಯಲ್ಲಿ ತನಿಖೆಗೆ ಕ್ರಮ ತೆಗೆದುಕೊಳ್ಳಲಾಗಿತ್ತು.
ಈ ಪ್ರಕರಣದಲ್ಲಿ ತನಿಖೆ ನಡೆಸಿ. ಸಾಕ್ಷಿ ಮತ್ತು ದಾಖಲಾತಿಗಳನ್ನು ಸಂಗ್ರಹಿಸಿ ಆರೋಪಿಗಳ ವಿರುದ್ಧ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ಚಾರ್ಜ್‌ಶೀಟ್ (ದೋಷಾರೋಪಣೆ ಪಟ್ಟಿ) ಸಲ್ಲಿಸಲಾಗಿತ್ತು. ನ್ಯಾಯಾಲಯವು ವಿಚಾರಣೆ ನಡೆಸಿದ್ದು, ಈ ವಿಚಾರಣೆಯಲ್ಲಿ ಆರೋಪಿಗಳು ಕೆರೆಯ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಶೌಚಾಲಯ ಮತ್ತು ಮನೆಗಳನ್ನು ನಿರ್ಮಾಣ ಮಾಡಿರುವುದು ಧೃಡಪಟ್ಟಿದೆ.
ಈ ಸಂಬಂಧ ಆರೋಪಿಗಳಾದ ಎ4- ಎಂ.ವೆಂಕಟೇಶ್, ಎ5- ಹೆಚ್.ಎಂ.ಸುಬ್ಬಣ್ಣ ಮತ್ತು ಎ6- ಲಕ್ಷ್ಮೀದೇವಿ ಎನ್ನುವವರಿ 1 ವರ್ಷ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಲಾಗಿದೆ. ಈಚೆಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಈ ಸಂಬಂಧ ಆದೇಶ ಮಾಡಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ.
ಕೆರೆ ಒತ್ತುವರಿ ಮಾಡಿಕೊಂಡವರಿಗೆ ಆತಂಕ: ಇನ್ನು ಕೆರೆ ಒತ್ತುವರಿ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಮೂರು ಜನರಿಗೆ ಶಿಕ್ಷೆಯಾಗುತ್ತಿದ್ದಂತೆಯೇ ಬೆಂಗಳೂರಲ್ಲಿ ಕೆರೆ ಒತ್ತುವರಿ ಮಾಡಿಕೊಂಡಿರುವವರಿಗೆ ಆತಂಕ ಶುರುವಾಗಿದೆ. ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಮಾಡಿಕೊಂಡಿರುವವರಿಗೂ ಮುಂದಿನ ದಿನಗಳಲ್ಲಿ ಶಿಕ್ಷೆಯಾಗುವ ಸಾಧ್ಯತೆ ಇದೆ. ಕೆರೆ ಒತ್ತುವರಿ ಮಾಡಿಕೊಂಡಿರುವವರ ಪಟ್ಟಿಯನ್ನು ಬಿಬಿಎಂಪಿ ಸಿದ್ಧ ಮಾಡಿಕೊಂಡಿದೆ ಎನ್ನಲಾಗಿದೆ.












Click it and Unblock the Notifications