'ಮೋದಿ..ಮೋದಿ..' ಎನ್ನುವವರ ಕಪಾಳಕ್ಕೆ ಬಾರಿಸಿ: ಸಚಿವರ ವಿವಾದಿತ ಹೇಳಿಕೆ ವಿರುದ್ಧ ಬಿಜೆಪಿ ದೂರು, ನಿಷೇಧಕ್ಕೆ ಒತ್ತಾಯ
ಬೆಂಗಳೂರು, ಮಾರ್ಚ್ 26: ಪ್ರಧಾನಿ 'ಮೋದಿ.. ಮೋದಿ..' ಎಂದು ಕೂಗುವ ಯುವಕರ ಕಪಾಳಕ್ಕೆ ಹೊಡೆಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕೊಪ್ಪಳದಲ್ಲಿ ವಿವಾದಿತ ಹೇಳಿಕೆ ನೀಡಿದ್ದಾರೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವರ ವಿರುದ್ಧ ಬೆಂಗಳೂರಲ್ಲಿ ಬಿಜೆಪಿ ನಿಯೋಗವು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಪ್ರಚಾರದಿಂದ ಅವರನ್ನು ನಿರ್ಬಂಧಿಸುವಂತೆ ಕೋರಿದೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು, ಜಿಲ್ಲೆಯ ಕಾರಟಗಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಪ್ರಧಾನಿಯವರು ವಾರ್ಷಿಕವಾಗಿ 2 ಕೋಟಿ ಉದ್ಯೋಗ ನೀಡುತ್ತೇನೆಂದು ಭರವಸೆ ಕೊಟ್ಟಿದ್ದರು. ನೀಡಿದ ಮಾತಿನಂತೆ ಈವರೆಗೆ ಭರವಸೆ ಈಡೇರಿಲ್ಲ. ಕಳೆದ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಸಹ ಯುವಕರಿಗೆ ಉದ್ಯೋಗ ಕೊಡಲು ಇವರ ಕೈಯಲ್ಲಿ ಆಗಿಲ್ಲ ಎಂದರು.
20 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು
ಪ್ರಧಾನಿಯವರು ಹೇಳಿದಂತೆ ನಡೆದುಕೊಂಡಿದ್ದರೆ ಕಳೆದ ಹತ್ತು ವರ್ಷದಲ್ಲಿ ಭಾರತದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಅದು ಆಗದೇ ಪಕೋಡಾ ಮಾರಲು ಹೋಗಿ ಎಂದು ಹೇಳಿದ್ದರು. ಹೀಗಿದ್ದರೂ ಸಹ 'ಮೋದಿ.. ಮೋದಿ...' ಎಂದು ಕೂಗುವ ಯುವಕರಿಗೆ ಕಪಾಳಕ್ಕೆ ಹೊಡೆಯಬೇಕು ಎಂದಿದ್ದರು. ಸಚಿವರ ಈ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಚೋದನಕಾರಿ ಹೇಳಿಕೆ: ಚುನಾವಣಾ ನಿಷೇಧಕ್ಕೆ ಆಗ್ರಹ
ಪ್ರಧಾನಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಶಿವರಾಜ್ ತಂಗಡಗಿ ಅವರ ವಿರುದ್ಧ ಸೋಮವಾರ ಬಿಜೆಪಿ ನಾಯಕ ನಿಯೋಗವು ಬೆಂಗಳೂರಿನ ಚುನಾವಣಾ ಆಯೋಗದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಶಿವರಾಜ್ ತಂಗಡಗಿಯನ್ನು ಚುನಾವಣೆಯ ಪ್ರಚಾರದಿಂದ ನಿರ್ಬಂಧಿಸಬೇಕು ಎಂದು ದೂರಿನ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಚಿವರನ್ನು ಚುನಾವಣ ಪ್ರಕ್ರಿಯೆಯಿಂದ ನಿಷೇಧಿಸುವಂತೆ ಆಯೋಗಕ್ಕೆ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.
ಸಚಿವರ ವಿವಾದತ್ಮಕ ಹೇಳಿಕೆ ಖಂಡಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಲೋಕಸಭಾ ಚುನಾವಣೆ ನಡೆಯಲಿದೆ. ಕೆಲವೇ ದಿನ ಕಾದು ನೋಡಿ, ರಾಜ್ಯ ಜನರೇ ಕಾಂಗ್ರೆಸ್‌ಗೆ ಪರೋಕ್ಷವಾಗಿ ಕಪಾಳಕ್ಕೆ ಹೊಡೆಯುತ್ತಾರೆ ಎಂದರು. ಈ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿದೆ ಎಂದು ಅವರು ಹೇಳುವ ಮೂಲಕ ತಿರುಗೇಟು ಕೊಟ್ಟರು.
ಪಾಠ ಕಲಿಯದ ಕಾಂಗ್ರೆಸ್‌ಗೆ ಶಾಶ್ವತ ಮೋಕ್ಷ
ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ವಿರುದ್ಧ ಹರಿಹಾಯ್ದ ವಿಪಕ್ಷ ನಾಯಕ ಆರ್.ಅಶೋಕ್ ಅವರು ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಚುನಾವಣೆ ಬಂದಾಗಲೆಲ್ಲಾ ಸೋಲಿನ ಹತಾಶೆಯಿಂದ ಪ್ರಧಾನಿ ಮೋದಿ ಅವರ ವಿರುದ್ಧ ನಾಲಿಗೆ ಹರಿ ಬಿಡುವುದು ಕಾಂಗ್ರೆಸ್ ನಾಯಕರಿಗೆ ಚಾಳಿ ಆಗಿಬಿಟ್ಟಿದೆ. 2014 ಮತ್ತು 2019 ರಲ್ಲಿ ಈ ದೇಶದ ಜನ ಕಾಂಗ್ರೆಸ್ ಪಕ್ಷಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ. ಆದರೂ ಪಾಠ ಕಲಿಯದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಶಾಶ್ವತವಾದ ಮೋಕ್ಷ ಕಾಣಿಸುವುದು ಕಟ್ಟಿಟ್ಟ ಬುತ್ತಿ ಎಂದು ಅವರು ಲೇವಡಿ ಮಾಡಿದರು.
ಹೇಳಿಕೆಗೆ ವ್ಯಾಪಕ ಖಂಡನೆ, ಆಕ್ರೋಶ ವ್ಯಕ್ತವಾದ ಬಳಿಕ ಪ್ರತಿಕ್ರಿಯಿಸಿರುವ ಸಚಿವ ಶಿವರಾಜ್ ತಂಗಡಗಿ ಅವರು, ನಾನೇನು ಸಿಟಿ ರವಿ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿಲ್ಲ. ನನ್ನ ಹೇಳಿಕೆ ಪೂರ್ಣ ತಿಳಿದುಕೊಂಡು ಮಾತನಾಡಿ. ಕೆಲವು ಯುವಕರೇ ನನ್ನ ಹೇಳಿಕೆ ಒಪ್ಪಿಕೊಂಡಿದ್ದಾರೆ. ನನ್ನ ಹೇಳಿಕೆಗೆ ಈಗಲೂ ನಾನು ಬದ್ಧ ಎಂದರು.












Click it and Unblock the Notifications