ಸಿದ್ದಗಂಗಾ ಶ್ರೀ ಲಿಂಗೈಕ್ಯ : ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಮಂಗಳವಾರ ರಜಾ ಘೋಷಣೆ
ಬೆಂಗಳೂರು, ಜನವರಿ 21 : ಸೋಮವಾರ ಜನವರಿ 21ರಂದು ಬೆಳಿಗ್ಗೆ 11.44ಕ್ಕೆ ಅಗಲಿದ ಶ್ರೀ ಶಿವಕುಮಾರ ಸ್ವಾಮೀಜಿ (111) ಅವರ ಗೌರವಾರ್ಥವಾಗಿ ಬೆಂಗಳೂರಿನ ಖಾಸಗಿ ಶಾಲೆಗಳು ಕೂಡ ಜನವರಿ 22, ಮಂಗಳವಾರದಂದು ರಜಾ ಘೋಷಣೆ ಮಾಡಿವೆ.
ಜನವರಿ 22, ಮಂಗಳವಾರದಂದು ಸಿದ್ದಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರು ಅಂತ್ಯ ಸಂಸ್ಕಾರ ತುಮಕೂರಿನ ಮಠದಲ್ಲಿಯ ಆವರಣದಲ್ಲಿಯೇ ನೆರವೇರಲಿದೆ. ಸಂಜೆ 4.30ಕ್ಕೆ ಅಂತ್ಯ ಸಂಸ್ಕಾರ ನೆರವೇರಲಿದ್ದರೆ, ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.
ಶಿವಕುಮಾರ ಶ್ರೀಗಳಿಗೆ ಮಕ್ಕಳೆಂದರೆ ಅಪಾರ ಪ್ರೀತಿ. ನಿತ್ಯ ವಿದ್ಯಾರ್ಜನೆ ಮಾಡುವ ಮಕ್ಕಳೊಂದಿಗೆ ಶ್ರೀಗಳು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅದನ್ನು ನೋಡುವುದೇ ಒಂದು ಆನಂದದಾಯಕ ಸಂಗತಿಯಾಗಿರುತ್ತಿತ್ತು. ಇದೀಗ ಲಕ್ಷಾಂತರ ಮಕ್ಕಳು ನಡೆದಾಡುವ ದೇವರಿಲ್ಲದೆ ಅನಾಥರಾಗಿದ್ದಾರೆ. ಆದರೆ, ಈ ಮಕ್ಕಳನ್ನು ಶ್ರೀಗಳು ಸನ್ಮಾರ್ಗದಲ್ಲಿ ಎಂದಿಗೂ ನಡೆಸುತ್ತಿರುತ್ತಾರೆ.

ಸಿದ್ದಗಂಗಾಶ್ರೀಗಳ ನಿಧನವಾರ್ತೆ ತಡವಾಗಿ ಘೋಷಿಸಿದ ಕಾರಣ ಬಹಿರಂಗ!
ಅಚ್ಚರಿಯ ಸಂಗತಿಯೆಂದರೆ, ಈ ಮಕ್ಕಳ ಅನ್ನ ದಾಸೋಹಕ್ಕೆ ಅಡ್ಡಿಯಾಗಬಾರದೆಂದು, ಒಂದು ವೇಳೆ ತಾವು ಲಿಂಗೈಕ್ಯರಾದರೂ ಅದರ ಪ್ರಕಟಣೆಯನ್ನ ಅನ್ನ ದಾಸೋಹದ ನಂತರವೇ ಪ್ರಕಟಿಸಬೇಕೆಂದು ಕಿರಿಯ ಶ್ರೀಗಳಿಗೆ ತಿಳಿಸಿದ್ದರು. ಶ್ರೀಗಳ ಅಂತಿಮ ಇಚ್ಛೆಯಂತೆ ಮಕ್ಕಳ ಅನ್ನ ದಾಸೋಹದ ನಂತರವೇ ಶ್ರೀಗಳ ನಿಧನದ ಸುದ್ದಿಯನ್ನು ಪ್ರಕಟಿಸಲಾಯಿತು. ಶ್ರೀಗಳು ಸಾಯುವಾಗಲೂ ಮಾನವೀಯತೆ ಮೆರೆದಿದ್ದಾರೆ.
ಇಂತಹ ತ್ರಿವಿಧ ದಾಸೋಹಿ(ಅನ್ನ, ಅಕ್ಷರ, ಜ್ಞಾನ)ಯ ಗೌರವಾರ್ಥವಾಗಿ ಮಂಗಳವಾರ ರಾಜ್ಯದ ಎಲ್ಲ ಸರಕಾರಿ ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಎರಡು ದಿನಗಳ ರಜಾ ಘೋಷಿಸಲಾಗಿದೆ. ಬೆಂಗಳೂರಿನ ಖಾಸಗಿ ಶಾಲೆಗಳು ಕೂಡ ಮಂಗಳವಾರ ಶಾಲೆಗೆ ರಜಾ ನೀಡುವುದಾಗಿ ಪ್ರಕಟಿಸುತ್ತಿವೆ. ಖಾಸಗಿ ಶಾಲಾ ಸಂಘಟನೆಯಾದ ಕುಸ್ಮಾ, ಬೆಂಗಳೂರಿನಲ್ಲಿ ಎಲ್ಲ ಖಾಸಗಿ ಶಾಲೆಗಳಿಗೆ ರಜಾ ನೀಡುವುದಾಗಿ ಪ್ರಕಟಿಸಿತ್ತು.












Click it and Unblock the Notifications